ಸಾರಾಂಶ
ಬೀದರ್ : ನಾಲ್ಕು ದಶಕದಿಂದ ಸಾಮೂಹಿಕ ಗಣೇಶ ವಿಸರ್ಜನೆಗೆ ಆಗದ ಸಮಸ್ಯೆ ಆತಂಕ ಈ ಬಾರಿ ಮುಂದಿಟ್ಟು ಮೆರವಣಿಗೆ ಡಿಜೆ ಬಂದ್ ಮಾಡಿಸಿದ ಪೊಲೀಸರ ವರ್ತನೆ ಹಿಂದೆ ಅನ್ಯರ ಕುತಂತ್ರ ಅಡಗಿದ್ದು ಅದರ ಬಗ್ಗೆ ತನಿಖೆ ಆಗಲಿ ಎಂದು ಗಣೇಶ ಮಹಾ ಮಂಡಳಿ ಆಗ್ರಹಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾ ಮಂಡಳಿ ಪ್ರದಾನ ಕಾರ್ಯದರ್ಶಿ ಬಾಬು ವಾಲಿ ಅವರು, ಗಣೇಶ ಉತ್ಸವವು ಜಾತಿ ರಹಿತ, ಪಕ್ಷ ರಹಿತ ವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಶಾಂತಿ ಕಾಪಾಡುವ ಪೊಲೀಸರಿಂದಲೇ ಗಣೇಶ ಭಕ್ತರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದಂತಾಗಿದೆ. ಏಕಾಏಕಿ ಡಿಜೆ ಬಂದ್ ಆಗಿದ್ದರಿಂದ ಸಾವಿರಾರು ಜನರು ಮೆರವಣಿಗೆ ಬಿಟ್ಟು ಮನೆಯತ್ತ ತೆರಳಿದ್ದಾರೆ ಎಂದರು.
ಸೆ.11ರಂದು ನಡೆದ ಮೆರವಣಿಗೆಯಲ್ಲಿ ದೇವರ ದಯೆಯಿಂದ ಯಾವುದೇ ಅನಾಹುತ ಆಗಿಲ್ಲ. ಒಂದು ವೇಳೆ ಏನಾದರೂ ಅನಾಹುತ ಆಗಿದ್ದರೆ ಅದಕ್ಕೆ ಯಾರು ಜವಾಬ್ದಾರರಾಗಿರಬೇಕಾಗಿತ್ತು ಎಂಬ ಪ್ರಶ್ನೆ ಕಾಡುತ್ತಿದೆ ಎಂದು ವಾಲಿ ಅಸಮಾಧಾನ ವ್ಯಕ್ತಪಡಿಸಿದರು. ಲಕ್ಷಾಂತರ ರುಪಾಯಿ ಖರ್ಚು ಮಾಡಿ ಡಿ.ಜೆ ಹಚ್ಚಿದ್ದಾರೆ. ಹಿಂದು ಸಮಾಜಕ್ಕೆ ಗಣೇಶ ಚತುರ್ಥಿ ದೊಡ್ಡ ಹಬ್ಬವಾಗಿದೆ. ಮೆರವಣಿಗೆಯಲ್ಲಿರುವ ಪ್ರಥಮ ಗಣೇಶನ ಡಿಜೆ ಬಂದ್ ಮಾಡಲಾಗಿದೆ. ಸರಿ ಸುಮಾರು ರಾತ್ರಿ 12ಕ್ಕೆ ಡಿಜೆ ಬಂದ್ ಮಾಡಿದ್ದರಿಂದ ರಾತ್ರಿ 1.30ರ ವರೆಗೆ ಎಲ್ಲ ಗಣೇಶ ಮೂರ್ತಿಗಳು ಎಲ್ಲಿ ಇದ್ದವೋ ಅಲ್ಲಿಯೇ ನಿಲ್ಲಿಸಲಾಗಿತ್ತು. ಇಂತಹ ಸಂದರ್ಭದಲ್ಲಿ ಗಲಾಟೆ ಆಗುವ ಸಾಧ್ಯಗಳಿದ್ದರೂ ನಮ್ಮ ಗಣೇಶ ಮಂಡಳಿಯ ಕಾರ್ಯಕರ್ತರು ಭಜನೆ, ಹನುಮಾನ ಚಾಲೀಸಾ ಪಠಣಕ್ಕೆ ಹೇಳಿದ್ದರಿಂದ ಯಾರೂ ಯಾವುದೇ ಘೋಷಣೆಯಾಗಲಿ ಕೂಗಿಲ್ಲ ಎಂದರು.
ಪ್ರತಿ ವರ್ಷ ಮೆರವಣಿಗೆ ಮುಗಿಯಲು ರಾತ್ರಿ 2 ಗಂಟೆ ಹಾಗೂ ಇದಕ್ಕೂ ಹೆಚ್ಚಿಗೆ ಸಮಯ ಕೂಡ ಆಗುತ್ತದೆ. ಬೀದರ್‌ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೊಸಬರಾಗಿರಬಹುದು, ಇದರ ಬಗ್ಗೆ ಇಲ್ಲಿ ಕೆಲಸ ಮಾಡಿದ್ದ ಎಎಸ್ಪಿ, ಡಿವೈಎಸ್ಪಿ ಇನ್ನಿತರ ಪೊಲೀಸ್ ಅಧಿಕಾರಿಗಳು ಅವರಿಗೆ ಮಾಹಿತಿ ನೀಡಬೇಕಿತ್ತು ಯಾಕೆ ನೀಡಿಲ್ಲ ಎಂಬುದು ತಿಳಿದಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ
ಪೊಲೀಸರು ಡಿಜೆ ಬಂದ್ ಮಾಡಿದ್ದು ತಪ್ಪು, ಸರ್ಕಾರದಲ್ಲಿರುವವರನ್ನು ಸಂತೋಷಪಡಿಸಲು ಪೊಲೀಸರು ಹೀಗೆ ಮಾಡಿದ್ದಾರೋ ಗೊತ್ತಿಲ್ಲ. ಜಿಲ್ಲೆಯ ವಿವಿಧೆಡೆ 8 ದಿನ , 11 ದಿನ ಗಣೇಶ ಹಬ್ಬ ಆಚರಿಸಲಾಗುತ್ತದೆ ಅಲ್ಲಿ ಇಂತಹ ಘಟನೆ ಮರುಕಳಿಸದಂತೆ ಪೊಲೀಸ್ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದರು.
ಕಾನೂನು ಎಂದರೆ ಎಲ್ಲರಿಗೂ ಬೇಕು. ಹೈದ್ರಾಬಾದ್, ಮುಂಬೈ, ಹುಬ್ಬಳ್ಳಿ, ಪುಣೆಯಲ್ಲಿ ರಾತ್ರಿಯಿಡೀ ಮೆರವಣಿಗೆ ನಡೆಯುತ್ತದೆ. ಆದರೆ ಈ ಬಾರಿ ಪೊಲೀಸ್ ಇಲಾಖೆ ಗಣೇಶ ಹಬ್ಬದ ಕುರಿತಂತೆ ಮಂಡಳಿಯೊಂದಿಗೆ ಅಂತರ ಕಾಯ್ದುಕೊಂಡಂತೆ ಇದ್ದುದ್ದರಿಂದ ಹೀಗೆ ಆಗಿರಬಹುದು. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಗಣೇಶ ಮಹಾ ಮಂಡಳ ಸೇತುವೆಯಾಗಿ ಕೆಲಸ ಮಾಡುತ್ತ ಬಂದಿದೆ ಎಂದು ಬಾಬು ವಾಲಿ ತಿಳಿಸಿದರು.
ನ್ಯಾಯಾಂಗ ತನಿಖೆಗೆ ಠಾಕೂರ ಆಗ್ರಹ:
ಬೀದರ್ ಇತಿಹಾಸದಲ್ಲಿಯೇ ಹೀಗೆ ಆಗಿದ್ದು ಪ್ರಥಮ ಬಾರಿಗೆ ಎಂದೂ ಇಂತಹ ವಾತಾವರಣ ನಿರ್ಮಾಣ ಆಗಿಲ್ಲ. ನಾವು ಭಾರತದಲ್ಲಿದ್ದೇವೆ ವಿನಹ ಬಾಂಗ್ಲಾ ದೇಶದಲ್ಲಿಲ್ಲ ಆದ್ದರಿಂದ ಈ ಘಟನೆ ನ್ಯಾಯಾಂಗ ತನಿಖೆಯಾಗಬೇಕೆಂದು ಗಣೇಶ ಮಹಾ ಮಂಡಳಿಯ ಮುಖಂಡ ಈಶ್ವರಸಿಂಗ್ ಠಾಕೂರ್ ಆಗ್ರಹಿಸಿದರು.
ಕಳೆದ ಗಣೇಶ ವಿಸರ್ಜನೆಗಳಲ್ಲಿ ಪೊಲೀಸರು ಇದ್ದರೂ ಕೂಡ ಗಣೇಶ ಮಹಾ ಮಂಡಳಿ ಕಾರ್ಯಕರ್ತರು ಯಾವುದೇ ಅಹಿತಕರ ಘಟನೆ ಆಗದಂತೆ ಪೊಲೀಸರಿಗೆ ಸಹಾಯ ಮಾಡಿದ್ದ ಉದಾಹರಣೆಗಳಿವೆ. ಲಕ್ಷಾಂತರ ಜನಸಾಗರ ಇದ್ದ ಸಂದರ್ಭದಲ್ಲಿ ಏಕಾ ಏಕಿ ಹೀಗೆ ಆಗಿದ್ದರೂ ಶಾಂತಿ ಕದಡದೆ ಹತೋಟಿಗೆ ಬಂದಿರುವುದು ಗಣಪನ ಕೃಪೆಯಿಂದಲೆ ಎಂದ ಅವರು ನಮ್ಮ ಕಾಯಕರ್ತರು ಶಾಂತಿ ಕಾಪಾಡಿದ್ದಾರೆ ಅವರಿಗೆ ಅಭಿನಂದನೆ ಸಲ್ಲಿಸಬೇಕು ಎಂದರು.
ಏಕಾಏಕಿ ಡಿಜೆ ಬಂದ್ ಮಾಡುವ ನಿರ್ಣಯ ಏಕೆ ತೆಗೆದುಕೊಂಡಿದ್ದಾರೆ. ಎಲ್ಲರಿಗೂ ಇಲ್ಲಿನ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಬೇಕಾಗಿತ್ತು. ಪೊಲೀಸರೇ ವಾತಾವರಣ ಕಲುಷಿತ ಮಾಡಿದ್ದು ತಪ್ಪು ನಮ್ಮ ಹಬ್ಬಗಳಿಗೆ ಮಾತ್ರ ಗುರಿ ಮಾಡುವ ಕೆಲಸಗಳು ನಡೆಯುತ್ತಿವೆ ಎಂದು ಠಾಕೂರ್ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮೆರವಣಿಗೆ ಸಮಿತಿ ಅಧ್ಯಕ್ಷ ಸೋಮಶೇಖರ ಪಾಟೀಲ್ ಗಾದಗಿ, ಮೆರವಣಿಗೆ ಸಮಿತಿ ಗೌರಾವಾಧ್ಯಕ್ಷ ಸೂರ್ಯಕಾಂತ ಶೆಟಕಾರ, ಕಾರ್ಯದರ್ಶಿ ಚಂದ್ರಶೇಖರ ಗಾದಾ ಇದ್ದರು.