೨೬ರಂದು ಮತದಾನಕ್ಕೆ ಸಕಲ ಸಿದ್ಧತೆ

| Published : Apr 24 2024, 02:18 AM IST

ಸಾರಾಂಶ

ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ೨೨- ಚಾಮರಾಜನಗರ (ಪ.ಜಾ) ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಏಪ್ರಿಲ್ ೨೬ರಂದು ನಡೆಯಲಿರುವ ಮತದಾನಕ್ಕೆ ಜಿಲ್ಲೆಯಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ೨೨- ಚಾಮರಾಜನಗರ (ಪ.ಜಾ) ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಏಪ್ರಿಲ್ ೨೬ರಂದು ನಡೆಯಲಿರುವ ಮತದಾನಕ್ಕೆ ಜಿಲ್ಲೆಯಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮತದಾನ ಪೂರ್ವ ಸಿದ್ಧತೆಗಳ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ೯೮೩ ಮತ್ತು ಮೈಸೂರು ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿನ ೧,೦೧೭ ಮತಗಟ್ಟೆಗಳು ಸೇರಿದಂತೆ ಒಟ್ಟು ೨ ಸಾವಿರ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ೨೮೨, ನಂಜನಗೂಡು ೨೪೬, ವರುಣ ೨೬೧ ಹಾಗೂ ಟಿ.ನರಸೀಪುರ ೨೨೮ ಸೇರಿದಂತೆ ಒಟ್ಟು ೧,೦೧೭ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ೨೫೪, ಕೊಳ್ಳೇಗಾಲ ೨೪೧, ಚಾಮರಾಜನಗರ ೨೩೯ ಹಾಗೂ ಗುಂಡ್ಲುಪೇಟೆ ೨೪೯ ಸೇರಿದಂತೆ ಒಟ್ಟು ೯೮೩ ಮತಗಟ್ಟೆಗಳು ಇವೆ. ಒಟ್ಟಾರೆ ಮತಗಟ್ಟೆಗಳ ಪೈಕಿ ೨೬೩ ಮತಗಟ್ಟೆಗಳು ನಗರ ಪ್ರದೇಶದಲ್ಲಿ ಹಾಗೂ ೧,೭೩೭ ಮತಗಟ್ಟೆಗಳು ಗ್ರಾಮೀಣ ಪ್ರದೇಶದಲ್ಲಿವೆ ಎಂದರು.

ಜಿಲ್ಲೆಯ ೪ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ೯೮೩ ಮತಗಟ್ಟೆಗಳ ಪೈಕಿ ೧೯೭ ಮತಗಟ್ಟೆಗಳನ್ನು ಸೂಕ್ಷ್ಮ (ಕ್ರಿಟಿಕಲ್) ಮತಗಟ್ಟೆಗಳಾಗಿ ಗುರುತಿಸಲಾಗಿದ್ದು, ಚುನಾವಣೆಯನ್ನು ಶಾಂತಿಯುತ, ಪಾರದರ್ಶಕ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜಿಲ್ಲೆಯಾದ್ಯಂತ ಒಟ್ಟು ೧,೬೬೭ ಪೊಲೀಸ್ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.

ಲಿಂಗ ಸಮಾನತೆ ಮತ್ತು ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಸಖಿ ಶೀರ್ಷಿಕೆಯಡಿ ವಿಶೇಷ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಮತಗಟ್ಟೆಗಳನ್ನು ವಿಶೇಷವಾಗಿ ಅಲಂಕರಿಸಿ ಮಹಿಳಾ ಮತದಾರರನ್ನು ಮತದಾನಕ್ಕೆ ಪ್ರೇರೇಪಿಸಲು ಸಖಿ ಸೌರಭ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ೪ ಮತಗಟ್ಟೆಗಳಂತೆ ಒಟ್ಟು ೧೬ ಸಖಿ ಸೌರಭ ಮತಗಟ್ಟೆಗಳನ್ನು ತೆರೆಯಲಾಗಿದೆ. ಬುಡಕಟ್ಟು ಜನರ ಮತದಾನಕ್ಕೆ ಪ್ರೇರೇಪಿಸಲು ಆದ್ಯತೆ ನೀಡಲಾಗಿದೆ. ಗುಂಡ್ಲುಪೇಟೆ ತಾಲೂಕಿನಲ್ಲಿ ೨ ಸಾಂಪ್ರದಾಯಿಕ ಬುಡಕಟ್ಟು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಿಶೇಷಚೇತನರಿಗೆ ಅನುಕೂಲವಾಗುವಂತೆ 4 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ೧ರಂತೆ ೪ ವಿಶೇಷಚೇತನರ ಮತಗಟ್ಟೆಗಳನ್ನು ತೆರೆಯಲಾಗಿದೆ. ಯುವ ಮತದಾರರನ್ನು ಮತದಾನದೆಡೆ ಸೆಳೆಯಲು ಪ್ರತೀ ವಿಧಾನಸಭಾ ಕ್ಷೇತ್ರಗಳಿಗೆ ತಲಾ ೨ರಂತೆ ಒಟ್ಟು ೮ ಯುವ ಸೌರಭ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದರು.

ಸಾಂಪ್ರದಾಯಿಕ ಮತಗಟ್ಟೆ:

ಜಿಲ್ಲೆಯ ಸಾಂಸ್ಕೃತಿಕ ಕಲೆಗಳ ಮಹತ್ವ ತಿಳಿಸಲು ಹನೂರು, ಚಾ.ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದೊಂದು ಸಾಂಪ್ರದಾಯಿಕ ಮತಗಟ್ಟೆ ತೆರೆಯಲಾಗಿದೆ. ರೈತರ ಮಹತ್ವವನ್ನು ಬಿಂಬಿಸುವ ಅನ್ನದಾತ ಮತಗಟ್ಟೆಗಳನ್ನು ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ೨ರಂತೆ ಒಟ್ಟು ೮ ಅನ್ನದಾತ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅರಣ್ಯ ಮಹತ್ವ ತಿಳಿಸಲು ಹನೂರು ವಿಧಾನಸಭಾ ಕ್ಷೇತ್ರದಲ್ಲಿ ೧, ಕೊಳ್ಳೇಗಾಲ ೧, ಚಾ.ನಗರ ೨ ಹಾಗೂ ಗುಂಡ್ಲುಪೇಟೆ ೨ ಸೇರಿದಂತೆ ಒಟ್ಟು ೬ ಹಸಿರು ಮತಗಟ್ಟೆಗಳನ್ನು ತೆರೆಯಲಾಗಿದೆ ಎಂದರು.

ನೈತಿಕ ಮತದಾನ ಬೆಂಬಲಿಸುವಂತೆ ಚಲನಚಿತ್ರ ನಟ, ನಾಗಭೂಷಣ್, ಬಿಗ್ ಬಾಸ್ ೧೦ರ ವಿಜೇತ ಕಾರ್ತಿಕ್ ಮಹೇಶ್‌ರನ್ನು ಜಿಲ್ಲಾ ಯುವ ಚುನಾವಣಾ ರಾಯಭಾರಿ, ಮೈಸೂರು ವಿವಿ ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ಸಂಶೋಧಕರು, ಸಮತಾ ಸೊಸೈಟಿಯ ಅಧ್ಯಕ್ಷೆ ದೀಪಾ ಬುದ್ದೆ ಅವರನ್ನು ಜಿಲ್ಲೆಯ ತೃತೀಯ ಲಿಂಗಿಗಳ ರಾಯಭಾರಿಯಾಗಿ ನೇಮಕ ಮಾಡಿಕೊಳ್ಳಲಾಗಿದೆ. 17.78 ಲಕ್ಷ ಮತದಾರರು :ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೮,೭೮,೭೦೨ ಪುರುಷರು, ೮,೯೯,೫೦೧ ಮಹಿಳೆಯರು, ೧೦೭ ಇತರರು ಸೇರಿದಂತೆ ಒಟ್ಟು ೧೭,೭೮,೩೧೦ ಮತದಾರರಿದ್ದಾರೆ. ಅಲ್ಲದೇ ೩೪೪ ಪುರುಷರು ಹಾಗೂ ೧೩ ಮಹಿಳಾ ಮತದಾರರು ಸೇರಿದಂತೆ ಒಟ್ಟು ೩೫೭ ಸೇವಾ ಮತದಾರರಿದ್ದಾರೆ. ಎಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ೧,೧೪,೦೪೧ ಪುರುಷರು, ೧,೧೪,೫೬೦ ಮಹಿಳೆಯರು, ೧೨ ಇತರರು ಸೇರಿದಂತೆ ಒಟ್ಟು ೨,೨೮,೬೧೩ ಮತದಾರರಿದ್ದಾರೆ. ನಂಜನಗೂಡು ೧,೧೦,೩೬೯ ಪುರುಷರು, ೧,೧೨,೩೮೧ ಮಹಿಳೆಯರು, ೭ ಇತರರು ಸೇರಿದಂತೆ ಒಟ್ಟು ೨,೨೨,೭೫೭ ಮತದಾರರಿದ್ದಾರೆ. ವರುಣ ೧,೧೯,೫೪೫ ಪುರುಷರು, ೧,೨೧,೩೯೧ ಮಹಿಳೆಯರು, ೧೩ ಇತರರು ಸೇರಿದಂತೆ ಒಟ್ಟು ೨,೪೦,೯೪೯ ಮತದಾರರಿದ್ದಾರೆ. ಟಿ.ನರಸೀಪುರ ೧,೦೩,೧೨೧ ಪುರುಷರು, ೧,೦೬,೪೧೩ ಮಹಿಳೆಯರು, ೧೩ ಇತರರು ಸೇರಿದಂತೆ ಒಟ್ಟು ೨,೦೯,೫೪೭ ಮತದಾರರಿದ್ದಾರೆ. ಹನೂರು ವಿಧಾನಸಭಾ ಕ್ಷೇತ್ರದಲ್ಲಿ ೧,೧೨,೮೮೦ ಪುರುಷರು, ೧,೧೧,೭೯೩ ಮಹಿಳೆಯರು, ೧೦ ಇತರರು ಸೇರಿದಂತೆ ಒಟ್ಟು ೨,೨೪,೬೮೩ ಮತದಾರರಿದ್ದಾರೆ. ಕೊಳ್ಳೇಗಾಲ ೧,೦೮,೦೫೬ ಪುರುಷರು, ೧,೧೧,೯೮೮ ಮಹಿಳೆಯರು, ೨೧ ಇತರರು ಸೇರಿದಂತೆ ಒಟ್ಟು ೨,೨೦,೦೬೫ ಮತದಾರರಿದ್ದಾರೆ. ಚಾಮರಾಜನಗರ ೧,೦೪,೯೦೩ ಪುರುಷರು, ೧,೧೦,೫೧೭ ಮಹಿಳೆಯರು, ೧೫ ಇತರರು ಸೇರಿದಂತೆ ಒಟ್ಟು ೨,೧೫,೪೩೫ ಮತದಾರರಿದ್ದಾರೆ. ಗುಂಡ್ಲುಪೇಟೆ ೧,೦೫,೭೮೭ ಪುರುಷರು, ೧,೧೦,೪೫೮ ಮಹಿಳೆಯರು, ೧೬ ಇತರರು ಸೇರಿದಂತೆ ಒಟ್ಟು ೨,೧೬,೨೬೧ ಮತದಾರರಿದ್ದಾರೆ ಎಂದು ವಿವರಿಸಿದರು.

ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತಿದ್ದು ೨ ಸಾವಿರ ಮತಗಟ್ಟೆಗಳಿಗೆ ೨,೫೫೯ ಬ್ಯಾಲೆಟ್ ಯೂನಿಟ್ (ಬಿಯು), ೨,೬೧೮ ಕಂಟ್ರೋಲ್ ಯೂನಿಟ್ (ಸಿಯು), ೨,೭೯೨ ವಿವಿ ಪ್ಯಾಡ್ ಹಂಚಿಕೆ ಮಾಡಲಾಗಿದೆ. ಜಿಲ್ಲೆಯ ಒಟ್ಟು ೯೮೩ ಮತಗಟ್ಟೆಗಳಿಗೆ ೧,೧೯೬ ಪಿ.ಆರ್.ಒ, ೧,೧೯೬ ಎ.ಪಿ.ಆರ್.ಒ, ೨,೩೯೨ ಪಿ.ಒ ಸೇರಿದಂತೆ ಒಟ್ಟು ೪,೭೮೪ ಅಧಿಕಾರಿ ಸಿಬ್ಬಂದಿ ನಿಯೋಜಿಸಲಾಗಿದೆ. ಸದರಿ ಅಧಿಕಾರಿ ಸಿಬ್ಬಂದಿಗಳಿಗೆ ೨ ಹಂತದಲ್ಲಿ ತರಬೇತಿ ನೀಡಲಾಗಿದೆ ಎಂದರು.

ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳಿಗೆ ವಿವಿಧ ಚುನಾವಣಾ ಕೆಲಸ ಕಾರ್ಯಗಳಿಗಾಗಿ ನೇಮಕವಾಗಿರುವ ಅಧಿಕಾರಿ ಸಿಬ್ಬಂದಿಗಳಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೫,೨೨೨ ಅಂಚೆ ಮತಪತ್ರಗಳನ್ನು ನೀಡಲಾಗಿದೆ. ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಮನೆಯಲ್ಲಿಯೇ ಮತದಾನದ ವ್ಯವಸ್ಥೆ ಕಲ್ಪಿಸಲಾಗಿದ್ದು, ಈ ಸಂಬಂಧ ಒಟ್ಟು ೧,೩೭೨ ಮತದಾರರು ಮತ ಚಲಾಯಿಸಿದ್ದಾರೆ. ಚುನಾವಣಾ ಕರ್ತವ್ಯನಿರತ ಅಧಿಕಾರಿ ಸಿಬ್ಬಂದಿಗೆ ಏ.೨೩ರವರೆಗೆ ೬,೪೩೮ ಇಡಿಸಿ ಪ್ರಮಾಣ ಪತ್ರಗಳನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ೮೫ ವರ್ಷ ಮೇಲ್ಪಟ್ಟ ೧೧,೩೪೧ ಹಿರಿಯ ನಾಗರಿಕ ಮತದಾರರನ್ನು ಗುರುತಿಸಲಾಗಿದೆ. ಈ ಪೈಕಿ ೮,೦೭೫ ಹಿರಿಯ ನಾಗರಿಕರಿಗೆ ನಮೂನೆ-೧೨ ಡಿ ವಿತರಿಸಲಾಗಿದ್ದು, ನಮೂನೆ-೧೨ಡಿ ಪಡೆದಿರುವರ ಪೈಕಿ ೩೫೦ ಮಂದಿ ಹಿರಿಯ ನಾಗರಿಕರು ಮನೆಯಲ್ಲಿಯೇ ಮತದಾನ ಮಾಡಿದ್ದು, ಉಳಿದವರು ಮತಗಟ್ಟೆಗೆ ಬಂದು ಮತ ಚಲಾಯಿಸಲಿದ್ದಾರೆ ಎಂದು ತಿಳಿಸಿದರು.

ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್:ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸೆಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ, ನಂಜನಗೂಡು ವಿಧಾನಸಭಾ ಕ್ಷೇತ್ರದ ನಂಜನಗೂಡು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ವರುಣ ವಿಧಾನಸಭಾ ಕ್ಷೇತ್ರಕ್ಕಾಗಿ ನಂಜನಗೂಡು ತಾಲೂಕು ದೇವಿರಮ್ಮನ ಹಳ್ಳಿಯ ಜೆಎಸ್‌ಎಸ್ ಕಾಲೇಜು, ಟಿ.ನರಸೀಪುರ ವಿಧಾನಸಭಾ ಕ್ಷೇತ್ರದ ಟಿ.ನರಸೀಪುರ ವಿದ್ಯೋದಯ ಪದವಿ ಪೂರ್ವ ಕಾಲೇಜು, ಹನೂರಿನ ಕ್ರಿಸ್ತರಾಜ ಎಜುಕೇಷನ್ ಟ್ರಸ್ಟ್, ಕೊಳ್ಳೇಗಾಲದ ಮಹದೇಶ್ವರ ಪ್ರಥಮ ದರ್ಜೆ ಕಾಲೇಜು, ಚಾ.ನಗರದ ಕರಿನಂಜನಪುರ ರಸ್ತೆಯಲ್ಲಿರುವ ಸರ್ಕಾರಿ ಕಾಲೇಜು, ಗುಂಡ್ಲುಪೇಟೆ-ಊಟಿ ರಸ್ತೆಯಲ್ಲಿರುವ ಸೆಂಟ್ ಜಾನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಸ್ಟರಿಂಗ್, ಡಿಮಸ್ಟರಿಂಗ್ ನಡೆಯಲಿದೆ. 8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ಚಾಮರಾಜನಗರದ ಬೇಡರಪುರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜೂ.೪ರಂದು ನಡೆಯಲಿದೆ ಎಂದರು. ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಎಸ್ಪಿ ಪದ್ಮಿನಿ ಸಾಹು, ಎಡಿಸಿ ಗೀತಾ ಹುಡೇದ ಪತ್ರಿಕಾಗೋಷ್ಠಿಯಲ್ಲಿ ಇದ್ದರು.