ಸಾರಾಂಶ
ಹೊಟ್ಟೆಪಾಡಿಗಾಗಿ ಹಲವಾರು ವರ್ಷಗಳಿಂದ ಇಲ್ಲಿಗೆ ಬಂದು ಜೆಸಿಬಿ ಆಪರೇಟರ್ ಆಗಿ ದುಡಿದು ಮಾಲಕರಾಗಿರುವ ಘಟ್ಟ ಪ್ರದೇಶದ ಕೆಲವೊಂದು ಮಂದಿಗೆ ಜಿಲ್ಲೆ ಬಿಟ್ಟು ಹೋಗಬೇಕು ಎಂಬ ಸ್ಥಳೀಯರಿಂದ ಬೆದರಿಕೆಯನ್ನು ಹಾಕಲಾಗುತ್ತಿದೆ. ಜೆಸಿಬಿ ಮತ್ತು ಹಿಟಾಚಿ ಮೂಲಕ ರಾಜ್ಯದ ಯಾವುದೇ ಭಾಗದಲ್ಲಿ ಕೆಲಸ ಮಾಡಬಹುದು. ಸಂಘಟನೆಗಳು ಜನರ ಒಳಿತಿಗಾಗಿ ಕೆಲಸ ಮಾಡಬೇಕೇ ಹೊರತು ಈ ರೀತಿ ದೌರ್ಜನ್ಯ ನಡೆಸುವುದು ಸರಿಯಲ್ಲ. ಇದಕ್ಕೆ ನಾವು ಎಂದಿಗೂ ಆಸ್ಪದ ನೀಡುವುದಿಲ್ಲ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಪುತ್ತೂರು
ಹೊರ ಜಿಲ್ಲೆಯಿಂದ ಆಗಮಿಸಿ ಪುತ್ತೂರು ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಜೆಸಿಬಿ, ಹಿಟಾಚಿ, ಟಿಪ್ಪರ್‌ಗಳಲ್ಲಿ ಕೆಲಸ ಮಾಡುತ್ತಿರುವ ಮಾಲಕರು ಮತ್ತು ನಿರ್ವಾಹಕರ ಮೇಲೆ ಸ್ಥಳೀಯವಾಗಿ ಕೆಲವೊಂದು ವ್ಯಕ್ತಿಗಳು ದಬ್ಬಾಳಿಕೆ ನಡೆಸುತ್ತಿದ್ದು, ಅವರನ್ನು ಜಿಲ್ಲೆಯಿಂದ ಹೊರಗಟ್ಟಲು ಯತ್ನಿಸಲಾಗುತ್ತಿದೆ. ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ನಡೆದಲ್ಲಿ ಅಂಥವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸುವುದಾಗಿ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಎಚ್ಚರಿಸಿದ್ದಾರೆ. ಗುರುವಾರ ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ನಡೆದ ಹೊರ ಜಿಲ್ಲೆಗಳಿಂದ ಆಗಮಿಸಿದ ಜೆಸಿಬಿ ಮಾಲಕರು ಹಾಗೂ ಆಪರೇಟರ್‌ಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಹೊಟ್ಟೆಪಾಡಿಗಾಗಿ ಹಲವಾರು ವರ್ಷಗಳಿಂದ ಇಲ್ಲಿಗೆ ಬಂದು ಜೆಸಿಬಿ ಆಪರೇಟರ್ ಆಗಿ ದುಡಿದು ಮಾಲಕರಾಗಿರುವ ಘಟ್ಟ ಪ್ರದೇಶದ ಕೆಲವೊಂದು ಮಂದಿಗೆ ಜಿಲ್ಲೆ ಬಿಟ್ಟು ಹೋಗಬೇಕು ಎಂಬ ಸ್ಥಳೀಯರಿಂದ ಬೆದರಿಕೆಯನ್ನು ಹಾಕಲಾಗುತ್ತಿದೆ. ಜೆಸಿಬಿ ಮತ್ತು ಹಿಟಾಚಿ ಮೂಲಕ ರಾಜ್ಯದ ಯಾವುದೇ ಭಾಗದಲ್ಲಿ ಕೆಲಸ ಮಾಡಬಹುದು. ಸಂಘಟನೆಗಳು ಜನರ ಒಳಿತಿಗಾಗಿ ಕೆಲಸ ಮಾಡಬೇಕೇ ಹೊರತು ಈ ರೀತಿ ದೌರ್ಜನ್ಯ ನಡೆಸುವುದು ಸರಿಯಲ್ಲ. ಇದಕ್ಕೆ ನಾವು ಎಂದಿಗೂ ಆಸ್ಪದ ನೀಡುವುದಿಲ್ಲ ಎಂದು ಹೇಳಿದರು.ಇಂಟಕ್ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಮಾತನಾಡಿದರು.
ಜೆಸಿಬಿ ಮಾಲಕ ಕುಮಾರ್, ಮುಂಡೂರು ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ಯಾಕೂಬ್ ಮುಲಾರ್, ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು. ನರಿಮೊಗರು ಸಿ.ಎ. ಬ್ಯಾಂಕ್ ಮಾಜಿ ಅಧ್ಯಕ್ಷ ಬಾಬು ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಹೊನ್ನಪ್ಪ ಕೈಂದಾಡಿ ಕಾರ್ಯಕ್ರಮ ನಿರೂಪಿಸಿದರು.