ಬಸವ ಮಂಟಪ ಪುಸ್ತಕದಲ್ಲಿನ ವಿವಾದಾತ್ಮಕ ಅಂಶಗಳು, ರವಿ ಹಂಜ್ ಅವರ ಬರಹಗಳು ಪತ್ರಿಕೆಯಲ್ಲಿ ಈ ವಿಷಯಗಳು ಪತ್ರಿಕೆಯಲ್ಲಿ ಪ್ರಕಟವಾಗಲು ಸಹಕರಿಸಿದವರು ಸೇರಿದಂತೆ ಸಂಬಂಧಪಟ್ಟವರ ಪಾತ್ರದ ಕುರಿತು ಸಮಗ್ರ ತನಿಖೆ ನಡೆಸಬೇಕು.

ಮುಂಡಗೋಡ: ದೇಶದಲ್ಲಿ ಮಾನವ ಹಕ್ಕು ಮತ್ತು ಸಮಾನತೆಗಾಗಿ ಹೋರಾಟ ಮಾಡಿದ ಮಹಾನ್ ವ್ಯಕ್ತಿಗಳನ್ನು ಖಳನಾಯಕರನ್ನಾಗಿ ಬಿಂಬಿಸುವಂಥ ಹುನ್ನಾರ ನಡೆಯುತ್ತಿದೆ ಎಂದು ಅತ್ತಿವೇರಿ ಬಸವಧಾಮದ ಶ್ರೀ ಮಾತೆ ಬಸವೇಶ್ವರಿ ಅವರು ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ್ಳೆಯವರನ್ನು ಕೆಟ್ಟವರನ್ನಾಗಿ ಬಿಂಬಿಸುವ ಹಾಗೂ ಸಮಾಜದಲ್ಲಿ ಮೋಸ, ಅನ್ಯಾಯ, ಸುಲಿಗೆ ವಂಚನೆ ಮಾಡಿದವರನ್ನು ಮಹಾನಾಯಕರನ್ನಾಗಿ ಮಾಡುವ ಕೆಲಸ ನಡೆಯುತ್ತಿದೆ. ಬಸವಣ್ಣ ಕೇವಲ ಲಿಂಗಾಯತ ಧರ್ಮಕ್ಕೆ ಮಾತ್ರ ಸೀಮಿತರಲ್ಲ. ಬದಲಾಗಿ ಸರ್ವ ಜನಾಂಗದ ಮಾನವ ಹಕ್ಕುಗಳಿಗೆ ಹೋರಾಟ ಮಾಡಿದವರು. ಅಂತಹ ಬಸವಣ್ಣನವರ ಕುರಿತು ಅವಹೇಳನಕಾರಿ ಹಾಗೂ ಇತಿಹಾಸಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಅಂಶಗಳನ್ನು ಒಳಗೊಂಡಿದೆ ಎನ್ನಲಾದ ''''ಬಸವ ಮಂಟಪ'''' ಪುಸ್ತಕದ ಕುರಿತು ಸಮಗ್ರ ತನಿಖೆ ನಡೆಸಿ, ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂದರು.

ರಾಜ್ಯ ಸರ್ಕಾರವು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವ, ತತ್ವಾದರ್ಶಗಳು, ವಚನ ಸಾಹಿತ್ಯ ಹಾಗೂ ಸಾಮಾಜಿಕ ಸುಧಾರಣೆಯ ಚಳವಳಿಗೆ ಸಂಬಂಧಿಸಿದಂತೆ ವಿವಾದಾತ್ಮಕ ಹಾಗೂ ಅವಹೇಳನಕಾರಿ ಅಂಶಗಳು ಪ್ರಕಟವಾಗಿರುವುದರ ಕುರಿತು ನಾಡಿನಾದ್ಯಂತ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.

ಈ ಹಿನ್ನೆಲೆ, ಬಸವ ಮಂಟಪ ಪುಸ್ತಕದಲ್ಲಿನ ವಿವಾದಾತ್ಮಕ ಅಂಶಗಳು, ರವಿ ಹಂಜ್ ಅವರ ಬರಹಗಳು ಪತ್ರಿಕೆಯಲ್ಲಿ ಈ ವಿಷಯಗಳು ಪತ್ರಿಕೆಯಲ್ಲಿ ಪ್ರಕಟವಾಗಲು ಸಹಕರಿಸಿದವರು ಸೇರಿದಂತೆ ಸಂಬಂಧಪಟ್ಟವರ ಪಾತ್ರದ ಕುರಿತು ಸಮಗ್ರ ತನಿಖೆ ನಡೆಸಬೇಕು. ಬಸವಣ್ಣನವರ ಇತಿಹಾಸ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವಂತಹ ಅಂಶಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ಸಮಾಜದಲ್ಲಿ ಗೊಂದಲ, ಅಶಾಂತಿ ಹಾಗೂ ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆಯಾಗದಂತೆ ಸರ್ಕಾರ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ವಿ.ಎಸ್.ಪಾಟೀಲ, ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ಸಮಾಜದ ಮುಖಂಡ ಬಿ.ಕೆ. ಪಾಟೀಲ, ವಸಂತ ಕೊಣಸಾಲಿ, ಎಸ್.ಬಿ. ಹೂಗಾರ, ಕೆಂಜೋಡಿ ಗಲಬಿ, ಸುರೇಶ ಐಹೊಳೆ, ಅರುಣ ಗೊಂದಳೆ, ಸಂಗಪ್ಪ ಕೋಳೂರ, ರವಿಗೌಡ ಪಾಟೀಲ, ಬಸವರಾಜ ಓಸಿಮಠ, ಬಿ.ಡಿ. ಹೊತಗಣ್ಣವರ, ಆರ್.ಜೆ. ಬೆಳ್ಳೆನವರ, ಬಸವರಾಜ ಸಂಗಮೇಶ್ವರ ಮುಂತಾದವರು ಇದ್ದರು.