ಜ. 5ರಂದು ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಕೊಪ್ಪಳಕ್ಕೆ ಆಗಮಿಸಲಿದ್ದಾರೆ. ಈ ವೇಳೆಗೆ ಬೆಟಗೇರಿ ರೈಲ್ವೆ ಹೋರಾಟ ಸಮಿತಿಯಿಂದ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡಲಾಗುವುದು.

ಗದಗ: ₹24 ಕೋಟಿ ಖರ್ಚು ಮಾಡಿ ಗದಗ ರೈಲ್ವೆ ನಿಲ್ದಾಣ ಉನ್ನತೀಕರಿಸಲಾಗಿದೆ. ಸುಮಾರು 30 ರೈಲುಗಳು ವಿಜಯಪುರದಿಂದ ಎರಡೂ ಕಡೆ ಸಂಚರಿಸುತ್ತವೆ. ವಿಜಯಪುರದಿಂದ ಹುಬ್ಬಳ್ಳಿಗೆ ಸಂಚರಿಸುವ ಎರಡು ಕಡೆಗಿನ ಎಂಜಿನ್ ರೈಲುಗಳನ್ನು ಓಡಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದು ಬೆಟಗೇರಿ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ಬೇಸರ ವ್ಯಕ್ತಪಡಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ. 5ರಂದು ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಕೊಪ್ಪಳಕ್ಕೆ ಆಗಮಿಸಲಿದ್ದಾರೆ. ಈ ವೇಳೆಗೆ ಬೆಟಗೇರಿ ರೈಲ್ವೆ ಹೋರಾಟ ಸಮಿತಿಯಿಂದ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡಲಾಗುವುದು. ನಮ್ಮ ಮನವಿಗೆ ಸಚಿವರು ಸ್ಪಂದಿಸಬೇಕು. ಸ್ಪಂದಿಸದಿದ್ದರೇ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಜಿಲ್ಲೆಯ ಎಲ್ಲ ಸಂಘ- ಸಂಸ್ಥೆಗಳ ಮುಖಂಡರು ರೈಲ್ವೆ ಹೋರಾಟಕ್ಕೆ ಅಣಿಯಾಗಬೇಕು.

ಉತ್ತಮ ಮತ್ತು ಎಲ್ಲ ವ್ಯವಸ್ಥೆ ಹೊಂದಿ ಮೇಲ್ದರ್ಜೆಗೆ ಪರಿವರ್ತನೆಗೊಂಡ ಗದಗ ರೈಲು ನಿಲ್ದಾಣವನ್ನು ಕೆಳದರ್ಜೆಗೆ ಕೊಂಡೊಯ್ಯಲು ಈ ಹೊಂಬಳ ಗೇಟ್ ಹತ್ತಿರ ಕೋಟ್ಯಂತರ ರು.ಗಳಿಂದ ನಿಲ್ದಾಣವನ್ನು ಸಾರ್ವಜನಿಕರ ಗಮನಕ್ಕೆ ತರದೇ ನಿರ್ಮಿಸಲಾಗಿದೆ. ಹುಬ್ಬಳ್ಳಿ ಕಡೆಯಿಂದ ಸೊಲ್ಲಾಪುರ, ಸೊಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋಗುವ ರೈಲು ಗಾಡಿಗಳು ಸಧ್ಯ ಇರುವ ಗದಗ ರೈಲು ನಿಲ್ದಾಣಕ್ಕೆ ಬರದೇ ಬೈಪಾಸ್ ಮೂಲಕ ಚಲಿಸುತ್ತವೆ ಎಂಬ ಮಾಹಿತಿ ತಿಳಿದುಬಂದಿದ್ದು, ಇದು ದುರಂತದ ಸಂಗತಿ ಎಂದರು.

ಸಚಿವ ಎಂ.ಬಿ. ಪಾಟೀಲ ಹಾಗೂ ಸಂಸದ ರಮೇಶ ಜಿಗಜಿಣಗಿ ಅವರು ಈ ಕುರಿತು ಬಹಳಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಅವರು ಕೇವಲ ವಿಜಯಪುರದಿಂದ ಬೆಂಗಳೂರಿಗೆ ತಮ್ಮ ಅನುಕೂಲದ ಬಗ್ಗೆ ವಿಚಾರ ಮಾಡುತ್ತಿದ್ದು, ಆ ಭಾಗದ ಸಾಮಾನ್ಯ ಪ್ರಯಾಣಿಕರ ಬಗ್ಗೆ ವಿಚಾರ ಮಾಡುತ್ತಿಲ್ಲ. ಇದು ಅವೈಜ್ಞಾನಿಕ ನಿರ್ಣಯವಾಗಿದೆ. ಇವರು ಈ ನಿರ್ಣಯ ಬದಲಾಗಿ ಲೋಕೊ ಮೋಟಿವ್(ಎರಡು ಕಡೆ ಎಂಜಿನ್‌ಗಳು ಹೊಂದಿರುವ) ರೈಲುಗಳು ಈ ಭಾಗದಲ್ಲಿ ಸಂಚರಿಸುವಂತಾದರೆ ಎಲ್ಲ ಪ್ರಯಾಣಿಕರಿಗೆ ಅನುಕೂಲವಾಗುವುದು ಎಂದರು.

ಈ ವೇಳೆ ಎಸ್.ವಿ. ಸೋಲಾಕೆ, ಅರ್ಜುನಸಾ ಮೇರವಾಡೆ, ಕೃಷ್ಣಸಾ ಮೇರವಾಡೆ, ಆಂಜನೇಯ ಗುಂದಕಲ್, ಸಂಧ್ಯಾ ಗುಂಡಿ, ಬೋಜಪ್ಪ ಹೆಗಡಿ ಉಪಸ್ಥಿತರಿದ್ದರು.