ಜನರು ತಮ್ಮ ಸಮಸ್ಯೆಗಳಿಗಾಗಿ ಅರ್ಜಿಗಳನ್ನು ಹಿಡಿದು ಕಚೇರಿಗಳಿಗೆ ಅಲೆದಾಡಬಾರದು. ಬದಲಿಗೆ ಸರ್ಕಾರಿ ಆಡಳಿತವೇ ಜನರ ಮನೆ ಬಾಗಿಲಿಗೆ ಹೋಗಿ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎನ್ನುವ ಸದ್ದುದ್ದೇಶದಿಂದ ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಮನೆಬಾಗಿಲಿಗೆ ಬಂದಿದೆ ಸರ್ಕಾರ, ಇರಲಿ ಜನರ ಸಹಕಾರ ಎಂಬ ಘೋಷವಾಕ್ಯದೊಂದಿಗೆ ನೂತನವಾದ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದ್ದಾರೆ.

- ಜಿಲ್ಲಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿಕೆ ।- ಹೊನ್ನಾಳಿಯ ಗೊಲ್ಲರಹಳ್ಳಿ ಶ್ರೀ ತರಳಬಾಳು ಸಮುದಾಯ ಭವನದಲ್ಲಿ ಚಾಲನೆ

- - -ಕನ್ನಡಪ್ರಭ ವಾರ್ತೆ ಹೊನ್ನಾಳಿ

ಜನರು ತಮ್ಮ ಸಮಸ್ಯೆಗಳಿಗಾಗಿ ಅರ್ಜಿಗಳನ್ನು ಹಿಡಿದು ಕಚೇರಿಗಳಿಗೆ ಅಲೆದಾಡಬಾರದು. ಬದಲಿಗೆ ಸರ್ಕಾರಿ ಆಡಳಿತವೇ ಜನರ ಮನೆ ಬಾಗಿಲಿಗೆ ಹೋಗಿ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎನ್ನುವ ಸದ್ದುದ್ದೇಶದಿಂದ ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಮನೆಬಾಗಿಲಿಗೆ ಬಂದಿದೆ ಸರ್ಕಾರ, ಇರಲಿ ಜನರ ಸಹಕಾರ ಎಂಬ ಘೋಷವಾಕ್ಯದೊಂದಿಗೆ ನೂತನವಾದ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.ಜಿಲ್ಲಾ ಮತ್ತು ತಾಲೂಕು ಆಡಳಿತಗಳಿಂದ ಶನಿವಾರ ತಾಲೂಕಿನ ಗೊಲ್ಲರಹಳ್ಳಿ ಶ್ರೀತರಳಬಾಳು ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸರ್ಕಾರದ ಮತ್ವಾಕಾಂಕ್ಷಿ ಯೋಜನೆ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಚುನಾವಣೆಯಲ್ಲಿ 136 ಸ್ಥಾನಗಳಲ್ಲಿ ಪಕ್ಷವನ್ನು ಮತದಾರರು ಗೆಲ್ಲಿಸಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತಂದಿದ್ದಾರೆ. ಶಕ್ತಿ ಯೋಜನೆ, ಅನ್ನಭಾಗ್ಯ ವೃದ್ಧಾಪ್ಯವೇತನ, ಅಂಗವಿಕಲ, ಗೃಹಲಕ್ಷ್ಮಿ ಯೋಜನೆಗಳು ಸರ್ಕಾರದ ಆಶಯದಂತೆ ಎಲ್ಲ ಅರ್ಹ ಫಲಾನುಭವಿಗಳಿಗೆ ಸೂಕ್ತ ರೀತಿಯಲ್ಲಿ ತಲುಪಿಸುವಲ್ಲಿ ಅಧಿಕಾರಿಗಳು ಸ್ಪಂದಿಸಿ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ನ್ಯಾಮತಿ ತಾಲೂಕಿನಲ್ಲಿ ಕೂಡ ಈ ಪ್ರಜಾ ಸೇವೆ ಕಾರ್ಯಕ್ರಮ ನಡೆಸುವಂತೆ ಸ್ಥಳೀಯ ಶಾಸಕ ಡಿ.ಜಿ. ಶಾಂತನಗೌಡ ಮನವಿ ಮಾಡಿದ್ದಾರೆ. ಅದರಂತೆ ನ್ಯಾಮತಿ ತಾಲೂಕಿನಲ್ಲಿ ಕೂಡ ಪ್ರಜಾ ಸೇವೆ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.ಸರ್ಕಾರ ಘೋಷಣೆ ಮಾಡಿರುವ ಬರಪೀಡಿತ ತಾಲೂಕುಗಳಲ್ಲಿ ಈಗಾಗಲೇ ಹೊನ್ನಾಳಿ ನ್ಯಾಮತಿ, ಚನ್ನಗಿರಿ ತಾಲೂಕುಗಳು ಸೇರಿವೆ. ಇನ್ನು ಜಗಳೂರು, ಹರಿಹರ ತಾಲೂಕುಗಳನ್ನು 2ನೇ ಪಟ್ಟಿಯಲ್ಲಿ ಸೇರಿಸುವ ನಿರೀಕ್ಷೆ ಇದೆ. ಅಂತಿಮವಾಗಿ ಬರಪೀಡಿತ ಪ್ರದೇಶಗಳ ಪಟ್ಟಿ ಘೋಷಣೆ ಮಾಡುವುದು ಕೇಂದ್ರ ಸರ್ಕಾರವಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕೆಲ ಶಾಸಕರು ಪ್ರಥಮ ಬಾರಿಗೆ ಗೆದ್ದಿದ್ದರೂ ಅನುಭವ ಇರುವ ಹಿರಿಯ ಶಾಸಕರನ್ನು ಲೆಕ್ಕಿಸದೇ ಮಾತನಾಡುತ್ತಿದ್ದಾರೆ. ಮೊದಲು ಅವರು ಹಾಗೆ ಮಾತನಾಡುವುದನ್ನು ಬಿಟ್ಟು ಜನರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿ ಎಂದು ಹೇಳಿದರು.ಜಿಲ್ಲೆಯ ಒಟ್ಟು 4 ತಾಲೂಕುಗಳಲ್ಲಿ ಉಂಟಾಗಿರುವ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಒಟ್ಟು ₹469 ಕೋಟಿ ಪರಿಹಾರ ನೀಡುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಜಿಲ್ಲಾಡಳಿತದಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲೆಯ 31,000 ರೈತರಿಗೆ ₹42 ಕೋಟಿ ಬೆಳೆ ವಿಮೆ ಪರಿಹಾರವನ್ನು ಶೀಘ್ರವೇ ತಲುಪಿಸಲು ಅಗತ್ಯ ಕ್ರಮ ಹಾಗೂ ಪ್ರಸ್ತಾವನೆಗಳನ್ನು ಸಿದ್ಧಪಡಿಸಲಾಗಿದೆ. ಮಳೆ ಕೊರತೆ ಮತ್ತು ಬೆಳೆ ಹಾನಿಯ ನಿಖರ ಸಮೀಕ್ಷೆಗಾಗಿ ವಿಶೇಷ ತಂತ್ರಜ್ಞಾನವನ್ನು ಬಳಸಿಕೊಂಡು, ಪ್ರತಿಯೊಬ್ಬ ಸಂತ್ರಸ್ತ ರೈತನಿಗೂ ನ್ಯಾಯಯುತ ಪರಿಹಾರ ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಎದುರಾಗಿರುವ ಬರ ಪರಿಸ್ಥಿತಿ ಹಾಗೂ ಇತ್ತೀಚಿನ ಮಳೆಯಿಂದಾದ ಹಾನಿಗೆ ಸುಮಾರು ₹15 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು, ಪ್ರವಾಹ ಹಾನಿ ತಡೆ ಹಾಗೂ ಮೂಲಸೌಕರ್ಯಗಳ ದುರಸ್ತಿಗೆ ಯೋಜನೆ ರೂಪಿಸಲಾಗಿದೆ. ಈ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, 2023ರಲ್ಲಿ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ್ದ ಪಂಚ ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದನಂತರ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಸಮರ್ಥವಾಗಿ ಇಡೀ ದೇಶದಲ್ಲಿಯೇ ಮಾದರಿ ಆಗುವಂತೆ ಜನರಿಗೆ ಯಶಶ್ವಿಯಾಗಿ ಅನುಷ್ಠಾನಗೊಳಿಸಿದ್ದು, ಬಿಟ್ಟಿ ಗ್ಯಾರಂಟಿ ಎಂದು ಟೀಕಿಸುತ್ತಿದ್ದ ವಿಪಕ್ಷದವರೂ ಬಾಯಿ ಮುಚ್ಚುವಂತೆ ತಮ್ಮ ಸರ್ಕಾರ ಮಾಡಿದೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ಮೇಲೆ ಜನಪರವಾದ ಪ್ರಜಾ ಸೇವೆ ಆಂದೋಲನದಂತಹ ವಿನೂತನ ಕಾರ್ಯಕ್ರಮ ರೂಪಿಸಿ, ಇದಕ್ಕಾಗಿ ಪ್ರತ್ಯೇಕ ಇಲಾಖೆ ಆರಂಭಿಸಿ ತನ್ಮೂಲಕ ಜಾರಿಗೆ ತಂದಿದ್ದಾರೆ. ಇದರಿಂದ ಗ್ರಾಮೀಣ ಜನತೆ ಹಚ್ಚು ಅನುಕೂಲವಾಗಲಿದೆ. ಸರ್ಕಾರಿ ಸೇವೆಗಳು ಮತ್ತು ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ಸಾರ್ವಜನಿಕರಿಗೆ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಇಲಾಖೆಗಳ ಸೌಲಭ್ಯಗಳನ್ನು ಒಂದೇ ವೇದಿಕೆಯಲ್ಲಿ ತಲುಪಿಸುವ ಉದ್ದೇಶದಿಂದ ಪ್ರಜಾ ಸೇವಾ ಆಂದೋಲನ ಆಯೋಜಿಸಲಾಗಿದೆ. ಇದು ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕನಸಿನ ಕೂಸಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಪ್ರಾಸ್ತಾವಿಕ ಮಾತನಾಡಿ, ಗ್ರಾಮೀಣರು ತಮ್ಮ ವಿವಿಧ ಸಮಸ್ಯೆಗಳಿಗಾಗಿ ತಾಲೂಕು, ಜಿಲ್ಲಾ ಕೇಂದ್ರಗಳಿಗೆ ಅಲೆದಾಡುವ ಪರಿಸ್ಥಿತಿ ತಪ್ಪಿಸಿ ಸ್ಥಳೀಯವಾಗಿಯೇ ಅಗತ್ಯ ಸೇವೆ ಮತ್ತು ಮಾಹಿತಿಯನ್ನು ಪಡೆಯುವಂತಾಗಬೇಕೆಂಬ ಉದ್ದೇಶ ಈ ಪ್ರಜಾ ಸೇವಾ ಆಂದೋಲನದ ಗುರಿಯಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಚಿವರ ಜಿಲ್ಲಾ ಕಾರ್ಯದರ್ಶಿ ಡಾ, ಶಾಲಿನಿ ಇಕ್ಬಾಲ್ ಅಹಮ್ಮದ್, ಪೊಲೀಸ್ ವರಿಷ್ಠಾಧಿಕಾರಿ ಎಚ್.ಕೆ.ಶೇಖರ್, ಜಿಲ್ಲಾ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಜಿ.ಪಂ. ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್, ಉಪವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ ತಹಸೀಲ್ದಾರ್ ಕವಿರಾಜ್, ಹೊನ್ನಾಳಿ ಪಂಚಗ್ಯಾರಂಟಿ ಸಮಿತಿ ಅಧ್ಯಕ್ಷ ಎಚ್.ಎ. ಗದ್ದಿಗೇಶ್, ನ್ಯಾಮತಿ ಆಧ್ಯಕ್ಷ ಶಿವರಾಮ್ ನಾಯ್ಕ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಮುದ್ದೇಗೌಡ, ಆರ್.ನಾಗಪ್ಪ, ಮಧುಗೌಡ, ಸಣ್ಣಕ್ಕಿ ಬಸವನಗೌಡ, ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್.ಎ. ಉಮಾಪತಿ, ತಾಲೂಕು ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಪುಷ್ಪ ರವೀಶ್ ಸೇರಿದಂತೆ ನೂರಾರು ಜನ ಮುಖಂಡರು, ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

- - -(ಬಾಕ್ಸ್‌)

* ಅರ್ಜಿಗಳ ಸ್ವೀಕಾರ

ಪ್ರಜಾ ಸೇವಾ ಆಂದೋಲನದ ಅರ್ಜಿ ಸ್ವೀಕಾರ ಸಂದರ್ಭದಲ್ಲಿ ಕುಡಿಯುವ ನೀರು, ಬೀದಿದೀಪ, ರಸ್ತೆ ಹಾಗೂ ಗ್ರಾಮದ ಸಮಸ್ಯೆಗಳ ಅರ್ಜಿಗಳಿಗಿಂತ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಸೌಲಭ್ಯಗಳು ಸೇರಿದಂತೆ ವೈಯಕ್ತಿಕ ವಸತಿ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ ಇಂತಹ ಅರ್ಜಿಗಳೇ ಹೆಚ್ಚು ಸ್ವೀಕೃತವಾದವು.

- - - -5ಎಚ್.ಎಲ್.ಐ1: