ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ತಾಲೂಕಿನ ಸಿರವಾಸೆ ಗ್ರಾಮ ಪಂಚಾಯಿತಿ ಕಳೆದ ಎರಡೂವರೆ ದಶಕಗಳಿಂದ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಗೊಳಿಸದೇ ಸತಾಯಿಸುತ್ತಿರುವುದನ್ನು ಖಂಡಿಸಿ ಗ್ರಾಮಸ್ಥರು ಸಿಪಿಐ ನೇತೃತ್ವದಲ್ಲಿ ಪಂಚಾಯಿತಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.ಗ್ರಾಮದ ಸಂತೆ ಮೈದಾನದಿಂದ ಗ್ರಾಮ ಪಂಚಾಯಿತಿವರೆಗೆ ಜಾಥಾ ನಡೆಸಿದ ಗ್ರಾಮಸ್ಥರು ಹಾಗೂ ಮುಖಂಡರು ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒ ಮನವಿ ಸಲ್ಲಿಸಿ ಕೂಡಲೇ ನಿವೇಶನ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.ಈ ವೇಳೆ ಮಾತನಾಡಿದ ಸಿಪಿಐ ತಾಲೂಕು ಕಾರ್ಯದರ್ಶಿ ಕೆರೆಮಕ್ಕಿ ರಮೇಶ್, ಸಿರವಾಸೆ ವ್ಯಾಪ್ತಿಯ ಜನತೆ ನಿವೇಶನ, ರಸ್ತೆ ಹಾಗೂ ಆರೋಗ್ಯದಂತಹ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಹಲವಾರು ವರ್ಷಗಳಿಂದ ಆಳುವ ಸರ್ಕಾರಗಳಿಗೆ ಮನವಿಗಳ ಮೂಲಕ ಗಮನ ಸೆಳೆದರೂ ಸಮಸ್ಯೆ ಆಲಿಸುತ್ತಿಲ್ಲ ಎಂದು ದೂರಿದರು.ನಿವೇಶನ ರಹಿತರಿಗೆ ನಿವೇಶನ ಹಂಚಿಕೆಯಾಗದ ಕಾರಣ ಒಂದೇ ಮನೆಯಲ್ಲಿ 2-3 ಕುಟುಂಬಗಳು ಒಟ್ಟಿಗೆ ವಾಸಿಸು ವಂತಾಗಿದೆ. ಇದರಿಂದ ತುಂಬಾ ತೊಂದರೆಯಾಗಿದೆ. ಆದ್ದರಿಂದ ಶೀಘ್ರದಲ್ಲೇ ನಿವೇಶನಕ್ಕೆ ಜಾಗ ಗುರುತಿಸಿ ನಿವೇಶನ ಹಂಚಿಕೆ ಮಾಡಿ ವಸತಿ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದರು.
ಸರ್ಕಾರಿ ಭೂಮಿಯಲ್ಲಿ ಹತ್ತಾರು ವರ್ಷಗಳಿಂದ ಮನೆ ನಿರ್ಮಿಸಿಕೊಂಡು ವಾಸವಾಗಿದ್ದು 94ಸಿ ಅಡಿ ಅರ್ಜಿ ಸಲ್ಲಿಸಿದ್ದು ಎಲ್ಲಾ ಅರ್ಜಿದಾರರಿಗೆ ಹಕ್ಕುಪತ್ರ ನೀಡಬೇಕು. ಇತ್ತೀಚೆಗೆ ಭಾರಿ ಮಳೆಯಿಂದ ಕಾಫಿ, ಮೆಣಸು ಮತ್ತು ಅಡಕೆ ಬೆಳೆ ನಾಶವಾಗಿದ್ದು ರೈತರಿಗೆ ಸೂಕ್ತ ಬೆಳೆ ಪರಿಹಾರ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಸಿಪಿಐ ತಾಲೂಕು ಸಹ ಕಾರ್ಯದರ್ಶಿ ದೇಜು, ವಲಯ ಕಾರ್ಯದರ್ಶಿಗಳಾದ ಜಿ. ಎಸ್.ತಾರಾನಾಥ್, ರಾಜು, ನಿತಿನ್, ಖಜಾಂಚಿ ರೇವಣ್ಣ, ಸದಸ್ಯೆ ಜಾರ್ಜ್ ಆಸ್ಟಿನ್, ಗ್ರಾಪಂ ಅಧ್ಯಕ್ಷ ಗಂಗಯ್ಯ, ಮುಖಂಡರಾದ ಕೃಷ್ಣಪ್ಪ, ಪೂರ್ಣೇಶ್, ಮಂಜುನಾಥ್, ವಸಂತಿ, ಪ್ರೇಮಲತಾ ಇದ್ದರು.