ಸಾರಾಂಶ
ಗದಗ: ಕರಾವಳಿ ಮತ್ತು ಮಂಗಳೂರಿನಲ್ಲಿ ಧರ್ಮದ ಹೆಸರಲ್ಲಿ ನಡೆದ ಗಲಾಟೆಗಳಲ್ಲಿ ಜೈಲಿಗೆ ಹೋದವರು, ಕೊಲೆ ಆದವರೆಲ್ಲಾ ಹಿಂದುಳಿದ ವರ್ಗದ ಯುವಕರೇ ಆಗಿದ್ದಾರೆ. ಹಿಂದುಳಿದ ಜಾತಿಗಳಿಗೆ ಸೇರಿದ ಮಕ್ಕಳು ಧರ್ಮದ ಹೆಸರಿನಲ್ಲಿ ಇನ್ನೆಷ್ಟು ಬಲಿಯಾಗಬೇಕು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಶನಿವಾರ ಗದಗ ನಗರದ ಕನಕ ಭವನದಲ್ಲಿ ತಾಲೂಕು ಕುರುಬರ ಸಂಘದ ರಜತ ಮಹೋತ್ಸವ ಮತ್ತು ರಾಜ್ಯ ಮಟ್ಟದ ಕನಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಅಸಮಾನತೆ, ಜಾತಿ ಶೋಷಣೆಯಿಂದ ಲಾಭ ಮಾಡಿಕೊಳ್ಳುತ್ತಿರುವವರು ಸಮಾಜದ ಬದಲಾವಣೆಗೆ ವಿರೋಧವಿದ್ದಾರೆ. ಇವರು ಹಿಂದುಳಿದವರ ಮನೆಯ ಮಕ್ಕಳು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದೆ ಬರುವುದನ್ನು ಸಹಿಸುವುದಿಲ್ಲ. ಹೀಗಾಗಿ ದೇವರು, ಧರ್ಮದ ಹೆಸರಿನಲ್ಲಿ ಹಿಂದುಳಿದ ಜಾತಿಗಳ ಮನೆಯ ಮಕ್ಕಳನ್ನೇ ಬಲಿ ಆಗುವಂತೆ ಮಾಡುತ್ತಿದ್ದಾರೆ. ಆದ್ದರಿಂದ ಹೀಗೆ ಬಲಿ ಕೊಡುವವರ ಮಾತು ಕೇಳಿಕೊಂಡು ನಾವು ತಲೆ ಆಡಿಸುತ್ತಾ ಕೂರಬಾರದು ಎಂದು ಕಿವಿಮಾತು ಹೇಳಿದರು.
ಈಗ ಶಿಕ್ಷಿತರು ಎಂದು ಹೇಳಿಕೊಳ್ಳುವ ವೈದ್ಯರು, ಎಂಜಿನಿಯರ್‌ಗಳೂ ಮೌಢ್ಯ, ಕಂದಾಚಾರವನ್ನು ಪಾಲಿಸುತ್ತಿದ್ದಾರೆ. ಶಿಕ್ಷಿತರೇ ಹೆಚ್ಚು ಜಾತಿವಾದಿಗಳಾಗಿ ಸಮಾಜದ ಪ್ರಗತಿಗೆ ಅಡ್ಡಿ ಆಗುತ್ತಿದ್ದಾರೆ. ಸಹೋದರತ್ವ, ಸಮಾನತೆ ಮತ್ತು ಪರಧರ್ಮ ಸಹಿಷ್ಣುತೆ ನಮ್ಮ ಸಂವಿಧಾನ ನೀಡಿರುವ ಮಹೋನ್ನತ ಮೌಲ್ಯಗಳಾಗಿವೆ. ಈ ಮೌಲ್ಯಗಳೇ ಹಿಂದುಳಿದ ಜಾತಿ, ಸಮುದಾಯಗಳಿಗೆ ದೊಡ್ಡ ಶಕ್ತಿ ಎಂದರು.ನಾವೇ ನಂಬರ್ ಒನ್: ಸಿಎಂನಾವು ಎಲ್ಲಾ ಜಾತಿ, ಎಲ್ಲಾ ಧರ್ಮ ಮತ್ತು ಎಲ್ಲಾ ಪಕ್ಷದವರಿಗಾಗಿ ಜಾರಿಗೆ ತಂದ ಗ್ಯಾರಂಟಿ ಕಾರ್ಯಕ್ರಮಗಳಿಂದ ರಾಜ್ಯದ ಜನತೆ ತಲಾ ಆದಾಯದಲ್ಲಿ ದೇಶದಲ್ಲೇ ನಂಬರ್ ಒನ್ ಸ್ಥಾನಕ್ಕೆ ಏರಿದ್ದೇವೆ. ತಲಾ ಆದಾಯದಲ್ಲಿ ದೇಶದಲ್ಲಿ ನಾವೇ ನಂಬರ್ ಒನ್ ಆಗಿರುವುದೇ ರಾಜ್ಯದ ಆರ್ಥಿಕತೆ ಪ್ರಗತಿಯಲ್ಲಿರುವುದಕ್ಕೆ ಸ್ಪಷ್ಟ ಸಾಕ್ಷಿ ಎಂದು ಸಿದ್ದರಾಮಯ್ಯ ತಮ್ಮ ಸರ್ಕಾರದ ಸಾಧನೆಯನ್ನು ಹೆಮ್ಮೆಯಿಂದ ಬಣ್ಣಿಸಿದರು.