2028ರೊಳಗೆ ತಾಲೂಕಿನಲ್ಲಿ ಎಲ್ಲಾ ಯೋಜನೆ ಪೂರ್ಣ: ಚಲುವರಾಯಸ್ವಾಮಿ

| Published : Sep 10 2025, 01:03 AM IST

ಸಾರಾಂಶ

ನೀರು ಹರಿಯುವ ಕಾಲುವೆಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಭೂಮಿ ಇರುವವರೆಗೂ ಎಲ್ಲಾ ಕೆರೆಗಳಿಗೂ ನೀರು ತುಂಬಿಸಬಹುದು. ಒಂದು ಬಾರಿ ಕೆರೆ ತುಂಬಿಸಿದರೆ ಮುಂದಿನ ವರ್ಷ ನೀರು ಬಾರದಿದ್ದರೂ ಸಹ ಆ ಭಾಗದ ಜನರ ಕುಡಿಯುವ ನೀರು ಮತ್ತು ವ್ಯವಸಾಯಕ್ಕೆ ತೊಂದರೆಯಾಗುವುದಿಲ್ಲ. ಆ ಕಾರಣಕ್ಕಾಗಿ ಏತ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

2028ರೊಳಗೆ ತಾಲೂಕಿನಲ್ಲಿ ಕೆರೆ ತುಂಬಿಸುವ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸುವ ಜೊತೆಗೆ ಆದ್ಯತೆ ಮೇರೆಗೆ ಶಿಥಿಲಗೊಂಡಿರುವ ಎಲ್ಲಾ ರಸ್ತೆಗಳನ್ನೂ ಸಹ ಶಕ್ತಿಮೀರಿ ಅಭಿವೃದ್ಧಿ ಪಡಿಸುತ್ತೇನೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ತಾಲೂಕಿನ ಹೆರಗನಹಳ್ಳಿಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ 990 ಲಕ್ಷ ರು. ವೆಚ್ಚದಲ್ಲಿ ಪೂರ್ಣಗೊಂಡಿರುವ ಏತನೀರಾವರಿ ಯೋಜನೆ ಪಂಪುಗಳ ಮೂಲಕ ನೀರೆತ್ತುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಕದಬಹಳ್ಳಿ ಸೇರಿದಂತೆ ಹಲವು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಉದ್ಘಾಟಿಸಿ ಮಾತನಾಡಿದರು.

ತಾಲೂಕು ಕೊನೆ ಭಾಗವಾಗಿರುವುದರಿಂದ ಸಂಪೂರ್ಣ ಹೇಮಾವತಿ ಜಲಾಶಯದ ನೀರನ್ನು ಹರಿಸಿ ಬೆಳೆಗಳಿಗೆ ಒದಗಿಸಲು ತೊಂದರೆಯಾಗುತ್ತದೆ. ನಾಲೆಗಳು ಆಧುನೀಕರಣವಾದಂತೆ ಮುಂದಿನ ನಾಲ್ಕೈದು ವರ್ಷದಲ್ಲಿ ಕನಿಷ್ಠ ಒಂದು ಬೆಳೆಗಾದರೂ ನೀರು ಸಿಗಬಹುದು ಎಂದರು.

ಈ ಹಿಂದೆ ಸಚಿವನಾಗಿದ್ದ ವೇಳೆ ಹೆರಗನಹಳ್ಳಿ ಸಮೀಪದ ಎನ್‌ಬಿಸಿ ಕಾಲುವೆಯ ಎಡಭಾಗದ ಅಚ್ಚುಕಟ್ಟಿಗೆ ಮಾತ್ರ ಅವಕಾಶವಿತ್ತು. ಬಲಭಾಗಕ್ಕೂ ಅವಕಾಶ ಕಲ್ಪಿಸುವ ಸಲುವಾಗಿ ವಿಶೇಷ ಮಂಜೂರಾತಿ ಕೊಡಿಸಿ ಈ ಭಾಗದ ಕೆರೆಗಳಿಗೂ ನೀರು ತುಂಬಿಸಲು 990 ಲಕ್ಷ ರು. ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ. ಇದರಿಂದಾಗಿ ಹೆರಗನಹಳ್ಳಿ ಸೇರಿದಂತೆ ಬಾಳೆಕಟ್ಟೆ, ಹಳ್ಳದಕಟ್ಟೆ, ಚೋಳೇನಹಳ್ಳಿ ಕಟ್ಟೆ, ನಾಗತಿಹಳ್ಳಿ ಕಟ್ಟೆ, ಕದಬಹಳ್ಳಿಯ ಸಂತೆಕಟ್ಟೆ, ಚನ್ನಮ್ಮನಕೆರೆ, ಅವ್ವೇರಹಳ್ಳಿ ಕೆರೆಗಳಿಗೆ ಏತ ನೀರಾವರಿ ಮೂಲಕ ನೀರು ತುಂಬಲಿದೆ ಎಂದರು.

ನೀರು ಹರಿಯುವ ಕಾಲುವೆಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಭೂಮಿ ಇರುವವರೆಗೂ ಎಲ್ಲಾ ಕೆರೆಗಳಿಗೂ ನೀರು ತುಂಬಿಸಬಹುದು. ಒಂದು ಬಾರಿ ಕೆರೆ ತುಂಬಿಸಿದರೆ ಮುಂದಿನ ವರ್ಷ ನೀರು ಬಾರದಿದ್ದರೂ ಸಹ ಆ ಭಾಗದ ಜನರ ಕುಡಿಯುವ ನೀರು ಮತ್ತು ವ್ಯವಸಾಯಕ್ಕೆ ತೊಂದರೆಯಾಗುವುದಿಲ್ಲ. ಆ ಕಾರಣಕ್ಕಾಗಿ ಏತ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಸ್ವಾತಂತ್ರ್ಯ ನಂತರದಲ್ಲಿ ಕೆ.ಆರ್.ಪೇಟೆ ಮೂಲಕ ತಾಲೂಕಿಗೆ ಹರಿದು ಬರುವ ಹೇಮಾವತಿ ಜಲಾಶಯದ ನೀರಿನಿಂದಾಗಿ ಹೊಣಕೆರೆ, ಕಸಬಾ ಮತ್ತು ದೇವಲಾಪುರ ಹೋಬಳಿಯ ಕೆಲ ಅಚ್ಚುಕಟ್ಟು ಪ್ರದೇಶಕ್ಕೆ ಸ್ವಲ್ಪ ಮಟ್ಟಿಗೆ ಅನುಕೂಲವಾಗಿದೆ. ತುಮಕೂರು ಮಾರ್ಗದ ಕಾಲುವೆಯಿಂದ ಎನ್‌ಬಿಸಿ ಮಾಡಿ ತುರುವೆಕೆರೆಯಿಂದ ಪ್ರಾರಂಭವಾಗಿ ಬೆಳ್ಳೂರು ಹೋಬಳಿಯ ಬಹುತೇಕ ಭಾಗ, ಬಿಂಡಿಗನವಿಲೆ, ಕಸಬಾ ಮತ್ತು ದೇವಲಾಪುರ ಹೋಬಳಿಯ ಕೆಲ ಭಾಗಗಳಿಗೆ ಅನುಕೂಲವಾಗಿದೆ ಎಂದರು.

ಬಿಂಡಿಗನವಿಲೆ, ಹೊಣಕೆರೆ ಮತ್ತು ಕಸಬಾ ಹೋಬಳಿಯ ಹಲವು ಭಾಗಗಳಿಗೆ ಈ ಅಚ್ಚುಕಟ್ಟು ವ್ಯಾಪಿಸುತ್ತಿರಲಿಲ್ಲ. ಹಾಗಾಗಿ ಈ ಎಲ್ಲಾ ಭಾಗಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಕೈಗೆತ್ತಿಕೊಂಡು 340 ಕೋಟಿ ರು. ವೆಚ್ಚದಲ್ಲಿ ತಾಲೂಕಿನ 110 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಕೆಲ ದಿನಗಳ ಹಿಂದೆ ತಾಲೂಕಿನ ಗಡಿಭಾಗ ಗಿಡುವಿನಹೊಸಹಳ್ಳಿ ಸಮೀಪ ಭೂಮಿಪೂಜೆ ನೆರವೇರಿಸಲಾಗಿದೆ ಎಂದರು.

ಈ ವೇಳೆ ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಜಿ.ಆದರ್ಶ, ಮನ್ಮುಲ್ ನಿರ್ದೇಶಕರಾದ ಎನ್.ಅಪ್ಪಾಜಿಗೌಡ, ಲಕ್ಷ್ಮೀನಾರಾಯಣ, ಸಣ್ಣ ನೀರಾವರಿ ಇಲಾಖೆಯ ಇಇ ಶಂಕರ್, ಎಇಇ ನಿರ್ಮಲೇಶ್, ಹೇಮಾವತಿ ಇಲಾಖೆಯ ಎಇಇ ರಾಜೇಗೌಡ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಮೂಡ್ಲೀಗೌಡ, ಸಮಾಜ ಸೇವಕ ಜವರನಹಳ್ಳಿ ಗೌರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮುಖಂಡರಾದ ಎಚ್.ಟಿ.ಕೃಷ್ಣೇಗೌಡ, ಎನ್.ಟಿ.ಕೃಷ್ಣಮೂರ್ತಿ, ಬಿ.ರಾಜೇಗೌಡ, ದೊರೆಸ್ವಾಮಿ, ಎನ್.ಕೆ.ವಸಂತಮಣಿ, ಗೀತಾದಾಸೇಗೌಡ ಸೇರಿದಂತೆ ಹಲವರು ಇದ್ದರು.