ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಬೇಸಿಗೆ ರಜೆ ಮುಗಿದಿದ್ದು ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಾಲೆಗಳಲ್ಲಿ ಸಕಲ ಸಿದ್ಧತೆ ನಡೆಸಿದೆ.ರಾಜ್ಯಾದ್ಯಂತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ನೀಡಿದ್ದ ಬೇಸಿಗೆ ರಜಾ ಅವಧಿ ಮುಗಿದಿದ್ದು ಎಂದಿನಂತೆ ಶಾಲೆಗಳ ಪುನರಾರಂಭವಾಗಿವೆ. ಹನೂರು ತಾಲೂಕಿನ ಶೈಕ್ಷಣಿಕ ವಲಯದ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಸಿದ್ಧತೆ ಪ್ರಾರಂಭಿಸಿದ್ದು, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿ ಸರ್ಕಾರಿ ಶಾಲೆಗಳತ್ತ ಸಾರ್ವಜನಿಕರು ತಮ್ಮ ಮಕ್ಕಳ ದಾಖಲಾತಿಗಾಗಿ ಮುಖ ಮಾಡುವಂತೆ ಮಾಡುವಲ್ಲಿ ಸರ್ಕಾರಿ ಶಾಲಾ ಶಿಕ್ಷಕರು ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಸಂಬಂಧ ಶಿಕ್ಷಕರು ಶಾಲೆಗಳಲ್ಲಿ ದಾಖಲಾತಿ ಹೆಚ್ಚಳಕ್ಕೆ ಪೂರ್ವ ತಯಾರಿ, ಶಿಕ್ಷಕರ ಸಭೆ, ಶೈಕ್ಷಣಿಕ ವರ್ಷದ ಜವಾಬ್ದಾರಿ ಹಂಚಿಕೆ, ಶಾಲಾ ವೇಳಾಪಟ್ಟಿ, ತರಗತಿ ವೇಳಾಪಟ್ಟಿ, ಹೆಚ್ಚಿನ ವ್ಯಾಸಂಗಕ್ಕಾಗಿ ಮುಂದಿನ ತರಗತಿಗೆ ಹೋಗಬಯಸುವ ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ ನೀಡುವಿಕೆ, ಶಾಲೆಯನ್ನು ಸ್ವಚ್ಚಗೊಳಿಸಿ ಆಕರ್ಷಣೀಯಗೊಳಿಸುವ ಪ್ರಕ್ರಿಯೆ, ಮಕ್ಕಳಿಗೆ ಸರ್ಕಾರದಿಂದ ಸಿಗುವಂತಹ ಉಚಿತ ಸೌಲಭ್ಯಗಳ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿಕೊಡುವುದು. ಹೀಗೆ ಮುಂತಾದ ಕೆಲಸಕಾರ್ಯಗಳಲ್ಲಿ ಹನೂರು ತಾಲೂಕಿನ ಶಿಕ್ಷಕ ಶಿಕ್ಷಕಿಯರು ಕಾರ್ಯಪ್ರವೃತ್ತ ರಾಗಿದ್ದು ಕಂಡು ಬಂತು.
ಮಕ್ಕಳು ಇದೇ ತಿಂಗಳ 31ರಂದು ಸುದೀರ್ಘ ಬೇಸಿಗೆ ರಜೆ ಮುಗಿಸಿ ಶಾಲೆಗೆ ಹಾಜರಾಗುತ್ತಿದ್ದು, ಮಕ್ಕಳನ್ನು ಖುಷಿಯಿಂದ ಹಬ್ಬದ ವಾತಾವರಣದೊಂದಿಗೆ ಶಾಲೆಗೆ ಬರಮಾಡಿಕೊಳ್ಳುವ ತಯಾರಿ ಪ್ರಕ್ರಿಯೆಯನ್ನು ಬಹುತೇಕ ಶಾಲೆಗಳು ಪ್ರಾರಂಭಿಸಿವೆ. ಇಲಾಖೆ ಆದೇಶದಂತೆ ಮೊದಲ ದಿನವೇ ಶಾಲೆಯನ್ನು ಶುಚಿಗೊಳಿಸಿ ಹಬ್ಬದಂತೆ ಮಕ್ಕಳಲ್ಲಿ ಶೈಕ್ಷಣಿಕ ಕಲಿಕೆ ಆಸಕ್ತಿ ಹೆಚ್ಚುಗೊಳಿಸಿ ಶಾಲೆಯತ್ತ ಆಕರ್ಷಿಸಲು ಶಿಕ್ಷಕರು ಸಾಕಷ್ಟು ತಯಾರಿ ನಡೆಸಿದ್ದಾರೆ.31 ರಿಂದ ಮಕ್ಕಳ ಹಾಜರಾತಿಗೆ ಸಕಲಸಿದ್ಧತೆ: ಶೈಕ್ಷಣಿಕ ವಲಯದ ಶಾಲೆಗಳಲ್ಲಿ ಬುಧವಾರ ಮತ್ತು ಗುರುವಾರ ಮಕ್ಕಳ ಹಾಜರಾತಿ ಹಾಗೂ ಮಧ್ಯಾಹ್ನ ಉಪಹಾರ ಯೋಜನೆಯಲ್ಲಿ ಯಾವುದೇ ಲೋಪದೋಷ ಉಂಟಾಗದಂತೆ ಮುನ್ನೆಚ್ಚರಿಕೆವಹಿಸಿ ಸಕಲ ಸಿದ್ಧತೆಯೊಂದಿಗೆ ಸ್ವಚ್ಛತೆ ಪರಿಶೀಲಿಸಿ ಯಾವುದೇ ಲೋಪದೋಷಗಳು ಇಲ್ಲದಂತೆ ಶಾಲೆ ಪ್ರಾರಂಭಿಸಲು ಸಕಲ ಸಿದ್ಧತಾ ಕ್ರಮ ಕೈಗೊಂಡಿರುವ ಶಿಕ್ಷಕ ವರ್ಗ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳಲು ಕಾತರದಿಂದ ಕಾದು ಕುಳಿತಂತಿದೆ. ಈ ಸಂಬಂಧ ಬಂಡಳ್ಳಿಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಶಿಕ್ಷಕರು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಚಾರ್ಟ್ ಗಳನ್ನು ಮತ್ತು ದಾಖಲಾತಿ, ಶಾಲಾ ವೇಳಾಪಟ್ಟಿ ತರಗತಿ ವೇಳಾಪಟ್ಟಿ , ಮಕ್ಕಳ ಬರಮಾಡಿಕೊಳ್ಳುವಿಕೆಗೆ ಪೂರ್ವ ತಯಾರಿ, ದಾಖಲಾತಿ ಆಂದೋಲನ ನಡೆಸಲು ತಯಾರಿ, ಶಿಕ್ಷಕರ ಸಭೆ, ಎಸ್‌ಡಿಎಂಸಿ ಸಭೆ ಮುಂತಾದ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಒಟ್ಟಾರೆ ಶೈಕ್ಷಣಿಕ ವಲಯದ ಶಾಲೆಗಳ ಶುಚಿತ್ವ ಮತ್ತು ಮಕ್ಕಳ ಆಗಮನಕ್ಕೆ ಶಿಕ್ಷಕರು ಸಕಲ ಸಿದ್ಧತೆಯಲ್ಲಿ ಕ್ರಮ ಕೈಗೊಂಡಿದ್ದಾರೆ.