ಕನ್ನಡಪ್ರಭವಾರ್ತೆ ತುರುವೇಕೆರೆ

ಭಾರತ ಎಂಬ ಹೆಸರು ಬರುವ ಮುನ್ನ ಭಾರತಕ್ಕೆ ಇದ್ದ ಹೆಸರು ಹಿಂದೂಸ್ಥಾನ. ಸಿಂಧೂ ನದಿಯ ತಟದಲ್ಲಿದ್ದ ನಮ್ಮ ದೇಶವನ್ನು ಅನಾದಿಕಾಲದಿಂದ ಹಿಂದೂಸ್ಥಾನ ಎಂದೇ ಕರೆಯಲಾಗುತ್ತಿತ್ತು. ಹಾಗಾಗಿ ಭಾರತದಲ್ಲಿ ಹುಟ್ಟಿದವರೆಲ್ಲರೂ ಹಿಂದೂಗಳೇ ಎಂದು ಮಾದಿಹಳ್ಳಿ ರಾಮಕೃಷ್ಣ ಮಠದ ಸ್ವಾಮಿ ತದ್ಯುಕ್ತಾನಂದಜಿ ಮಹಾರಾಜ್ ಹೇಳಿದರು.

ಪಟ್ಟಣದಲ್ಲಿ ಹಿಂದೂ ಸಮಾಜೋತ್ಸವ ಸಮಿತಿಯಿಂದ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಸ್ವಾಮಿ ವಿವೇಕಾನಂದರು ಮತ್ತು ರಾಮಕೃಷ್ಣ ಪರಮಹಂಸರು ಹಿಂದೂ ಸಂಸ್ಕೃತಿಯ ಉಳಿವಿಗಾಗಿ ಹೋರಾಡಿದರು. ರಾಮಕೃಷ್ಣ ಪರಮಹಂಸರು ಎರಡು ಸಾವಿರ ವರ್ಷಗಳಲ್ಲಿ ಮಾಡಿದ ಹಿಂದೂ ಸಂಸ್ಕೃತಿಯ ಪ್ರಚಾರವನ್ನು ಕೇವಲ 25 ವರ್ಷಗಳಲ್ಲಿ ಸಾರಿದರು. ಸ್ವಾಮಿ ವಿವೇಕಾನಂದರು ಲೋಕಕ್ಕೆ ಶಿಕ್ಷಣ ನೀಡಿದರು. ಸನಾತನ ಧರ್ಮದ ಪ್ರಚಾರವನ್ನು ವಿದೇಶಗಳಲ್ಲೂ ಪ್ರಚುರಪಡಿಸಿದರು. ನಮ್ಮ ದೇಶದ ಸಂಸ್ಕೃತಿಯನ್ನು ವಿದೇಶಿಯರು ಇಷ್ಟಪಟ್ಟು ಕಲಿಯುತ್ತಿದ್ದಾರೆ. ಆದರೆ ನಮ್ಮಲ್ಲಿ ಸಂಸ್ಕೃತಿಯನ್ನು ಕಲಿಯಬೇಕೆಂಬ ಇಚ್ಚೆ ಇಲ್ಲದಾಗಿದೆ ಎಂದು ವಿಷಾದಿಸಿದರು.

ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರು ಹಿಂದೂ ಧರ್ಮ ಪ್ರಚಾರಕ್ಕಾಗಿ ಸ್ಥಾಪಿಸಿದ್ದ ಮಠಗಳು ಪ್ರಾರಂಭವಾಗಿ 140 ವರ್ಷಗಳು ಸಂದಿವೆ. ಪ್ರತಿಯೊಬ್ಬರೂ ಪ್ರತಿದಿನ ಭಾರತೀಯ ಸಂಸ್ಕೃತಿಯನ್ನು ಬಿತ್ತರಿಸುವ ಧರ್ಮ ಗ್ರಂಥಗಳನ್ನು ಕನಿಷ್ಠ ಎರಡು ಪುಟದಷ್ಟು ಓದಿದಲ್ಲಿ ನಮ್ಮ ಮನಸ್ಸು ಹರ್ಷಚಿತ್ತವಾಗುವುದು ಎಂದರು. ಆದಿಚುಂಚನಗಿರಿ ಶಾಖಾ ಮಠದ ಶ್ರೀ ರಾಜಯೋಗಾನಂದ ಸ್ವಾಮೀಜಿ ಮಾತನಾಡಿ, ಹಿಂದೂ ಎಂದರೆ ವಿಶ್ವಮಾನವ. ವಿಶ್ವಮಾನವ ಎಂದರೆ ವಿಶ್ವಕ್ಕೆ ಒಳಿತನ್ನು ಬಯಸುವವರು ಎಂದರ್ಥ. ಇಂತಹ ಉದಾತ್ತಭಾವನೆಯನ್ನು ಹೊಂದಿರುವ ನಮ್ಮ ಸಂಸ್ಕೃತಿಯನ್ನು ಹಾಳು ಮಾಡಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಅದನ್ನು ತಪ್ಪಿಸಿ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು. ಹಿಂದೂಗಳನ್ನು ಜಾಗೃತಿಗೊಳಿಸಲು ಗ್ರಾಮ ಗ್ರಾಮಗಳಲ್ಲಿ ಹಿಂದೂ ಸಮಾಜೋತ್ಸವ ನಡೆಯತ್ತಿರುವುದು ಸ್ವಾಗತಾರ್ಹವಾದ ಸಂಗತಿಯಾಗಿದೆ ಎಂದು ಗೋಡೆಕೆರೆ ಚರಪಟ್ಟಾಧ್ಯಕ್ಷರಾದ ಮೃತ್ಯುಂಜಯ ದೇಶೀಕೇಂದ್ರ ಸ್ವಾಮೀಜಿಗಳು ಹೇಳಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎನ್ನುವುದು ಭಾರತದ ಸಂಸ್ಕೃತಿಯನ್ನು ಕಾಪಾಡಲು, ಎತ್ತಿಹಿಡಿಯಲು ಇರುವ ಸಂಘಟನೆ. ಇಂತಹ ರಾಷ್ಟ್ರಪ್ರೇಮ ಸಂಘವನ್ನು ಕಂಡರೆ ಕೆಲವರಿಗೆ ಕೆಂಡ ಕಂಡಂತೆ ಆಗುತ್ತಿದೆ. ಭಾರತದಲ್ಲಿ ಹುಟ್ಟಿದವರೆಲ್ಲಾ ಭಾರತಾಂಬೆಯ ಪುತ್ರರು ಎಂದು ಹೇಳಲು ಹಿಂದೇಟು ಹಾಕುತ್ತಾರೆ ಎಂದು ಆರ್ ಎಸ್ ಎಸ್ ನ ನವೀನ್ ಸುಬ್ರಹ್ಮಣ್ಯ ಹೇಳಿದರು. ಪಟ್ಟಣದ ಗ್ರಾಮ ದೇವತೆ ಉಡುಸಲಮ್ಮ ದೇವಾಲಯದ ಮುಂಭಾಗದಿಂದ ಶೋಭಾಯಾತ್ರೆ ಆರಂಭಗೊಂಡಿತು. ನೂರಾರು ಯುವಕ ಯುವತಿಯರು ಭಗವಾನ್ ಧ್ವಜ ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ಹಲವಾರು ಪುಟಾಣಿ ಮಕ್ಕಳು ಮಹಾತ್ಮರ ವೇಷತೊಟ್ಟು ಸಾಗಿದರು. ವಿವಿಧ ಜಾನಪದ ಕಲಾಪ್ರಕಾರಗಳ ಮೆರವಣಿಗೆಯೂ ನಡೆಯಿತು.