ವಿಜಯಪುರ: ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಬಲೀಕರಣ, ನಾಯಕತ್ವ ಬೆಳವಣಿಗೆ, ಕಾರ್ಯಕ್ಷೇತ್ರದಲ್ಲಿ ಸಮಸ್ಯೆಗಳು ಮತ್ತು ನಿವಾರಣೆಯ ನಿಟ್ಟಿನಲ್ಲಿ ಹೊಸ ದೃಷ್ಟಿಕೋನ ಇಟ್ಟುಕೊಂಡು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ರಚಿಸಲಾಗಿದೆ. ಮಹಿಳಾ ನೌಕರರ ಸರ್ವಾಂಗೀಣ, ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷೆ ರೋಶನಿ ಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಬಲೀಕರಣ, ನಾಯಕತ್ವ ಬೆಳವಣಿಗೆ, ಕಾರ್ಯಕ್ಷೇತ್ರದಲ್ಲಿ ಸಮಸ್ಯೆಗಳು ಮತ್ತು ನಿವಾರಣೆಯ ನಿಟ್ಟಿನಲ್ಲಿ ಹೊಸ ದೃಷ್ಟಿಕೋನ ಇಟ್ಟುಕೊಂಡು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ರಚಿಸಲಾಗಿದೆ. ಮಹಿಳಾ ನೌಕರರ ಸರ್ವಾಂಗೀಣ, ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷೆ ರೋಶನಿ ಗೌಡ ಹೇಳಿದರು. ನಗರದ ನೂತನ ಪತ್ರಿಕಾ ಭವನದಲ್ಲಿ ಶನಿವಾರ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೀಗ ರಾಜ್ಯಾದ್ಯಂತ ನಾವು ಪ್ರವಾಸ ಮಾಡುತ್ತಿದ್ದು, ಎಲ್ಲ ಜಿಲ್ಲೆಗಳಲ್ಲಿ ಸದಸ್ಯತ್ವ ಅಭಿಯಾನ, ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಹಿಳೆಯರಿಂದ ಮಹಿಳೆಯರಿಗಾಗಿ ಮಹಿಳೆಯರಿಗೋಸ್ಕರ ಈ ಸಂಘವನ್ನು ನಿರ್ಮಿಸಲಾಗಿದೆ ಎಂದರು.ಸರ್ಕಾರಿ ಇಲಾಖೆಯ ಉನ್ನತ ಅಧಿಕಾರಿಯಿಂದ ಹಿಡಿದು ಡಿ ದರ್ಜೆಯ ಎಲ್ಲ ಮಹಿಳಾ ನೌಕರರನ್ನು ಸಂಘದಲ್ಲಿ ಸೇರಿಸಿಕೊಳ್ಳಲಾಗುತ್ತಿದೆ. ಈಗಾಗಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಂಘಟನೆ ಮಾಡಲಾಗಿದ್ದು, ಇನ್ನುಳಿದ ಜಿಲ್ಲೆಗಳಲ್ಲಿ ಶೀಘ್ರದಲ್ಲೇ ಜಿಲ್ಲಾ ಘಟಕಗಳನ್ನು ರಚಿಸಲಾಗುವುದು. ಈ ಮೂಲಕ ಮಹಿಳೆಯರಿಗೆ ಕಾನೂನು ಅರಿವು, ವಿವಿಧ ಕಾರ್ಯಾಗಾರಗಳು, ಹಕ್ಕು ಬಾಧ್ಯತೆಗಳನ್ನು ಪ್ರತಿಪಾದಿಸುವುದು, ಕೆಲಸದ ಸ್ಥಳದಲ್ಲಿನ ಒತ್ತಡ ನಿವಾರಣೆ, ಮಹಿಳಾ ನೌಕರರ ಮೇಲಿನ ದೌರ್ಜನ್ಯ ಹಾಗೂ ಕಿರುಕುಳ ಎದುರಿಸುವುದು ಸೇರಿದಂತೆ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ವಿವರಿಸಿದರು.
ಸಿಎಂ, ಸರ್ಕಾರಕ್ಕೆ ಅಭಿನಂದನೆ:ಮಹಿಳೆಯರಿಗೆ ಋತುಚಕ್ರ ರಜೆ ಮಂಜೂರಾತಿಗೆ ನಮ್ಮ ನೌಕರರ ಸಂಘದ ಹೋರಾಟವಿದೆ. ಈ ಹಿಂದೆ ನಾವೆಲ್ಲ ಸೇರಿ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರಿಗೆ ಮನವಿ ಸಲ್ಲಿಸಿ ಹೋರಾಟ ಮಾಡಿದ್ದೆವು. ಆಗ ಸರ್ಕಾರ ಋತುಚಕ್ರ ರಜೆ ಮಂಜೂರಿಸಿದೆ. ಅದಕ್ಕಾಗಿ ಸರ್ಕಾರಕ್ಕೆ ಬೆಂಗಳೂರಿನಲ್ಲಿ ಡಿ.4ರಂದು ಸಿಎಂ ಆದಿಯಾಗಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದೇವೆ. ಈ ವೇಳೆ ಸಿಎಂ ಸಿದ್ದರಾಮಯ್ಯನವರು ಸೆ.13ರ ದಿನವನ್ನು ಮಹಿಳಾ ನೌಕರರ ದಿನಾಚರಣೆಯಾಗಿ ಮಾಡುತ್ತೇವೆ ಎಂದು ಘೋಷಿಸಿದ್ದಾರೆ. ಇದರೊಟ್ಟಿಗೆ ಹಲವಾರು ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಅವುಗಳು ಸಹ ಈಡೇರುವ ಭರವಸೆಯಿದೆ. ಸಂಘದಿಂದ ನಮ್ಮನಡೆ ಸಮಾನತೆಯ ಕಡೆ, ನಮ್ಮ ಸಂಘ ನಮ್ಮ ಹೆಮ್ಮೆ, ಸಶಕ್ತ ಮಹಿಳೆ ದೇಶದ ಭವಿಷ್ಯ ಎಂಬ ಧ್ಯೇಯಗಳಡಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಖಜಾಂಚಿ ಡಾ.ವೀಣಾ ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿ ಎಂ.ಆಶಾರಾಣಿ, ಜಿಲ್ಲಾ ಪದಾಧಿಕಾರಿ ಮಡಿವಾಳಮ್ಮ ನಾಡಗೌಡ ಇದ್ದರು.