ಸರ್ಕಾರ ಮಾರಕವಾಗುವಂತಹ ಯೋಜನೆ ಕೈಬಿಡಬೇಕು. ನಮ್ಮ ಉದ್ದೇಶ ಪರಿಸರ ಉಳಿಸುವುದು. ನದಿ, ಅರಣ್ಯ ಉಳಿದರೆ ನಾವು ಉಳಿಯುತ್ತೇವೆ.
ಪಾದಯಾತ್ರೆಗೆ ಚಾಲನೆ ನೀಡಿದ ಬಂಗಾರಮಕ್ಕಿ ಧರ್ಮಾಧಿಕಾರಿ
ಕನ್ನಡಪ್ರಭ ವಾರ್ತೆ ಹೊನ್ನಾವರಶರಾವತಿ ರಕ್ಷಿಸಬೇಕು. ಪರಿಸರಕ್ಕೆ ಮಾರಕವಾಗಿರುವ ಎಲ್ಲಾ ಯೋಜನೆ ಕೈಬಿಡಬೇಕು ಎಂಬ ಉದ್ದೇಶ ಇಟ್ಟುಕೊಂಡು ಪಾದಯಾತ್ರೆ ಮಾಡಲು ನಿರ್ಧರಿಸಿ ಅದಕ್ಕೆ ಚಾಲನೆ ನೀಡಲಾಗಿದೆ ಎಂದು ಬಂಗಾರಮಕ್ಕಿ ಧರ್ಮಾಧಿಕಾರಿ ಮಾರುತಿ ಗುರೂಜಿ ಹೇಳಿದರು.
ಗೇರುಸೊಪ್ಪ ವನವಾಸಿ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಮಾಸ್ತಪ್ಪ ನಾಯ್ಕ ನೇತೃತ್ವದಲ್ಲಿ ನಡೆದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.ಈ ಪಾದಯಾತ್ರೆ ಮಾಡುವುದು ವೈಯಕ್ತಿಕವಾಗಿ ಯಾರನ್ನು ವಿರೋಧಿಸಲು ಅಲ್ಲ. ಸರ್ಕಾರ ಮಾರಕವಾಗುವಂತಹ ಯೋಜನೆ ಕೈಬಿಡಬೇಕು. ನಮ್ಮ ಉದ್ದೇಶ ಪರಿಸರ ಉಳಿಸುವುದು. ನದಿ, ಅರಣ್ಯ ಉಳಿದರೆ ನಾವು ಉಳಿಯುತ್ತೇವೆ. ಹೀಗಾಗಿ ಎಲ್ಲರೂ ಕೈಜೋಡಿಸಿ ಎಂದರು.ಪಾದಯಾತ್ರೆಯ ಉದ್ದೇಶ ಯಾವುದೇ ವೈಯಕ್ತಿಕವಾಗಿ ವಿರೋಧಿಸುವಂತದ್ದಲ್ಲ, ಸರ್ಕಾರ ಸಂಪೂರ್ಣ ಯೋಜನೆ ಕೈಬಿಡುವ ಕೆಲಸ ಆಗಬೇಕು. ನಮ್ಮ ಪರಿಸರ ಉಳಿದರೆ, ನದಿ ಉಳಿದರೆ, ಅರಣ್ಯ ಉಳಿದರೆ ನಾವು ಉಳಿಯುತ್ತೇವೆ. ಹೀಗಾಗಿ ಎಲ್ಲರೂ ಕೈಜೋಡಿಸಿ ಎಂದರು.ಪಾದಯಾತ್ರೆಗೆ ಕಾನೂನು ದೃಷ್ಟಿಯಿಂದ ಪರವಾನಗಿ ಕೊಟ್ಟಿಲ್ಲ. ಸ್ವತಂತ್ರ ಭಾರತದಲ್ಲಿ ಹೋರಾಟ ಮಾಡುವ ಹಕ್ಕು ನಮ್ಮಗೆಲ್ಲರಿಗೂ ಇದೆ. ಪಾದಯಾತ್ರೆ ಸಂದರ್ಭದಲ್ಲಿ ಯಾವುದೇ ರೀತಿಯ ಗಲಾಟೆಗಳನ್ನು ಮಾಡದೆ, ಮೌನ ಪ್ರತಿಭಟನೆ ನಮ್ಮದಾಗಿರಲಿ. ಕಾನೂನು ತೊಡಕು ಬರದೆ ಇರುವ ರೀತಿಯಲ್ಲಿ ಪಾದಯಾತ್ರೆ ನಡೆಸೋಣ ಎಂದು ಕರೆ ನೀಡಿದರು.ಪಾದಯಾತ್ರೆಯ ನೇತೃತ್ವ ವಹಿಸಿದ್ದ ಮಾಸ್ತಪ್ಪ ನಾಯ್ಕ ಬಲಸೆ ಮಾತನಾಡಿ, ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಹಾಗೂ ಶರಾವತಿ ಯೋಜನೆ ಕೈಬಿಡಬೇಕು ಎಂದು ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಸಚಿವರಿಗೆ ತಿಳಿಸಲಾಗಿತ್ತು. ಇದೇ ಬರುವ ಬಜೆಟ್‌ನಲ್ಲಿ ಘೋಷಣೆಯಾಗಬೇಕು ಎಂದು ಒತ್ತಾಯಿಸಿದ ಪರಿಣಾಮ ಆರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಸಿಎಂ ಪತ್ರ ಬರೆದಿರುವುದು ನಮ್ಮ ಪ್ರಥಮ ಗೆಲುವಾಗಿದೆ ಎಂದರು.ರೈತ ಮುಖಂಡ ಯು.ಎ. ಪಾಟೀಲ್ ಮಾತನಾಡಿದರು. ಪಾದಯಾತ್ರೆಯಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ಗೇರುಸೊಪ್ಪ ವನವಾಸಿ ಸೀತಾರಾಮಚಂದ್ರ ದೇವಸ್ಥಾನದಿಂದ ಹೊರಟ ಪಾದಯಾತ್ರೆ ಬೆಂಗಳೂರು-ಹೊನ್ನಾವರ ಹೆದ್ದಾರಿ ಮೂಲಕ ಹಡಿನಬಾಳದ ತನಕ ಆಗಮಿಸಿದ್ದು, ಗುರುವಾರ ಬೆಳಗ್ಗೆ ಹಡಿನಬಾಳದಿಂದ ಹೊರಟು ತಹಸೀಲ್ದಾರ್ ಕಚೇರಿ ತಲುಪಿ ಮನವಿ ಕೊಡಲಿದ್ದಾರೆ.