ಪ್ರಿನ್ಸೆಸ್ ರಸ್ತೆ ನಕ್ಷೆ ನಕಲಿ ಆರೋಪ ಶುದ್ಧಸುಳ್ಳು: ಸಂದೇಶ್ ಸ್ವಾಮಿ ಸ್ಪಷ್ಟನೆ

| Published : Jan 07 2025, 12:16 AM IST

ಪ್ರಿನ್ಸೆಸ್ ರಸ್ತೆ ನಕ್ಷೆ ನಕಲಿ ಆರೋಪ ಶುದ್ಧಸುಳ್ಳು: ಸಂದೇಶ್ ಸ್ವಾಮಿ ಸ್ಪಷ್ಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ಹೇಳಿಕೆ ನೀಡಿರುವ ಎಂ.ಲಕ್ಷಣ ಅವರು, ನಾನು ಬಿಡುಗಡೆ ಮಾಡಿರುವ ನಕ್ಷೆ ಸ್ಯಾಟ್ ಲೈಟ್ ಪ್ರಿಂಟ್ ಔಟ್ ತೆಗೆದುಕೊಂಡು ಅದರ ಮೇಲೆ ಅಕ್ಷರಗಳನ್ನು ಬರೆದಿರುವುದು ಸ್ಪಷ್ಟವಾಗಿದೆ. ಸೃಷ್ಟಿಸಲಾದ ಮ್ಯಾಪ್ ಅನ್ನು ಸಂಸದರು ಸಲ್ಲಿಸಿದ್ದಾರೆ ಎಂದು ದೂರಿರುವುದು ಸತ್ಯಕ್ಕೆ ದೂರವಾದ ಸಂಗತಿ.

ಕನ್ನಡಪ್ರಭ ವಾರ್ತೆ ಮೈಸೂರು

ವಿವಾದಿತ ಪ್ರಿನ್ಸೆಸ್ ರಸ್ತೆಗೆ ಸಂಬಂಧಿಸಿದ ನಕ್ಷೆಯು ನಕಲಿ ಎಂದಿರುವ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ ಅವರ ಹೇಳಿಕೆಯು ಶುದ್ಧ ಸುಳ್ಳೆಂದು ಮಾಜಿ ಮೇಯರ್ಸಂದೇಶ್ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಹೇಳಿಕೆ ನೀಡಿರುವ ಎಂ.ಲಕ್ಷಣ ಅವರು, ನಾನು ಬಿಡುಗಡೆ ಮಾಡಿರುವ ನಕ್ಷೆ ಸ್ಯಾಟ್ ಲೈಟ್ ಪ್ರಿಂಟ್ ಔಟ್ ತೆಗೆದುಕೊಂಡು ಅದರ ಮೇಲೆ ಅಕ್ಷರಗಳನ್ನು ಬರೆದಿರುವುದು ಸ್ಪಷ್ಟವಾಗಿದೆ. ಸೃಷ್ಟಿಸಲಾದ ಮ್ಯಾಪ್ ಅನ್ನು ಸಂಸದರು ಸಲ್ಲಿಸಿದ್ದಾರೆ ಎಂದು ದೂರಿರುವುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಅವರು ತಿಳಿಸಿದ್ದಾರೆ.

ನಕ್ಷೆಯನ್ನು ನಕಲಿ ಮಾಡಿ ತಿದ್ದಿ ಬಿಡುಗಡೆ ಮಾಡುವ ಅಗತ್ಯತೆ ನನಗೇನು ಇಲ್ಲ. ಇದರಲ್ಲಿ ನನಗೆ ಯಾವುದೇ ಹಿತಾಸಕ್ತಿಯೂ ಇಲ್ಲ. ಸಿಐಟಿಬಿ ಕಾಲದ ಅಧಿಕೃತ ನಕ್ಷೆಯು ನನಗೆ ದೊರಕಿದಾಗ ಅದನ್ನು ನಾನು ಬಹಿರಂಗವಾಗಿ ಪತ್ರಿಕಾ ಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದೇನೆ. ಅಲ್ಲದೆ ಕಾಂಗ್ರೆಸ್ ಮುಖಂಡರಿಗೂ, ಬಿಜೆಪಿ ಮುಖಂಡರಿಗೂ ಕೊಟ್ಟಿದ್ದೇನೆ. ಈ ನಕ್ಷೆಯ ಬಗ್ಗೆ ಅನುಮಾನ ಉಂಟಾಗಿದ್ದರೆ ಅದನ್ನು ಸಂಬಂಧಿಸಿದ ಇಲಾಖೆಯಿಂದ ಪರೀಕ್ಷೆ ಮಾಡಿಸಬಹುದು. ಇದಕ್ಕೆ ನನ್ನ ಅಭ್ಯಂತರವಿಲ್ಲ ಎಂದಿದ್ದಾರೆ.

1916 ರಿಂದ 1924 ರವರೆಗೆ ಹಿಂದಿನ ಸಿಐಟಿಬಿ ಅಧ್ಯಕ್ಷರಾಗಿದ್ದ ಸಿ.ಶ್ರೀಕಂಠೇಶ್ವರ ಅಯ್ಯರ್ ಅವರು 1921 ರಲ್ಲಿ ಈ ನಕ್ಷೆಯನ್ನು ಅನುಮೋದಿಸಿ ಹಸ್ತಾಕ್ಷರ ಹಾಕಿರುವುದನ್ನು ನಕ್ಷೆಯ ಪ್ರತಿಯಲ್ಲಿ ಕಾಣಬಹುದು. ಜನರನ್ನು ದಾರಿ ತಪ್ಪಿಸಲು ಬಿಜೆಪಿಯವರು ನಕಲಿ ನಕ್ಷೆ ಬಿಡುಗಡೆ ಮಾಡಿಲ್ಲ ಮತ್ತು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ಅವರು ನಕಲಿ ನಕ್ಷೆಯನ್ನು ಅಧಿಕಾರಿಗಳಿಗೆ ಸಲ್ಲಿಸಿಲ್ಲ ಎಂಬುದನ್ನು ಲಕ್ಷ್ಮಣ್ ಅರಿಯಬೇಕು ಎಂದು ಅವರು ಹೇಳಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸುಮಾರು 37 ವರ್ಷಗಳ ಕಾಲ ಉದ್ಯೋಗಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಇಲ್ಲಿನ ಇಟ್ಟಿಗೆಗೂಡಿನ ನಿವಾಸಿ ಕೆ.ಜೆ. ಶ್ರೀಕಂಠಸ್ವಾಮಿ ಅವರು ಈ ಅಧಿಕೃತ ನಕ್ಷೆ ನೀಡಿದರು. ಸುಮಾರು 20 ವರ್ಷಗಳ ಹಿಂದೆ ಮುಡಾ ಅಧಿಕಾರಿಯೊಬ್ಬರು ಕೆಲವು ಹಳೆಯ ದಾಖಲಾತಿ ಬೇಕಾಗಿಲ್ಲ ಎಂದು ಕಟ್ಟಡದ ಹೊರಗೆ ಹಾಕಿಸಿದ್ದರಂತೆ. ಅದರಲ್ಲಿ ಕೆಲವು ನಕ್ಷೆಗಳನ್ನು ಶ್ರೀಕಂಠಸ್ವಾಮಿಯವರು ಸಂಗ್ರಹಿಸಿ, ತಮ್ಮ ಮನೆಯಲ್ಲಿ ಇರಿಸಿದ್ದಾರೆ. ಅನುಮಾನ ಇದ್ದವರು ಯಾರೇ ಆಗಲಿ ಅವರ ಮನೆಗೆ ಹೋಗಿ ಸತ್ಯಾಸತ್ಯೆತೆ ತಿಳಿಯಬಹುದು ಎಂದರು.

ನಾನು ಸುಮಾರು 20 ವರ್ಷಗಳಕಾಲ ನಗರ ಪಾಲಿಕೆ ಸದಸ್ಯನಾಗಿ, ಮೇಯರ್ಆಗಿ ಮತ್ತು ಮುಡಾ ಸದಸ್ಯನಾಗಿ ಕಾರ್ಯ ನಿರ್ವಹಿಸಿರುವ ಕಾರಣ, ನಗರಾಭಿವೃದ್ಧಿ ಕಾಯ್ದೆ, ಪಾಲಿಕೆಯ ನಿಯಮ ಹಾಗೂ ನಕ್ಷೆ ಅನುಮೋದನೆ ಮತ್ತಿತರ ವಿಚಾರಗಳ ಬಗ್ಗೆ ಅರಿವಿದೆ. ಮುಖ್ಯಮಂತ್ರಿಗಳ ಓಲೈಸಲೋ, ಅಥವಾ ಪ್ರಚಾರ ಪಡೆಯಲೋ ಎಂ. ಲಕ್ಷ್ಮಣ್ ಅವರು ಅವೈಜ್ಞಾನಿಕವಾಗಿ ಮಾತಾಡಬಾರದು. ಎರಡು ಬಾರಿ ಮುಖ್ಯಮಂತ್ರಿಯಾಗಿರುವ ನಮ್ಮ ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರಿಗೆ ಮುಜಗರ ತರುವ ಕೆಲಸ ಮಾಡಬಾರದು ಎಂಬುದು ನನ್ನ ಕಳಕಳಿ ಎಂದು ಅವರು ತಿಳಿಸಿದರು.