ಕಳೆದ ಐದು ವರ್ಷಗಳಿಂದ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸತತವಾಗಿ ಅತ್ಯುನ್ನತ ಫಲಿತಾಂಶ ತರುವಲ್ಲಿ ಮತ್ತು ಸಮಗ್ರ ಕ್ರೀಡಾ ಪ್ರಶಸ್ತಿ ಮಾಗಡಿ ಪಾಲಾಗುವಲ್ಲಿ ತಾಲೂಕಿನ ಶಿಕ್ಷಕರ ಪಾತ್ರ ಶ್ಲಾಘನೀಯ. ಮಕ್ಕಳ ವ್ಯಕ್ತಿತ್ವ ನಿರ್ಮಾಣದ ಜೊತೆಗೆ ರಾಷ್ಟ್ರ ನಿರ್ಮಾಣದ ಕೆಲಸದಲ್ಲಿ ಶಿಕ್ಷಕರು ಹಗಲಿರುಳು ದುಡಿಯುತ್ತಿದ್ದಾರೆ. ಇತ್ತೀಚಿನ ಮತದಾರರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲೂ ಶೇಕಡಾ 98ಕ್ಕೂ ಹೆಚ್ಚು ಪ್ರಗತಿ ಸಾಧಿಸಿರುವುದು ಶಿಕ್ಷಕರ ಬದ್ಧತೆಗೆ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಮಾಗಡಿ
ಶಿಕ್ಷಕರ ಕಾಯಕ ಅತ್ಯಂತ ಪವಿತ್ರವಾದದ್ದು. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ನಿಸ್ವಾರ್ಥ ಸೇವೆಯಿಂದಲೇ ಸಮಾಜದಲ್ಲಿ ಉನ್ನತ ವ್ಯಕ್ತಿತ್ವಗಳು ಮತ್ತು ಸಮರ್ಥ ನಾಯಕರು ನಿರ್ಮಾಣವಾಗಲು ಸಾಧ್ಯ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್. ಅಶೋಕ್ ಹೇಳಿದರು.ಪಟ್ಟಣದ ಪೂರ್ವಜ ಸಮುದಾಯ ಭವನದಲ್ಲಿ ಶನಿವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಮೊದಲ ಉಪರಾಷ್ಟ್ರಪತಿ ಹಾಗೂ ಎರಡನೇ ರಾಷ್ಟ್ರಪತಿಯಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ವಿಶ್ವವೇ ಗೌರವಿಸುವ ಮೇರು ವ್ಯಕ್ತಿತ್ವ ಹೊಂದಿದ್ದರೂ, ತಮ್ಮನ್ನು ಶಿಕ್ಷಕರೆಂದು ಗುರುತಿಸಿಕೊಳ್ಳುವುದರಲ್ಲೇ ಹೆಮ್ಮೆ ಪಟ್ಟವರು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು.
ಎಸ್ಸೆಸ್ಸೆಲ್ಸಿ ಸಾಧನೆ ಹಾಗೂ ಶೈಕ್ಷಣಿಕ ಪ್ರಗತಿಗೆ ಶ್ಲಾಘನೆ:ಕಳೆದ ಐದು ವರ್ಷಗಳಿಂದ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸತತವಾಗಿ ಅತ್ಯುನ್ನತ ಫಲಿತಾಂಶ ತರುವಲ್ಲಿ ಮತ್ತು ಸಮಗ್ರ ಕ್ರೀಡಾ ಪ್ರಶಸ್ತಿ ಮಾಗಡಿ ಪಾಲಾಗುವಲ್ಲಿ ತಾಲೂಕಿನ ಶಿಕ್ಷಕರ ಪಾತ್ರ ಶ್ಲಾಘನೀಯ. ಮಕ್ಕಳ ವ್ಯಕ್ತಿತ್ವ ನಿರ್ಮಾಣದ ಜೊತೆಗೆ ರಾಷ್ಟ್ರ ನಿರ್ಮಾಣದ ಕೆಲಸದಲ್ಲಿ ಶಿಕ್ಷಕರು ಹಗಲಿರುಳು ದುಡಿಯುತ್ತಿದ್ದಾರೆ. ಇತ್ತೀಚಿನ ಮತದಾರರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲೂ ಶೇಕಡಾ 98ಕ್ಕೂ ಹೆಚ್ಚು ಪ್ರಗತಿ ಸಾಧಿಸಿರುವುದು ಶಿಕ್ಷಕರ ಬದ್ಧತೆಗೆ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಗಡಿಯಲ್ಲಿ ಮಾದರಿ ಶೈಕ್ಷಣಿಕ ಕ್ರಾಂತಿ:ತಾಲೂಕಿನಲ್ಲಿ ಹಿಂದೆ ಕೇವಲ 36- 37ರಷ್ಟಿದ್ದ ಪ್ರೌಢಶಾಲೆಗಳ ಸಂಖ್ಯೆ ಇಂದು 65ಕ್ಕೂ ಹೆಚ್ಚು ತಲುಪಿದೆ. ರಾಜ್ಯದಲ್ಲೇ ಮಾದರಿಯಾಗುವಂತೆ 10 ಕರ್ನಾಟಕ ಪಬ್ಲಿಕ್ ಶಾಲೆಗಳು (ಕೆಪಿಎಸ್) ಮಾಗಡಿಗೆ ಮಂಜೂರಾಗಿವೆ. ಜೊತೆಗೆ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಒಂದು ಎಕರೆ ವಿಸ್ತೀರ್ಣದಲ್ಲಿ ಅತ್ಯಾಧುನಿಕ ಗುರುಭವನ ನಿರ್ಮಾಣವಾಗುತ್ತಿದ್ದು, ಶೈಕ್ಷಣಿಕ ಕ್ಷೇತ್ರಕ್ಕೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ವಿಶೇಷ ಇಚ್ಛಾಶಕ್ತಿ ತೋರಿದ್ದಾರೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಮಾತನಾಡಿ, ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳು ಹೆಚ್ಚು ಸಾಧನೆ ಮಾಡುತ್ತಿವೆ ಎಂಬುದು ಹೆಮ್ಮೆಯ ವಿಚಾರವಾಗಿದೆ. ೧೦ ಕೆಪಿಎಸ್ ಶಾಲೆಗಳು ಇನ್ನು ಎರಡು ವರ್ಷದಲ್ಲಿ ಸುಸಜ್ಜಿತವಾಗಿ ಆರಂಭವಾದಾಗ ಅರವತ್ತಕ್ಕೂ ಹೆಚ್ಚು ಶಿಕ್ಷಕರ ಕೊರತೆ ಕಾಣುವ ಕಾಲ ಬರಲಿದೆ ಜೊತೆಗೆ ಈಗಾಗಲೇ ಖಾಸಗಿ ಶಾಲೆಗಳಿಂದ 600ಕ್ಕೂ ಹೆಚ್ಚು ಮಕ್ಕಳು ಎಲ್ ಕೆಜಿ ಗೆ ದಾಖಲಾತಿ ಆಗಿದ್ದಾರೆ. ಖಾಸಗಿ ಶಾಲೆಗೆ ದಾಖಲಾತಿ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿದ್ದು, ನಾಲ್ಕು ಹೊಸ ಬಸ್ಸುಗಳನ್ನು ಕೆಪಿಎಸ್ ಶಾಲೆಗೆ ಕೊಡಲಾಗುತ್ತಿದೆ ಎಂದರು.ಸರ್ವಪಲ್ಲಿ ಡಾ.ರಾಧಾಕೃಷ್ಣರವರ ಬಗ್ಗೆ ಉಪನ್ಯಾಸವನ್ನು ಚಿಕ್ಕಬಳ್ಳಾಪುರದ ನಾಗಶ್ರೀರವರು ನೀಡಿದರು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ರಂಜಿತ್, ತಾಪಂ ಇಒ ಜೈಪಾಲ್, ತಾಲೂಕು ಕಸಾಪ ಅಧ್ಯಕ್ಷ ತಿ. ನಾ.ಪದ್ಮನಾಭ, ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಜಯರಾಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್, ಕೃಷ್ಣಮೂರ್ತಿ, ಶಿಕ್ಷಕರಾದ ಮಲ್ಲಿಕಾರ್ಜುನ ಸ್ವಾಮಿ, ಮಲ್ಲೂರು ಲೋಕೇಶ್, ಕೃಷ್ಣಪ್ಪ, ಜಗದೀಶ್, ಪ್ರಕಾಶ್, ದಾನಿ ಪುಟ್ಟರಾಜು, ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ತಾಲೂಕಿನ ನೂರಾರು ಶಿಕ್ಷಕರು ಉಪಸ್ಥಿತರಿದ್ದರು.