ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಕೊಡಗು-ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಎರಡನೇ ಹಂತದಲ್ಲಿ ಏ. 26ರಂದು ಮತದಾನ ನಡೆಯಲಿದೆ. ಆದ್ದರಿಂದ ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.ಲೋಕಸಭಾ ಚುನಾವಣಾ ಸಂಬಂಧ ನಗರದ ತಮ್ಮ ಕಚೇರಿಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾನ ಎರಡು ಹಂತದಲ್ಲಿ ನಡೆಯಲಿದೆ. ಆದರೆ ಇಡೀ ದೇಶದಲ್ಲಿ ಮತ ಎಣಿಕೆ ಏಕ ಕಾಲದಲ್ಲಿ ಜೂನ್ 4ರಂದು ನಡೆಯಲಿದೆ ಎಂದು ತಿಳಿಸಿದರು.
ಕೊಡಗಿನಲ್ಲಿ 2,28,478 ಪುರುಷ, 2,37,660 ಮಹಿಳೆ ಹಾಗೂ ಇತರೆ 16 ಮಂದಿ ಮತದಾರರಿದ್ದಾರೆ. ಒಟ್ಟು 4,66,154 ಮಂದಿ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.ಕೊಡಗಿನಲ್ಲಿ ಮದುವೆ ಮತ್ತಿತರ ಶುಭ ಸಮಾರಂಭದಲ್ಲಿ ಮಧ್ಯ ಸರಬರಾಜು ಮಾಡಲು ಉದ್ದೇಶಿಸಿದರೆ ಕಡ್ಡಾಯವಾಗಿ ಅಬಕಾರಿ ಇಲಾಖೆಯಿಂದ ಅನುಮತಿ ಪಡೆದು ತಾಲೂಕು ದಂಡಾಧಿಕಾರಿಗಳಿಗೆ ಮಾಹಿತಿಯನ್ನು ನೀಡಬೇಕು. ಮದ್ಯಪಾನ ಸೇರಿಸದಿದ್ದರೆ ಯಾವುದೇ ಅನುಮತಿಯ ಅವಶ್ಯಕತೆ ಇರುವುದಿಲ್ಲ. ಗೃಹಪ್ರವೇಶ ಮತ್ತಿತರ ಸಣ್ಣಪುಟ್ಟ ಕಾರ್ಯಕ್ರಮಕ್ಕೆ ಯಾವುದೇ ಅನುಮತಿ ಬೇಕಾಗಿಲ್ಲ ಮದ್ಯಪಾನ ಕಾರ್ಯಕ್ರಮದಲ್ಲಿ ಬಳಸುವುದಾದರೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಹೇಳಿದರು.
ಕೊಡಗಿನಲ್ಲಿ ಊರ ಹಬ್ಬ, ದೇವಾಲಯ ವಾರ್ಷಿಕೋತ್ಸವ, ಅನುಮತಿಯ ಬದಲು ಕಡ್ಡಾಯವಾಗಿ ಮಾಹಿತಿಯನ್ನು ತಾಲೂಕು ದಂಡಾಧಿಕಾರಿಗಳಿಗೆ ನೀಡಬೇಕು. ಯಾವುದೇ ಕಾರಣಕ್ಕೂ ಚುನಾವಣೆ ಪ್ರಚಾರಕ್ಕೆ ವೇದಿಕೆಯನ್ನು ಬಳಸಿಕೊಳ್ಳಬಾರದು ಎಂದರು.ಜಮ್ಮ ಹಿಡುವಳಿದಾರರು ಕೋವಿಯನ್ನು ಸಮೀಪದ ಪೊಲೀಸ್ ಠಾಣೆಗೆ ಒಪ್ಪಿಸಬೇಕಾಗಿಲ್ಲ ಒಂದೊಮ್ಮೆ ಐದು ವರ್ಷ ಕ್ರಿಮಿನಲ್ ಪ್ರಕರಣದಲ್ಲಿ ಜೈಲುವಾಸ ಸೇರಿದ್ದರೆ ಕೋವಿಯನ್ನು ಸಮೀಪದ ಠಾಣೆಗೆ ಠೇವಣಿ ಇಡಬೇಕು ಎಂದು ತಿಳಿಸಿದರು.
ಲೈಸನ್ಸ್ ಹೊಂದಿರುವವರು ಕೋವಿಯನ್ನು ಪೊಲೀಸ್ ಠಾಣೆಯಲ್ಲಿ ಕಡ್ಡಾಯವಾಗಿ ಠೇವಣಿ ಇಡಬೇಕು. ಒಂದೊಮ್ಮೆ ಕಾಡುಪ್ರಾಣಿಗಳ ಉಪಟಳ ಮತ್ತಿತರ ಅತ್ಯವಶ್ಯಕ ಕಾರಣಕ್ಕೆ ಕೋವಿಯ ಅವಶ್ಯಕತೆ ಇದ್ದರೆ ಪೊಲೀಸ್ ಠಾಣೆಯಲ್ಲಿ ಲಿಖಿತ ರೂಪದಲ್ಲಿ ಮಾಹಿತಿಗಳನ್ನು ನೀಡಿ ಅನುಮತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.ಕೊಡಗು ಜಿಲ್ಲೆಯ ಎಲ್ಲಾ ಗಡಿ ಭಾಗದಲ್ಲಿ ಜಿಲ್ಲೆಗೆ ಬರುವ ಎಲ್ಲಾ ವಾಹನಗಳ ತಪಾಸಣಾ ದಿನದ 24 ಗಂಟೆ ನಡೆಸಲಾಗುವುದು. ದಾಖಲಾತಿ ಇಲ್ಲದ ಹಣ ಮತ್ತು ವಸ್ತುಗಳನ್ನು ಸಾಗಿಸುವಂತಿಲ್ಲ ಒಟ್ಟಿನಲ್ಲಿ ಶಾಂತಿಯುತ ಚುನಾವಣೆ ನಡೆಸಲು ಸಕಲ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಅಪರ ಜಿಲ್ಲಾಧಿಕಾರಿ ವೀಣಾ ಮತ್ತಿತರರು ಹಾಜರಿದ್ದರು.