ಸಾರಾಂಶ
ಸಾಗರ: ಕರ್ತವ್ಯ ನಿರ್ಲಕ್ಷ ಆರೋಪದ ಹಿನ್ನೆಲೆಯಲ್ಲಿ ತಾಲೂಕಿನ ತಾಳಗುಪ್ಪ ಉಪ ಅರಣ್ಯ ವಲಯ ಅಧಿಕಾರಿ ಎನ್.ಸಂತೋಷ್ ಕುಮಾರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಶಿವಮೊಗ್ಗ ಅರಣ್ಯ ಸಂಚಾರಿ ದಳದ ಡಿಸಿಎಫ್ ಹಾಗೂ ಸಾಗರ ವಿಭಾಗದ ಡಿಸಿಎಫ್ ಶಿಫಾರಸಿನ ಅನ್ವಯ ಅಮಾನತು ಮಾಡಲಾಗಿದೆ. ಅಕೇಶಿಯಾ ನಾಟ ಕಡಿತಲೆ ಪತ್ತೆ ಹಚ್ಚುವುದು ತಡೆಯುವುದು, ಕಡಿತಲೆ ಬಗ್ಗೆ ಮೇಲಾಧಿಕಾರಿಗೆ ತಿಳಿಸದೇ ಇರುವುದು ಮತ್ತಿತರ ಆರೋಪಗಳ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.ತಾಳಗುಪ್ಪ ಹೋಬಳಿಯ ಹೊಸಳ್ಳಿ, ಹಂಸಗಾರು, ಗಿಳಿಗಾರು ಗ್ರಾಮಗಳ ವ್ಯಾಪ್ತಿಯಲ್ಲಿ ನಡೆದಿದ್ದ ಅಕ್ರಮ ಮರ ಕಡಿತಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷಕುಮಾರ್ ಕರ್ತವ್ಯಲೋಪ ಎಸಗಿದ್ದರು ಎನ್ನಲಾಗಿದೆ. ಹೊಸಳ್ಳಿ ಗ್ರಾಮದ ಸರ್ವೆ.ನಂ:11, 31, 141, 142ರ ಹಂಸಗಾರು ಮತ್ತು ಗಿಳಿಗಾರು ಗ್ರಾಮಗಳ ವ್ಯಾಪ್ತಿಯಲ್ಲಿ ಅಕೇಶಿಯ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಿ ಸಾಗಾಟ ಮಾಡಲಾಗಿತ್ತು. ಪ್ರಕರಣದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಶಾಮೀಲಾಗಿದ್ದರು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ನೀಡಿದ ನಿರ್ದೇಶನದಂತೆ ಅರಣ್ಯ ಸಂಚಾರಿ ದಳದ ಉಪ ಸಂರಕ್ಷಣಾಧಿಕಾರಿ ತನಿಖೆ ನಡೆಸಿ ವರದಿ ಸಲ್ಲಿಸಿದ್ದರು. ವರದಿಯಲ್ಲಿ ಸಂತೋಕುಮಾರ್ ಹುದ್ದೆಗೆ ನಿರ್ದಿಷ್ಟಪಡಿಸಿದ ಕರ್ತವ್ಯ ನಿರ್ವಹಿಸದೆ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟ ಉಂಟುಮಾಡಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಇದರನ್ವಯ ಸಂತೋಷಕುಮಾರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.