ಒಗ್ಗಟ್ಟಿನಿಂದ ಎಲ್ಲ ಕಾರ್ಯಗಳು ಸುಗಮ

| Published : Nov 11 2024, 12:53 AM IST / Updated: Nov 11 2024, 12:54 AM IST

ಸಾರಾಂಶ

ನಾವು ಏನಾದರೂ ಆಗು ಮೊದಲು ಮಾನವನಾಗು ಎಂಬ ಕವಿವಾಣಿಯಂತೆ ದಾನ ಧರ್ಮ ಮಾಡುವುದರ ಮೂಲಕ ಮಾನವೀಯ ಮೌಲ್ಯ ಮೈಗೂಡಿಸಿಕೊಳ್ಳಬೇಕು

ಗದಗ: ಒಗ್ಗಟ್ಟಿನಿಂದ ಕೈಗೊಂಡ ಎಲ್ಲ ಕಾರ್ಯಗಳು ಸುಗಮವಾಗುತ್ತವೆ ಎಂದು ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡ್ರ ಹೇಳಿದರು.

ಅವರು ಗದಗ ತಾಲೂಕಿನ ಬಳಗಾನೂರನಲ್ಲಿ ಜರುಗಿದ ನೂತನವಾಗಿ ಜೀರ್ಣೋದ್ಧಾರಗೊಂಡ ವೀರಭದ್ರೇಶ್ವರ ದೇವಸ್ಥಾನದ ಕಟ್ಟಡ ಉದ್ಘಾಟಿಸಿ ನಂತರ ನಡೆದ ಧಾರ್ಮಿಕ ಚಿಂತನ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದರು.

ಸುಕ್ಷೇತ್ರ ಬಳಗಾನೂರ ಗ್ರಾಮದಲ್ಲಿ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಕಾರ್ಯ ಚಟುವಟಿಕೆ ನಡೆಯುತ್ತಿರುವುದು ನಮ್ಮೆಲ್ಲರಿಗೂ ಸಂತೋಷವಾಗುತ್ತಿದೆ. ಸಾಮಾಜಿಕ, ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡು ಪುನೀತರಾಗಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಶಿವಶಾಂತವೀರ ಶರಣರು ಮಾತನಾಡಿ, ಮಾನವ ಮಾನವೀಯ ಮೌಲ್ಯಗಳೊಂದಿಗೆ ಧಾರ್ಮಿಕ. ಸಾಮಾಜಿಕ, ಆಧ್ಯಾತ್ಮಿಕ ಚಿಂತನೆಗಳೊಂದಿಗೆ ಉತ್ತಮ ಹಾದಿಯಲ್ಲಿ ಮುನ್ನಡೆಯಬೇಕಾದರೆ ನಾವು ಏನಾದರೂ ಆಗು ಮೊದಲು ಮಾನವನಾಗು ಎಂಬ ಕವಿವಾಣಿಯಂತೆ ದಾನ ಧರ್ಮ ಮಾಡುವುದರ ಮೂಲಕ ಮಾನವೀಯ ಮೌಲ್ಯ ಮೈಗೂಡಿಸಿಕೊಳ್ಳಬೇಕು ಎಂದರು.

ವೇದಿಕೆ ಮೇಲೆ ಶಿವಕುಮಾರ ಸ್ವಾಮೀಜಿ, ಸೊರಬ ತಾಲೂಕಿನ ಹಿರೇಮಾಗಡಿಯ ಮುರುಗರಾಜೇಂದ್ರ ಶ್ರೀಗಳು, ಗ್ರಾಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಚೆನ್ನಯ್ಯ ಶಾಂತನಮಠ ಹಾಜರಿದ್ದರು. ವೀರಭದ್ರೇಶ್ವರ ಟ್ರಸ್ಟ್ ಅಧ್ಯಕ್ಷ ಶಂಕರಗೌಡ ಕಾಶೀಗೌಡರ, ಕಾರ್ಯದರ್ಶಿ ಡಾ. ಶಿವಕುಮಾರ ಹಿರೇಮಠ, ಎಸ್.ಬಿ. ಚಟ್ರಿ ಹಾಗೂ ಎಂ.ಎ .ಪಾಟೀಲ ದೇವಸ್ಥಾನಕ್ಕೆ ದೇಣಿಗೆ ನೀಡಿದ ಭಕ್ತರ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಎಂ.ಬಿ. ಮಡಿವಾಳ ಸ್ವಾಗತಿಸಿದರು. ವಿಜಯಕುಮಾರ್ ಕರುಮಡಿ ನಿರೂಪಿಸಿದರು.