ಸಾರಾಂಶ
ರಾಜ್ಯ ಬಿಜೆಪಿ ಹಮ್ಮಿಕೊಂಡಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಚಲೋ ಹೋರಾಟ ಯಶಸ್ವಿಯಾಗಿದೆ. ಯಾವುದೇ ಕಾರಣಕ್ಕೂ ಹಿಂದೂ ಶ್ರದ್ಧಾ ಕೇಂದ್ರಗಳ ಮೇಲೆ ಕಾಂಗ್ರೆಸ್ ಸರ್ಕಾರದ ದಾಳಿ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
- ಕಾಂಗ್ರೆಸ್ ಕಾರ್ಯಕರ್ತರು ಪೇಮೆಂಟ್ ಗಿರಾಕಿಗಳು: ರೇಣುಕಾಚಾರ್ಯ ಲೇವಡಿ - - -
ಕನ್ನಡಪ್ರಭ ವಾರ್ತೆ ದಾವಣಗೆರೆರಾಜ್ಯ ಬಿಜೆಪಿ ಹಮ್ಮಿಕೊಂಡಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಚಲೋ ಹೋರಾಟ ಯಶಸ್ವಿಯಾಗಿದೆ. ಯಾವುದೇ ಕಾರಣಕ್ಕೂ ಹಿಂದೂ ಶ್ರದ್ಧಾ ಕೇಂದ್ರಗಳ ಮೇಲೆ ಕಾಂಗ್ರೆಸ್ ಸರ್ಕಾರದ ದಾಳಿ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮದ ಉಳಿವಿಗಾಗಿ ಧರ್ಮಯುದ್ಧ ಘೋಷಣೆಯಡಿ ಧರ್ಮಸ್ಥಳದಲ್ಲಿ ಏರ್ಪಡಿಸಿದ್ದ ಸಮಾವೇಶದಲ್ಲಿ 1.5 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಶ್ರೀ ಮಂಜುನಾಥ ಸ್ವಾಮಿ ಭಕ್ತರು ಪಾಲ್ಗೊಂಡಿದ್ದರು. ಇಲ್ಲಿ ಭಾಗಿಯಾದವರೆಲ್ಲ ಹಣ ಕೊಟ್ಟು ಕರೆ ತಂದ ಜನರಲ್ಲ. ಎಲ್ಲರೂ ಸ್ವಪ್ರೇರಿತರಾಗಿ ತಮ್ಮದೇ ಖರ್ಚಿನಲ್ಲಿ ಶ್ರೀಕ್ಷೇತ್ರಕ್ಕೆ ಬಂದ ಭಕ್ತರು. ನಿಮ್ಮಂತೆ ಸರ್ಕಾರಿ ಹಣದಲ್ಲಿ ಸಮಾವೇಶ ಮಾಡಿಲ್ಲ. ಕಾಂಗ್ರೆಸ್ಸಿನ ಕಾರ್ಯಕರ್ತರು ಪೇಮೆಂಟ್ ಗಿರಾಕಿಗಳು ಎಂದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹಗುರ ಮಾತು ನಿಲ್ಲಿಸಲಿ ಎಂದರು.ರಾಜ್ಯ ಸರ್ಕಾರ ಧರ್ಮಸ್ಥಳ ಪ್ರಕರಣ ತನಿಖೆ ದಾರಿ ತಪ್ಪಿಸುವ ಸಾಧ್ಯತೆ ಇದೆ. ಬುರುಡೆ ಗ್ಯಾಂಗ್‌ನ ಹಗರಣಗಳು ದಿನಕ್ಕೊಂದರಂತೆ ಹೊರಬರುತ್ತಿವೆ. ಇದೀಗ ಜಾರಿ ನಿರ್ದೇಶನಾಲಯವೂ ರಂಗಪ್ರವೇಶ ಮಾಡಿದೆ. ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡಿದವರ ಹಣದ ಮೂಲ ಪತ್ತೆಯಾಗಬೇಕು. ಇಡೀ ಪ್ರಕರಣ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು. ಸೌಜನ್ಯ ಕೊಲೆ ಪ್ರಕರಣದಲ್ಲಿ ಮೃತ ಬಾಲಕಿಗೆ ನ್ಯಾಯ ಸಿಗಬೇಕು ಎಂದರು.
ಪಕ್ಷದ ಮುಖಂಡರಾದ ಚಂದ್ರಶೇಖರ ಪೂಜಾರ, ಧನಂಜಯ ಕಡ್ಲೆಬಾಳ್, ಅನಿಲಕುಮಾರ ನಾಯ್ಕ, ತಾರೇಶ ನಾಯ್ಕ, ರಾಜು ವೀರಣ್ಣ, ಪ್ರವೀಣ ಜಾಧವ್ ಇತರರು ಇದ್ದರು.- - -
(ಕೋಟ್) ಬುಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅವರ ಬಗ್ಗೆ ಗೌರವವಿದೆ. ಇಂತಹ ಪ್ರಶಸ್ತಿ ಬರಲು ಕಾರಣರಾದ ಲೇಖಕಿ, ಅನುವಾದಕಿ ದೀಪಾ ಭಾಸ್ತಿ ಅವರನ್ನೇಕೆ ಮೈಸೂರು ದಸರಾ ಉತ್ಸವಕ್ಕೆ ಆಹ್ವಾನ ನೀಡಿಲ್ಲ. ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿ. ಡಿಸಿಎಂ ಡಿ.ಕೆ.ಶಿವಕುಮಾರ್ ತಾಕತ್ತಿದ್ದರೆ ಚಾಮರಾಜ ಪೇಟೆಯ ಮಸೀದಿ ಮುಸ್ಲಿಮರ ಆಸ್ತಿ ಅಲ್ಲ ಅಂತಾ ಹೇಳಲಿ ನೋಡೋಣ. ಕಾಂಗ್ರೆಸ್ ಸರ್ಕಾರ ಓಟು ಬ್ಯಾಂಕ್ ರಾಜಕಾರಣ ಕೈಬಿಡಬೇಕು.- ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ.
- - --3ಕೆಡಿವಿಜಿ13, 14: ದಾವಣಗೆರೆಯಲ್ಲಿ ಬುಧವಾರ ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.