ವೀರ ಶಿರೋಮಣಿ ಮಹಾರಾಣಾ ಪ್ರತಾಪಸಿಂಹ ಅವರ ಭವ್ಯ ಕಂಚಿನ ಮೂರ್ತಿ ಅನಾವರಣಕ್ಕೆ ಕ್ಷಣಗಣನೆ ಆರಂಭವಾಗಿದೆ. ನ.15ರಂದು ನಡೆಯಲಿರುವ ಈ ಐತಿಹಾಸಿಕ ಕಾರ್ಯಕ್ರಮಕ್ಕಾಗಿ ಪಟ್ಟಣದಾದ್ಯಂತ ಭರದ ಸಿದ್ಧತೆಗಳು ನಡೆದಿದ್ದು, ಇಡೀ ನಗರ ಕೇಸರಿಮಯವಾಗಿದೆ. ಮಹಾರಾಣಾ ಪ್ರತಾಪಸಿಂಹರ ಶೌರ್ಯ, ಸ್ವಾಭಿಮಾನ ಮತ್ತು ದೇಶಪ್ರೇಮದ ಸ್ಮರಣೆಯನ್ನು ಶಾಶ್ವತಗೊಳಿಸುವ ಉದ್ದೇಶದಿಂದ ರಾಜಪೂತ ಸಮಾಜದ ಮುಖಂಡರು, ಯುವಕರು ಹಾಗೂ ದಾನಿಗಳು ಒಗ್ಗೂಡಿ ಈ ಬೃಹತ್ ಕಾರ್ಯವನ್ನು ಸಾಕಾರಗೊಳಿಸಿದ್ದಾರೆ.

ಪ್ರವೀಣ್ ಘೋರ್ಪಡೆ

ಕನ್ನಡಪ್ರಭ ವಾರ್ತೆ ತಾಳಿಕೋಟೆವೀರ ಶಿರೋಮಣಿ ಮಹಾರಾಣಾ ಪ್ರತಾಪಸಿಂಹ ಅವರ ಭವ್ಯ ಕಂಚಿನ ಮೂರ್ತಿ ಅನಾವರಣಕ್ಕೆ ಕ್ಷಣಗಣನೆ ಆರಂಭವಾಗಿದೆ. ನ.15ರಂದು ನಡೆಯಲಿರುವ ಈ ಐತಿಹಾಸಿಕ ಕಾರ್ಯಕ್ರಮಕ್ಕಾಗಿ ಪಟ್ಟಣದಾದ್ಯಂತ ಭರದ ಸಿದ್ಧತೆಗಳು ನಡೆದಿದ್ದು, ಇಡೀ ನಗರ ಕೇಸರಿಮಯವಾಗಿದೆ. ಮಹಾರಾಣಾ ಪ್ರತಾಪಸಿಂಹರ ಶೌರ್ಯ, ಸ್ವಾಭಿಮಾನ ಮತ್ತು ದೇಶಪ್ರೇಮದ ಸ್ಮರಣೆಯನ್ನು ಶಾಶ್ವತಗೊಳಿಸುವ ಉದ್ದೇಶದಿಂದ ರಾಜಪೂತ ಸಮಾಜದ ಮುಖಂಡರು, ಯುವಕರು ಹಾಗೂ ದಾನಿಗಳು ಒಗ್ಗೂಡಿ ಈ ಬೃಹತ್ ಕಾರ್ಯವನ್ನು ಸಾಕಾರಗೊಳಿಸಿದ್ದಾರೆ.ಮೂರ್ತಿ ಅನಾವರಣ ಸಮಾರಂಭದ ಹಿನ್ನೆಲೆಯಲ್ಲಿ ನಗರದ ಎಸ್.ಕೆ.ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ಹಾಗೂ ವಿಶಾಲ ಪೆಂಡಾಲ್ ನಿರ್ಮಿಸಲಾಗಿದೆ. ಸುಮಾರು ೧೫೦X೩೦೦ ಅಡಿ ವಿಸ್ತೀರ್ಣದ ಪೆಂಡಾಲ್ ನಿರ್ಮಿಸಲಾಗಿದೆ. ೬೦X೩೦ ಅಡಿ ಅಳತೆಯ ವೇದಿಕೆ ಸಿದ್ಧಪಡಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರು ಹಾಗೂ ಸಾವಿರಾರು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಸಂಸದ ಅನುರಾಗ್‌ಸಿಂಗ್ ಠಾಕೂರ್, ಸಚಿವ ಅಜಯ್ ಧರ್ಮಸಿಂಗ್ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆ.೧೨.೫೦ ಅಡಿ ಎತ್ತರದ ಮೂರ್ತಿ:

ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಮಹಾರಾಣಾ ಪ್ರತಾಪಸಿಂಹ ವೃತ್ತದಲ್ಲಿ ೧೨.೫೦ ಅಡಿ ಎತ್ತರದ ಭವ್ಯ ಕಂಚಿನ ಮೂರ್ತಿ ಇದಾಗಿದೆ. ೧೮X೧೦ ಅಡಿ ವಿಸ್ತೀರ್ಣದ ವೃತ್ತದಲ್ಲಿ ಪಶ್ಚಿಮಾಭಿಮುಖವಾಗಿ ಮೂರ್ತಿಯನ್ನು ಸ್ಥಾಪಿಸಲಾಗುತ್ತಿದೆ.ಏಳು ದಾನಿಗಳಿಂದ ₹೩೫ ಲಕ್ಷ ದೇಣಿಗೆ:

ಮಹಾರಾಣಾ ಪ್ರತಾಪಸಿಂಹರ ಮೂರ್ತಿ ಪ್ರತಿಷ್ಠಾಪನೆ ಹಾಗೂ ವೃತ್ತ ನಿರ್ಮಾಣದ ಕಾರ್ಯಕ್ಕೆ ಸಮಾಜದ ಏಳು ಪ್ರಮುಖ ದಾನಿಗಳು ತಲಾ ₹5 ಲಕ್ಷಗಳಂತೆ ಒಟ್ಟು ₹೩೫ ಲಕ್ಷಗಳ ದೇಣಿಗೆ ನೀಡಿದ್ದಾರೆ. ದೇಣಿಗೆ ನೀಡಿದವರಲ್ಲಿ ವಿಜಯಸಿಂಗ್ ದಿಲೀಪಸಿಂಗ್ ಹಜೇರಿ, ಬಾಲಾಜಿಸಿಂಗ್ ಮಾದುಸಿಂಗ್ ಹಜೇರಿ, ಸಂಜೀವಕುಮಾರ ಲಕ್ಷ್ಮಣಸಿಂಗ್ ಹಜೇರಿ, ದಿ. ಬಿಂದಾಬಾಯಿ ಅಂಬರಸಿಂಗ್ ಹಜೇರಿ ಅವರ ಸ್ಮರಣಾರ್ಥ, ದಿ. ಶಾಂತಾಬಾಯಿ ವಿಠ್ಠಲಸಿಂಗ್ ಮೂಲಿಮನಿ ಅವರ ಸ್ಮರಣಾರ್ಥ, ದಿ.ವಿಠ್ಠಲಸಿಂಗ್ ಅಮರಸಿಂಗ್ ಹಜೇರಿ ಸ್ಮರಣಾರ್ಥ ಹಾಗೂ ದಿ ಮಾಧುಸಿಂಗ್ ಸತ್ಯನಾರಾಯಣಸಿಂಗ್ ವಿಜಾಪೂರ ಅವರ ಸ್ಮರಣಾರ್ಥ ದೇಣಿಗೆ ನೀಡಲಾಗಿದೆ.ಕೇಸರಿಮಯವಾದ ಪಟ್ಟಣ:

ಮಹಾರಾಣಾ ಪ್ರತಾಪಸಿಂಹರ ಮೂರ್ತಿ ಅನಾವರಣದ ಸಂಭ್ರಮಕ್ಕಾಗಿ ತಾಳಿಕೋಟೆ ಪಟ್ಟಣವನ್ನು ಮಧುವಣಗಿತ್ತಿಯಂತೆ ಸಿಂಗರಿಸಲಾಗಿದೆ. ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಹಾಗೂ ಕಟ್ಟಡಗಳ ಸುತ್ತಮುತ್ತ ಕೇಸರಿ ಧ್ವಜಗಳು ರಾರಾಜಿಸುತ್ತಿವೆ. ಸ್ವಾಗತ ಕಮಾನುಗಳು, ಬ್ಯಾನರ್‌ಗಳು ಹಾಗೂ ವಿವಿಧ ಅಲಂಕಾರಗಳು ನಗರದ ಹಬ್ಬದ ವಾತಾವರಣವನ್ನು ಮತ್ತಷ್ಟು ಹೆಚ್ಚಿಸಿವೆ.ಮೂರ್ತಿ ಅನಾವರಣ ಸಮಾರಂಭದ ಅಂಗವಾಗಿ ಬೆಳಗ್ಗೆ 8 ಗಂಟೆಗೆ ರಾಜಪೂತ ಸಮಾಜದ ಭವನದಿಂದ ಮಹಾರಾಣಾ ಪ್ರತಾಪಸಿಂಹರ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆಯಲ್ಲಿ ಮುಂಬೈ ಮೂಲದ ಅಘೋರಿಗಳ ತಂಡದಿಂದ ವಿಶೇಷ ನೃತ್ಯ ಪ್ರದರ್ಶನ ನಡೆಯಲಿದ್ದು, ನಾಸಿಕ್ ಡೋಲ್ ಸೇರಿದಂತೆ ವಿವಿಧ ವಾದ್ಯಮೇಳಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಲಿವೆ. ಮಹಾರಾಣಾ ಪ್ರತಾಪಸಿಂಹರ ಭವ್ಯ ಕಂಚಿನ ಮೂರ್ತಿ ಅನಾವರಣವು ತಾಳಿಕೋಟೆ ನಗರದ ಇತಿಹಾಸದಲ್ಲಿ ಸ್ಮರಣೀಯ ಕ್ಷಣವಾಗಲಿದೆ. ಶೌರ್ಯ, ಸ್ವಾಭಿಮಾನ, ತ್ಯಾಗ ಮತ್ತು ದೇಶಪ್ರೇಮದ ಪ್ರತೀಕವಾಗಿರುವ ಮಹಾರಾಣಾ ಪ್ರತಾಪಸಿಂಹರ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಗ್ರಾಮಗಳು ಹಾಗೂ ವಿವಿಧ ಭಾಗಗಳಿಂದ ಸುಮಾರು ೭ ಸಾವಿರಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆಯಿದೆ. ಸಮಾರಂಭಕ್ಕೆ ತಾಳಿಕೋಟೆ ನಗರ ಸರ್ವ ರೀತಿಯಲ್ಲೂ ಸಜ್ಜಾಗಿದೆ.

- ಹರಿಸಿಂಗ್ ಮೂಲಿಮನಿ, ರಾಜಪೂತ ಸಮಾಜದ ಅಧ್ಯಕ್ಷರು.