ಎಲ್ಲ ಧರ್ಮಗಳು ವಿದ್ಯೆಗೆ ಮಹತ್ವ ನೀಡಿವೆ: ಸುಹೇಬ್ ಫೈಝ

| Published : Feb 18 2025, 12:30 AM IST

ಸಾರಾಂಶ

ಚೆರಿಯ ಪರಂಬು ಮಖಾಂ ಉರುಸ್ ಅಂಗವಾಗಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಕೊಳಕೇರಿಯ ಸುಹೇಬ್ ಫೈಝ ಭಾಷಣ ಮಾಡಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಎಲ್ಲ ಧರ್ಮಗಳು ವಿದ್ಯೆಗೆ ಮಹತ್ವ ನೀಡಿವೆ. ಇಸ್ಲಾಂ ಧರ್ಮದ ಜೀವನಾಡಿ ಕೂಡ ವಿದ್ಯೆ ಆಗಿದೆ ಎಂದು ಕೊಳಕೇರಿಯ ಸುಹೇಬ್ ಫೈಝ ಹೇಳಿದರು.

ಚೆರಿಯ ಪರಂಬು ಮಖಾಂ ಉರುಸ್ ಅಂಗವಾಗಿ ಸೋಮವಾರ ಜರುಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಭಾಗವಹಿಸಿ ಅವರು ಮಾತನಾಡಿದರು.ಅವರವರ ಧರ್ಮದ ಆಚಾರ ವಿಚಾರಗಳನ್ನು, ಅನುಷ್ಠಾನಗಳನ್ನು ಕಲಿತು ಸುಸಂಸ್ಕೃತರಾಗಬೇಕು. ಉತ್ತಮ ಸಮಾಜ ನಿರ್ಮಾಣ ಮಾಡಲು ವಿದ್ಯೆ ಅಗತ್ಯ. ಇಸ್ಲಾಂ ಕೂಡ ವಿದ್ಯೆಗೆ ಮಹತ್ವ ನೀಡಿದೆ. ಹಿಂದೂ ಧರ್ಮವೂ ವಿದ್ಯಾಹೀನ ಪಶುಸಮಾನ ಎಂದಿದೆ. ವಿದ್ಯೆಯಿಂದ ಒಬ್ಬ ಮನುಷ್ಯ ಸಮಾಜದಲ್ಲಿ ಒಳ್ಳೆಯವನಾಗುತ್ತಾನೆ. ಸೌಹಾರ್ದತೆಯಿಂದ ಕೂಡಿದ ಜೀವನವನ್ನು ಕೈಗೊಳ್ಳಲು ವಿದ್ಯೆ ಸಹಕಾರಿ ಎಂದರು.

ಸಾಧು ಸಂತರು, ಪ್ರವಾದಿಗಳು, ಪವಾಡ ಪುರುಷರು ಮಾನವರ ಜೀವನವನ್ನು ಸುಸಂಸ್ಕೃತ ಸಮಾಜ ನಿರ್ಮಾಣಕ್ಕಾಗಿ ದುಡಿದು ಜನರು ಉತ್ತಮ ರೀತಿಯಲ್ಲಿ ಬದುಕುವಂತೆ ಮಾಡಿದರು ಎಂದು ಧಾರ್ಮಿಕ ಪುಣ್ಯ ಪುರುಷರ ಹಿತ ಚಿಂತನೆಯ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.ನಾಪೋಕ್ಲು ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬ್ದುಲ್ ರೆಹಮಾನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಉರುಸ್ ಎಂಬುದು ಜಾತ್ರೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಮಹಾನುಭಾವರ ಅನುಗ್ರಹದಿಂದ ಉತ್ತಮ ಜೀವನವನ್ನು ಸಾಗಿಸುವಂತಾಗಬೇಕು. ನೂತನ ವಾದಿಗಳು ಇತ್ತೀಚಿಗೆ ಮಕ್ಕಳ ಜೀವನವನ್ನು ಹಾಳು ಮಾಡುತ್ತಿದ್ದಾರೆ. ಪ್ರತಿ ಜಮಾಅತ್ ಆಡಳಿತ ಮಂಡಳಿಯವರು ಅಗತ್ಯ ಕ್ರಮ ಕೈಗೊಂಡು ಮಹಾನುಭವರ ಆದರ್ಶಗಳನ್ನು ಎಲ್ಲರೂ ಪಾಲಿಸುವಂಥಾಗಲು ಪ್ರೇರೇಪಿಸಬೇಕು ಎಂದರು.

ಚೆರಿಯ ಪರಂಬು ಖತೀಬರಾದ ಫೈಝಲ್ ಸಖಾಪಿ ಸಮಾರಂಭವನ್ನು ಉದ್ಘಾಟಿಸಿ ಶುಭಹಾರೈಸಿದರು.

ಜಮಾಅತ್ ಅಧ್ಯಕ್ಷ ಪಿ.ಎ. ಹಂಸ ಹಾಜಿ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕಾರ್ಮಿಕ ಸಂಘದ ಉಪಾಧ್ಯಕ್ಷ ಮಿಶ್ರಾದ್, ಕಲ್ಲುಮೊಟ್ಟೆ ಜಮಾಅತ್ ಅಧ್ಯಕ್ಷ ನಝರ್, ಚೆರಿಯ ಪರಂಬು ಜಮಾಅತ್ ಮಾಜಿ ಅಧ್ಯಕ್ಷ ಪಿ.ಎ. ಅಹ್ಮದ್, ಕಾರ್ಯದರ್ಶಿ ಪಿ.ಎಂ.ಅಸೈನಾರ್ ಹಾಜಿ, ಜಮಾಯತ್ ಉಪ ಅಧ್ಯಕ್ಷ ಪಿ.ಎಂ., ಶಾದಲಿ, ಸಹ ಕಾರ್ಯದರ್ಶಿ ಎಂ.ಜೆ. ಬಶೀರ್, ಜಮಾಯತ್ ಹಾಲಿ ಹಾಗೂ ಮಾಜಿ ಜಮಾಯತ್ ಪದಾಧಿಕಾರಿಗಳು ಸಮಿತಿ ಸದಸ್ಯರು, ಜನಾಂಗ ಬಾಂಧವರು ಪಾಲ್ಗೊಂಡಿದ್ದರು. ಅನಂತರ ಮೌಲಿದ್ ಪಾರಾಯಣ ಅನ್ನದಾನ ನೆರವೇರಿತು.

ಸಂಜೆ ಧಾರ್ಮಿಕ ಪ್ರಭಾಷಣ ಹಾಗೂ ರಾತ್ರಿ ತಿರುವನಂತಪುರದ ಹಾಫಿಳ್ ಮಾಹಿನ್ ಮನ್ನಾನಿ ಮುಖ್ಯ ಪ್ರಭಾಷಣ ಮಾಡಿದರು. ಮಂಗಳವಾರ ರಾತ್ರಿ ಸಮಾರೋಪ ಸಮಾರಂಭ ನಡೆಯಲಿದ್ದು, ಚೆರಿಯ ಪರಂಬು ಜಮಾಯತ್ ಉಪಾಧ್ಯಕ್ಷ ಪಿ.ಎಂ. ಸಾಧಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಎಡಪಾಲದ ಶೈಕುನಾ ಅಬ್ದುಲ್ ಫೈಜಿ ಮುಖ್ಯ ಪ್ರಭಾಷಣ ನೆರವೇರಿಸಲಿದ್ದಾರೆ.