ಸಾರಾಂಶ
ಶಿರಹಟ್ಟಿ: ಶಿರಹಟ್ಟಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹೊಸದಾಗಿ ತಲೆ ಎತ್ತಿರುವ ಬಡಾವಣೆಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗದೇ ಇದ್ದರೂ ಹಾಗೂ ಆಡಳಿತ ಮಂಡಳಿ ಅನುಮೋದನೆ ಇಲ್ಲದೆಯೇ ಪಪಂ ಮುಖ್ಯಾಧಿಕಾರಿ ಸವಿತಾ ತಾಮ್ರೆ ಅವರು ಉತಾರ ನೀಡಿರುವುದಾಗಿ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ ಆರೋಪಿಸಿದರು. ಮಂಗಳವಾರ ಕರೆಯಲಾಗಿದ್ದ ಪಪಂ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ಗೈರು ಹಾಜರಿಯಿಂದ ರೋಸಿ ಹೋದ ಆಡಳಿತ ಮಂಡಳಿಯವರು ಸಭೆ ನಡೆಯುವ ಮುನ್ನವೇ ಈ ಆರೋಪ ಮಾಡಿದರು. ಪಟ್ಟಣದ ಮಾಬೂಸಾಬ ಕನಕವಾಡ ಬಡಾವಣೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳು ಆಗಿರುವುದಿಲ್ಲ. ಆಡಳಿತ ಮಂಡಳಿ ಹಾಗೂ ಅಭಿಯಂತರರ ಮತ್ತು ಆರ್‌ಐ ವರದಿಯೂ ಇಲ್ಲದೇ ಯಾವುದನ್ನು ಪರಿಗಣಿಸದೇ ಏಕಪಕ್ಷೀಯವಾಗಿ ನಿರ್ಧರಿಸಿ ೧೨ ಉತಾರ ನೀಡಿರುವುದಾಗಿ ದೂರಿದರು. ಮುಖ್ಯಾಧಿಕಾರಿ ಸವಿತಾ ತಾಮ್ರೆ ಈ ಕುರಿತು ಪ್ರತಿಕ್ರಿಯೆ ನೀಡಿ ಈ ಹಿಂದೆ ಕಾರ್ಯನಿರ್ವಹಿಸಿ ಹೋಗಿರುವ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ ಅವರು ಮಾಬೂಸಾಬ ಕನಕವಾಡ ಬಡಾವಣೆಯ ಕುರಿತು ಆಡಳಿತ ಮಂಡಳಿಯವರೇ ಠರಾವ್ ಪಾಸ್ ಮಾಡಿರುವ ಬಗ್ಗೆ ಹಾಗೂ ಎನ್‌ಎ, ಕೆಜೆಪಿ ಆಗಿರುವ ಬಗ್ಗೆ ವರದಿ ನೀಡಿದ್ದಾರೆ. ಇದರಲ್ಲಿ ಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಳ್ಳುವ ಮಾತೇ ಇಲ್ಲ. ಕಾನೂನು ಪ್ರಕಾರವೇ ೧೨ ಉತಾರ ನೀಡಲಾಗಿದೆ ಎಂದು ತಿಳಿಸಿದರು.ಸಿಬ್ಬಂದಿ ಗೈರ್ ಹಾಜರಿಗೆ ಕ್ರಮ: ಪಟ್ಟಣ ಪಂಚಾಯತ್ ಆರ್‌ಐ ಮಂಜು ಮುಳಗುಂದ ಅವರು ರಜೆ ಹಾಕಿಲ್ಲ. ಯಾವುದೇ ಮಾಹಿತಿಯನ್ನೂ ನೀಡಿಲ್ಲ. ಪೋನ್ ಕರೆ ಮಾಡಿದರೇ ಸ್ವೀಕರಿಸುತ್ತಿಲ್ಲ. ಇವರ ಅನಧಿಕೃತ ಗೈರ ಹಾಜರಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸಲಾಗಿದೆ. ಗುಮಾಸ್ತ ಸಿದ್ದಪ್ಪ ಅಮರಾಪೂರ ಅವರು ಮೈಯಲ್ಲಿ ಹುಷಾರ ಇಲ್ಲದ ಕಾರಣ ರಜೆ ಮೇಲೆ ಇರುವುದರಿಂದ ಮತ್ತೊಮ್ಮೆ ವಿಚಾರಿಸಿ ಸೂಕ್ತ ಕ್ರಮಕ್ಕೆ ಮುಂದಾಗುವುದಾಗಿ ಮುಖ್ಯಾಧಿಕಾರಿ ಸಭೆಯಲ್ಲಿ ತಿಳಿಸುತ್ತಿದ್ದಂತೆ ಸಭೆಯನ್ನು ಮುಂದೂಡಲಾಯಿತು.
ವಾರ್ಡ್ ನಂ. ೧೧ ಮತ್ತು ೧೮ರಲ್ಲಿ ರಸ್ತೆ ಮೇಲಿನ ತಗ್ಗು ಗುಂಡಿಗಳನ್ನು ಸಮತಟ್ಟು ಮಾಡಲು ಮೋರಮ್ ಹಾಕದೇ ಅಭಿಯಂತರರು ಸ್ಥಳ ಪರಿಶೀಲನೆ ಮಾಡದೇ ಬೋಗಸ್ ಬಿಲ್ ತೆಗೆದಿದ್ದಾರೆ ಎಂದು ನಾಮ ನಿರ್ದೇಶಿತ ಸದಸ್ಯರಾದ ಸೋಮನಗೌಡ ಮರಿಗೌಡ್ರ, ಅಲ್ಲಾಭಕ್ಷಿ ನಗಾರಿ ಆರೋಪಿಸಿದರು.ಸರ್ಕಾರಿ ನೌಕರರ ಲಾಗಿನ್ ಅನ್ನು ಬೇರೊಬ್ಬರೂ ಬಳಸುವಂತಿಲ್ಲ ಎಂಬ ನಿಯಮವಿದ್ದರೂ ಅಭಿಯಂತರರ ಮತ್ತು ಆರ್‌ಐ ಅವರ ಲಾಗಿನ್ ಅನ್ನು ಮುಖ್ಯಾಧಿಕಾರಿಗಳು ಬಳಕೆ ಮಾಡಿಕೊಂಡು ಉತಾರ ಹಂಚಿಕೆ ಮಾಡುತ್ತಾರೆ ಎನ್ನುವ ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ ಅವರ ಆರೋಪವನ್ನು ಅಭಿಯಂತರ ವಿ.ಪಿ. ಕಾಟೇವಾಲೆ ಅವರು ತಳ್ಳಿ ಹಾಕಿದರು. ಈ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಸಭೆಯಲ್ಲಿ ತಿಳಿಸಿದರು. ವಾರ್ಡ್ ನಂ. ೧ರ ಖಾನಾಪೂರ ಗ್ರಾಮದಲ್ಲಿ ಮೋಟರ್ ಸುಟ್ಟು ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಅಭಿಯಂತರರು ಇತ್ತ ತಿರುಗಿ ನೋಡುತ್ತಿಲ್ಲ. ಸಾರ್ವಜನಿಕರು ನಮಗೆ ಛೀಮಾರಿ ಹಾಕುತ್ತಿದ್ದು, ಆದಷ್ಟು ಬೇಗನೇ ಸರಿಪಡಿಸಿ ಜನರಿಗೆ ಸಮರ್ಪಕ ನೀರೊದಗಿಸಬೆಕು ಎಂದು ಸದಸ್ಯೆ ಚನ್ನಬಸವ್ವ ಕಲಾದಗಿ ಆಗ್ರಹಿಸಿದರು. ಸಿಬ್ಬಂದಿಗಳ ಗೈರ ಹಾಜರಿಯಿಂದಾಗಿ ಕೆಲಹೊತ್ತು ಸಭೆ ಗೊಂದಲದ ಗೂಡಾಯಿತು. ಕೆಲ ಸದಸ್ಯರು ಸಭೆ ನಡೆಸಬೇಕು ಎಂದರೆ ಕೆಲವರು ಸಭೆಗೆ ಎಲ್ಲ ಮಾಹಿತಿ ನೀಡಬೇಕಾದ ಸಿಬ್ಬಂದಿಗಳೇ ಇಲ್ಲವಾದರೆ ಯಾರನ್ನು ಮಾಹಿತಿ ಕೇಳಬೇಕು ಎಂದು ಮಾತಿನ ಚರ್ಚೆ ನಡೆದು ಕೊನೆಗೆ ಸಭೆ ಮುಂದುಡಲಾಯಿತು. ಪಟ್ಟಣ ಪಂಚಾಯತ್ ಅಧ್ಯಕ್ಷೆ ದೇವಕ್ಕ ಗುಡಿಮನಿ, ಉಪಾಧ್ಯಕ್ಷೆ ನೀಲವ್ವ ಹುಬ್ಬಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ, ಪಪಂ ಮುಖ್ಯಾಧಿಖಾರಿ ಸವಿತಾ ತಾಮ್ರೆ, ಅಭಿಯಂತರ ವಿ.ಪಿ. ಕಾಟೇವಾಲೆ, ಪರಮೆಶ ಪರಬ, ಸಂದೀಪ ಕಪ್ಪತ್ತನವರ, ಫಕ್ಕೀರೇಶ ರಟ್ಟಿಹಳ್ಳಿ, ಹಸರತ ಢಾಲಾಯತ, ಇಸಾಕ ಆದ್ರಳ್ಳಿ, ರಾಜು ಕಪ್ಪತ್ತನವರ, ಅನಿತಾ ಬಾರಬರ್, ಯಶೋದ ಡೊಂಕಬಳ್ಳಿ ಇದ್ದರು.