ಸಾರಾಂಶ
ಮೈಸೂರು : ಮುಡಾ ಹಗರಣ ಸಂಬಂಧ ನನ್ನ ಮೇಲೆ ಬಂದಿರುವ ಆರೋಪ ಸುಳ್ಳು. ನಾನು ಸ್ನೇಹಮಯಿ ಕೃಷ್ಣ ಕುಟುಂಬಕ್ಕೆ ಯಾವುದೇ ಆಮಿಷ ಒಡ್ಡಿಲ್ಲ ಎಂದು ಬಿಜೆಪಿ ಮುಖಂಡ ಕೆ. ಹರ್ಷ ಸ್ಪಷ್ಟಪಡಿಸಿದರು.
ನನ್ನ ಸ್ನೇಹಿತರಾದ ಶ್ರೀನಿಧಿ ಜೊತೆ ಮಾತನಾಡಲು ಹೋಗಿದ್ದೆ. ಸ್ಥಳೀಯ ಸಂಸ್ಥೆ ಚುನಾವಣೆ ಸಂಬಂಧ ಮಾಹಿತಿ ಕೇಳಲು ಹೋಗಿದ್ದೆ ಅಷ್ಟೇ. ಸ್ನೇಹಮಯಿ ಕೃಷ್ಣ ಒಬ್ಬ ಒಳ್ಳೆಯ ಹೋರಾಟಗಾರ. ಸಿಎಂ ಕುಟುಂಬಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ನಾನು ಬಿಜೆಪಿಯ ಕಾರ್ಯಕರ್ತ. ಇದೆಲ್ಲ ಸುಳ್ಳು ಆರೋಪ ಮಾಡಿದ್ದಾರೆ.
ನನ್ನ ಮೇಲೆ ಯಾಕೆ ಈ ರೀತಿ ಆರೋಪ ಮಾಡಿದ್ದಾರೆ ಗೊತ್ತಿಲ್ಲ. ಈ ಬಗ್ಗೆ ಯಾವುದೇ ತನಿಖೆಗೆ ಸಿದ್ಧ. ಕಾನೂನು ಹೋರಾಟ ಕುರಿತು ನಮ್ಮ ವಕೀಲರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇನೆ ಎಂದು ಅವರು ಹೇಳಿದರು.
ಹರ್ಷ ಸ್ನೇಹಿತ ಜಗದೀಶ್ ಇದ್ದರು.ಹರ್ಷಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ:ಮುಡಾ ಹಗರಣ ದೂರುದಾರ ಸ್ನೇಹಮಯಿ ಕೃಷ್ಣ ನಿವಾಸಕ್ಕೆ ಭೇಟಿ ನೀಡಿದ ಹರ್ಷ ಕಳೆದ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲನುಭವಿಸಿದರು.
ಆ ಬಳಿಕ ಹರ್ಷ ಪಕ್ಷದಿಂದ ದೂರ ಉಳಿದಿದ್ದಾರೆ. ಹರ್ಷ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿ ಉಳಿದಿಲ್ಲ. ಹರ್ಷ ಬಹುಶಃ ಕಾಂಗ್ರೆಸ್ ಪಕ್ಷ ಸೇರಬಹುದು. ಹೀಗಾಗಿ, ಸಿಎಂ ಸಿದ್ದರಾಮಯ್ಯ ಪರವಾಗಿ ಸಂಧಾನ ಮಾಡಲು ಸ್ನೇಹಮಯಿ ಕೃಷ್ಣ ಮನೆಗೆ ಹೋಗಿರಬಹುದು. ಹರ್ಷಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ನಗರ ವಕ್ತಾರ ಎನ್.ಎ. ಮೋಹನ್ ಸ್ಪಷ್ಟಪಡಿಸಿದ್ದಾರೆ.