ಸಾರಾಂಶ
ಬಳ್ಳಾರಿ: ಪಾಲಿಕೆ ಆಡಳಿತದ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರು ಒಗ್ಗೂಡಿ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಇಲ್ಲಿನ ಜಿಪಂ ಸಭಾಂಗಣದಲ್ಲಿ ಜರುಗಿದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಶನಿವಾರ ಜರುಗಿತು.
ಸಭೆ ಶುರುವಾಗುತ್ತಿದ್ದಂತೆಯೇ ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳ ವಿರುದ್ಧ ಸದಸ್ಯರು ಕೆಂಡಮಂಡಲವಾದರು. ನಗರದ ಕಂಡು ಬರುವ ಅವ್ಯವಸ್ಥೆ, ವಾರ್ಡ್‌ಗಳಲ್ಲಿ ಅಪೂರ್ಣ ಕಾಮಗಾರಿಗಳು, ಸಮಸ್ಯೆ ಹೇಳಿಕೊಂಡ ಆರು ತಿಂಗಳಾದರೂ ಸ್ಪಂದಿಸದ ಅಧಿಕಾರಿ ಹಾಗೂ ಸಿಬ್ಬಂದಿಯ ನಡೆಯನ್ನು ಸಭೆಯಲ್ಲಿ ಸದಸ್ಯರು ಅನಾವರಣಗೊಳಿಸಿದರು.ಕಳೆದ ಒಂದೂವರೆ ವರ್ಷದಿಂದ ಪಾಲಿಕೆಯಿಂದ ಒಂದೇ ಒಂದು ಕೆಲಸವಾಗುತ್ತಿಲ್ಲ. ನಾವು ಸಭೆಗಳಿಗೆ ಕಾಫಿ ಕುಡಿದು, ಊಟ ಮಾಡಲು ಬಂದು ಹೋಗಬೇಕಾ ? ನಮ್ಮನ್ನು ಆಯ್ಕೆ ಮಾಡಿ ಕಳಿಸಿದ ಜನರಿಗೆ ಮುಖ ತೋರಿಸಲು ನಾಚಿಕೆಯಾಗುತ್ತಿದೆ.
ಸಾಮಾನ್ಯ ಸಭೆ ಏನಾಯಿತು. ಅಧಿಕಾರಿಗಳು ಬಂದಿದ್ರಾ ? ನೀವೇನು ಮಾತನಾಡಿದ್ರೀ ಎಂದು ಜನರು ವ್ಯಂಗ್ಯವಾಗಿ ಕೇಳುತ್ತಾರೆ. ಅವರಿಗೆ ಉತ್ತರ ಕೊಡಲು ಕಷ್ಟವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ನಾವು ಜನರಿಗೆ ನಾವು ಮುಖ ತೋರಿಸಲು ಕಷ್ಟವಾಗಿದೆ ಎಂದು ಪಾಲಿಕೆಯ ಸದಸ್ಯರು ಸಭೆಯಲ್ಲಿ ಅಸಮಾಧಾನ ಹೊರ ಹಾಕಿದರು.₹100 ಕೋಟಿ ತನಿಖೆಯಾಗಲಿ: ಅಮೃತ ಯೋಜನೆಯಡಿ ನಗರ ನೀರು ಸರಬರಾಜು ಮಂಡಳಿ ₹100 ಕೋಟಿಗೂ ಹೆಚ್ಚು ಖರ್ಚು ಮಾಡಿದೆ. ಈ ಕುರಿತು ಸಮಗ್ರ ಮಾಹಿತಿ ನೀಡಿ ಎಂದು ಪಾಲಿಕೆ ಸದಸ್ಯರು ಅಧಿಕಾರಿಗಳನ್ನು ಕೇಳಿದರು. ಇದಕ್ಕೆ ಸರಿಯಾದ ಉತ್ತರ ಸಿಗದೇ ಹೋಗುತ್ತಿದ್ದಂತೆಯೇ, ಅಮೃತ ಯೋಜನೆಯ ಕಾಮಗಾರಿಯ ತನಿಖೆಯಾಗಬೇಕು ಎಂದು ಎರಡು ಪಕ್ಷದ ಸದಸ್ಯರು ಒತ್ತಾಯಿಸಿದರು.ಇದಕ್ಕೆ ಉತ್ತರಿಸಿದ ಮೇಯರ್ ಮುಲ್ಲಂಗಿ ನಂದೀಶ್, ಈ ಸಂಬಂಧ ಸಮಿತಿಯನ್ನು ರಚಿಸಲಾಗುವುದು. ಪಿ.ಗಾದೆಪ್ಪ, ಪ್ರತಿಪಕ್ಷದ ಇಬ್ರಾಹಿಂಬಾಬು ಸೇರಿದಂತೆ ಇತರರು ಸಮಿತಿಯಲ್ಲಿ ಇರಲಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ವಾರ್ಡ್‌ಗಳಲ್ಲಿ ವಿದ್ಯುತ್ ಕಂಬಗಳ ಕೊರತೆಯಾಗಿದೆ. ಹೊಸ ಕಂಬಗಳನ್ನು ವಿತರಿಸುವಂತೆ ಈಗಾಗಲೇ ಸೂಚನೆ ನೀಡಲಾಗಿತ್ತು. ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ? ಎಂದು ಮೇಯರ್ ಮುಲ್ಲಂಗಿ ನಂದೀಶ್, ಜೆಸ್ಕಾಂ ಅಧಿಕಾರಿಯನ್ನು ಪ್ರಶ್ನಿಸಿದರು. ವಾರ್ಡ್‌ಗೆ 50ರಂತೆ ಎಲ್ಲ ವಾರ್ಡ್‌ಗಳಿಗೆ ಹೊಸ ವಿದ್ಯುತ್ ಕಂಬಗಳನ್ನು ಕೂಡಲೇ ವಿತರಿಸಿ. ಈ ತಿಂಗಳೊಳಗೆ ವಿದ್ಯುತ್ ಕಂಬಗಳ ಅಳವಡಿಕೆಯ ಕೆಲಸವೂ ಪೂರ್ಣಗೊಳಿಸಿ ಎಂದು ಸೂಚಿಸಿದರು.ಪಾಲಿಕೆ ಸದಸ್ಯೆ ಸುರೇಖಾ ಮಲ್ಲನಗೌಡ ಮಾತನಾಡಿ, ನಗರದ ಗುಂಡಿಗಳು ಹೆಚ್ಚಾಗಿವೆ. ಇದರಿಂದ ನಿತ್ಯ ಅಪಘಾತಗಳಾಗುತ್ತಿವೆ. ಗುಂಡಿಗಳನ್ನು ಮುಚ್ಚುವತ್ತ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ದೂರಿದರು.ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಪಾಲಿಕೆ ಸದಸ್ಯರು 12 ಬಾರಿ ಪತ್ರ ಬರೆದರೂ ಅಧಿಕಾರಿಗಳು ಉತ್ತರ ಕೊಡುವುದಿಲ್ಲ. ಸದಸ್ಯರ ಪರಿಸ್ಥಿತಿಯೇ ಹೀಗಾದರೆ ಜನ ಸಾಮಾನ್ಯರ ಗತಿ ಏನು ? ಎಂದು ಬಿಜೆಪಿಯ ಇಬ್ರಾಹಿಂಬಾಬು ಅವರು ಪ್ರಶ್ನಿಸಿದರು.ಪಾಲಿಕೆಯ ಬಿಜೆಪಿ ಸದಸ್ಯರಾದ ಗೋವಿಂದರಾಜುಲು, ಹನುಮಂತಪ್ಪ, ಹನುಮಂತ ಗುಡಿಗಂಟಿ, ಆಡಳಿತಾರೂಢ ಪಕ್ಷದ ಸದಸ್ಯರಾದ ವಿಕ್ರಮ್(ವಿಕ್ಕಿ), ಪಿ.ಗಾದೆಪ್ಪ, ಪ್ರಭಂಜನಕುಮಾರ್ ಮತ್ತಿತರ ಸದಸ್ಯರು ಸಭೆಯಲ್ಲಿ ಧ್ವನಿ ಎತ್ತಿದರು.