ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯ ಶ್ರೀಮಠದಲ್ಲಿ ನಡೆದ ಅಲ್ಲಮಪ್ರಭು ಜಯಂತಿ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ‌ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಅಲ್ಲಮ ಪ್ರಭುಗಳು ಕೇವಲ ವಚನಕಾರರಲ್ಲ ಅವರು ಅಪ್ರತಿಮ ತ್ರಿಕಾಲ ಜ್ಞಾನಿಗಳು ಅವರಲ್ಲಿನ ಅಧ್ಯಾತ್ಮದ ಆಳ ಮತ್ತು ಅನುಭವವನ್ನು ಗೌರವಿಸಿ ಬಸವಣ್ಣನವರು ಅವರನ್ನು ಅನುಭವ ಮಂಟಪದ ಅಧ್ಯಕ್ಷರನ್ನಾಗಿ ಮಾಡಿದ್ದರು ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸಾಣೇಹಳ್ಳಿಯ ಶ್ರೀಮಠದಲ್ಲಿ ನಡೆದ ಅಲ್ಲಮಪ್ರಭು ಜಯಂತಿಯ ದಿವ್ಯ ಸಾನ್ನಿಧ್ಯ ವಹಿಸಿ‌ ಮಾತನಾಡಿ ಅಪ್ಪಟ ಅಧ್ಯಾತ್ಮಿಕ ತೇಜಸ್ಸನ್ನು ಹೊಂದಿದ್ದ ಅಲ್ಲಮಪ್ರಭುಗಳು ವಯೋವೃದ್ಧರು ಮಾತ್ರವಲ್ಲದೆ ಅನುಭವವೃದ್ಧರೂ ಆಗಿದ್ದರು. ಅಲ್ಲಮ ಪ್ರಭುಗಳು ನಟುವರ ಜಾತಿಯಲ್ಲಿ ಜನಿಸಿದವರಾದರೂ ಬಸವಣ್ಣನವರು ಎಂದೂ ಜಾತಿಯನ್ನು ನೋಡಲಿಲ್ಲ. ಬದಲಾಗಿ ಅವರಲ್ಲಿದ್ದ ವಿದ್ವತ್ತು ಮತ್ತು ಅನುಭವಕ್ಕೆ ಮನ್ನಣೆ ನೀಡಿದರು. ಇದು ಅಂದಿನ ಕಾಲದ ಸಾಮಾಜಿಕ ಕ್ರಾಂತಿಗೆ ಹಿಡಿದ ಕನ್ನಡಿಯಾಗಿದೆ‌ ಎಂದರು.

ಅಲ್ಲಮ ಪ್ರಭುಗಳು ದೊಡ್ಡ ಸ್ಥಾನದಲ್ಲಿದ್ದರೂ ಎಂದಿಗೂ ಅಹಂಕಾರ ಪಟ್ಟವರಲ್ಲ. ವಯಸ್ಸಿನಲ್ಲಿ ಹಿರಿಯರಾಗಿದ್ದರೂ ಅಕ್ಕಮಹಾದೇವಿಯವರನ್ನು ಶರಣಾರ್ಥಿ ತಾಯಿ ಎಂದು ಸಂಬೋಧಿಸುವ ಮೂಲಕ ಸ್ತ್ರೀ ಕುಲಕ್ಕೆ ಗೌರವ ನೀಡಿದ್ದರು. ಅಲ್ಲದೆ ಚನ್ನಬಸವಣ್ಣನವರನ್ನು ಮಹಾಜ್ಞಾನಿಗಳು ಎಂದು ಕರೆಯುವ ಮೂಲಕ ಕಿರಿಯರ ಜ್ಞಾನವನ್ನೂ ಗೌರವಿಸುತ್ತಿದ್ದರು.

ಅವರ ಈ ತತ್ತ್ವಗಳು ಮತ್ತು ಜೀವನ ಶೈಲಿ ಇಂದಿನ ಜನಪ್ರತಿನಿಧಿಗಳಿಗೆ, ಮಠಾಧೀಶರಿಗೆ ಹಾಗೂ ಸಾರ್ವಜನಿಕರಿಗೆ ಅತ್ಯಂತ ಅವಶ್ಯಕವಾಗಿದೆ ಅವರ ಹಾದಿಯಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.

ಈ ಸಂದರ್ಭದಲ್ಲಿ ಕಲಾಸಂಘದ ಕಾರ್ಯದರ್ಶಿ ಎಸ್ ಕೆ ಪರಮೇಶ್ವರಯ್ಯ, ಮುಖ್ಯೋಪಾಧ್ಯಾಯ ಬಸವರಾಜ್, ಮಹಾಬಲೇಶ್ವರ, ರಂಗಶಾಲೆಯ ಪ್ರಾಂಶುಪಾಲ ರಘು, ಕಲಾಸಂಘದ ಸದಸ್ಯ ಸಾ ನಿ ರವಿಕುಮಾರ್, ನಿರ್ದೇಶಕ ವೈ ಡಿ ಬದಾಮಿ, ರಾಜು ಹಾಗೂ ರಂಗಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.