ಅಲ್ಲಹಳ್ಳಿ ಪಾರ್ವತಾಂಬಾ ಜಾತ್ರಾ ಮಹೋತ್ಸವ ಅದ್ಧೂರಿ

| Published : Nov 12 2025, 02:00 AM IST

ಅಲ್ಲಹಳ್ಳಿ ಪಾರ್ವತಾಂಬಾ ಜಾತ್ರಾ ಮಹೋತ್ಸವ ಅದ್ಧೂರಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಹಸಗೂಲಿ ಗ್ರಾಮದಲ್ಲಿ ಅಲ್ಲಹಳ್ಳಿ ಪಾರ್ವತಾಂಬಾ ಜಾತ್ರಾ ಮಹೋತ್ಸವ ಮಂಗಳವಾರ ಮಧ್ಯಾಹ್ನ ಜನಸಾಗರದ ನಡುವೆ ಸಂಭ್ರಮ, ಸಡಗರದಿಂದ ನಡೆಯಿತು.

ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ

ತಾಲೂಕಿನ ಹಸಗೂಲಿ ಗ್ರಾಮದಲ್ಲಿ ಅಲ್ಲಹಳ್ಳಿ ಪಾರ್ವತಾಂಬಾ ಜಾತ್ರಾ ಮಹೋತ್ಸವ ಮಂಗಳವಾರ ಮಧ್ಯಾಹ್ನ ಜನಸಾಗರದ ನಡುವೆ ಸಂಭ್ರಮ, ಸಡಗರದಿಂದ ನಡೆಯಿತು.

ಗ್ರಾಮದಲ್ಲಿ ಕಸಕಲಪುರ ಪಾರ್ವತಾಂಬಾ ದೇವಿಯ ವಿಗ್ರಹ ಹೊತ್ತ ಹೂವಿನ ತೇರಿನಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾರ್ವತಾಂಬಾೆಗೆ ಜೈಕಾರ ಹಾಕುತ್ತಾ ಜನರು ಉತ್ಸಾಹದಿಂದ ಎಳೆದರು. ಈ ಜಾತ್ರೆಗೆ ಸೋಮವಾರ ರಾತ್ರಿಯೇ ಸಾವಿರಾರು ಜಾನುವಾರುಗಳು ಹಾಗೂ ನೂರಾರು ಎತ್ತಿನಗಾಡಿಯಲ್ಲಿ ಆಗಮಿಸಿದ್ದರು.

ತಾಲೂಕಿನ ಹಾಗೂ ನೆರೆಯ ತಾಲೂಕಿನ ಆರಾಧ್ಯ ದೈವವಾದ ಪಾರ್ವತಾಂಬಾ ದೇವಿಗೆ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರು.ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಬೀಡು ಬಿಟ್ಟಿದ್ದರು. ಜಾತ್ರಾ ಮಾಳದಲ್ಲಿ ಬಾಯಿ ಬೀಗ ಹಾಕಿಸಿಕೊಂಡ ನೂರಾರು ಮಂದಿ ಭಕ್ತರು ದೇವಿಯ ಹರಕೆ ತೀರಿಸಿದರು.ಜಾತ್ರೆಗೆ ಆಗಮಿಸಿದ್ದ ಸಹಸ್ರಾರು ಮಂದಿಗೆ ಗ್ರಾಮದ ಕೆಲ ಪ್ರಮುಖ ಮುಖಂಡರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಿದ್ದರು.

ತಾಲೂಕಿನ ಬಹುತೇಕ ಗ್ರಾಮದ ಜನರು ಎತ್ತಿನ ಗಾಡಿ,ಗೂಡ್ಸ್ ಆಟೋ,ಕಾರು,ಬೈಕ್‌ಗಳಲ್ಲಿ ಆಗಮಿಸಿದರೂ ಹಸಗೂಲಿಯಲ್ಲಿ ತುಂಬೆಲ್ಲ ಜನರು ತುಂಬಿ ತುಳುಕುತ್ತಿದ್ದರು. ದೇವಿಗೆ ದರ್ಶನಕ್ಕೆ ಬಂದ ಸಾವಿರಾರು ಭಕ್ತರು ಗರಗನಹಳ್ಳಿ ಗೇಟ್ ನಿಂದ ಬಿರು ಬಿಸಿಲಿನಲ್ಲಿ ಹೆಂಗಸರು,ಮಕ್ಕಳು ಎನ್ನದೆ ಪುರುಷರು ದೇವಸ್ಥಾನದ ತನಕ ನಡೆದು ಸಾಗಿಸಿದರು.

ಈ ಜಾತ್ರೆಯ ಮತ್ತೊಂದು ವಿಶೆಷ ಎಂದರೆ ಹರಕೆ ಹೊತ್ತ ಭಕ್ತರು ಸೆವಂತಿಗೆ ಹೂವು ನೀಡುವುದು ವಾಡಿಕೆ.ಹಾಗಾಗಿ ರಥವೆಲ್ಲ ಸೇವಂತಿಗೆ ಹೂವಿದ್ದ ಕಾರಣ ಹೂವಿನ ತೇರಿನಂತೆ ಕಂಡು ಬಂತು. ಜಾತ್ರಾ ಮಾಳದಲ್ಲಿ ಮಕ್ಕಳ ಆಟ ವಾಡಲು ಆಟಿಕೆ ಸಾಮಾಗ್ರಿ ಹಾಗೂ ಸಿಹಿ ತಿಂಡಿಗಳ ಅಂಗಡಿಗಳಿಗು ಪ್ರತ್ಯೇಕ ಕಡೆ ವ್ಯವಸ್ಥೆ ಮಾಡಿದ್ದ ಕಾರಣ ಜನರು ಗ್ರಾಮದಲ್ಲಿ ರಥೋತ್ಸವ ಸಾಗಲು ಅನುಕೂಲವಾಯಿತು.

ಎಂದಿನಂತೆ ಜಾತ್ರೆಗೆ ಬರಲು ಗುಂಡ್ಲುಪೇಟೆ ಹಾಗೂ ಗರಗನಹಳ್ಳಿ ಗೇಟ್‌ನಿಂದ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಿದ್ದರೂ ಪ್ಯಾಸೆಂಜರ್ ಆಟೋ,ಗೂಡ್ಸ್ ಆಟೋ ಜನರನ್ನು ಕುರಿಗಳಂತೆ ತುಂಬಿಕೊಂಡು ಸಂಚರಿಸಿದವು.

ಹಸಗೂಲಿ ಜಾತ್ರೆಗೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಮಾಜಿ‌ ಶಾಸಕ ಸಿ.ಎಸ್.ನಿರಂಜನ್ ಕುಮಾರ್, ಕಾಡ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್, ಹಾಪ್ ಕಾಮ್ಸ್ ಅಧ್ಯಕ್ಷ ಎಂ.ನಾಗೇಶ್ ಸೇರಿದಂತೆ ವಿವಿಧ ರಾಜಕೀಯ ಪಕ್ಷದ ಗಣ್ಯರು ಭಾಗವಹಿಸಿ ದೇವಿಯ ದರ್ಶನ ಪಡೆದರು.

ಬೇಗೂರು ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಮೋಹಿತ್ ಅವರ ನೇತೃತ್ವದಲ್ಲಿ ಸಿಬ್ಬಂದಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.