ಸಾರಾಂಶ
ಭೂ ವಿಜ್ಞಾನ ಇಲಾಖೆ ಇಂಟಿಗ್ರೇಡ್ ಲೀಸ್ ಮ್ಯಾನೇಜ್‌ಮೆಂಟ್ ಸಿಸ್ಟಂ ಡಿ.8 ರಂದೇ ಸ್ಥಗಿತ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಕ್ವಾರಿಯಿಂದ ಕಲ್ಲು ಸಾಗಿಸಲು ಪರ್ಮಿಟ್, ಕ್ರಷರ್ ಉತ್ನನ್ನಗಳ ಸಾಗಿಸಲು ಎಂಡಿಪಿ ಬೇಕು. ಆದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇಂಟಿಗ್ರೇಡ್ ಲೀಸ್ ಮ್ಯಾನೇಜಜ್‌ಮೆಂಟ್ ಸಿಸ್ಟಂ (ಐಎಲ್‌ಎಂಎಸ್) ಡಿ.8 ರ ಮಧ್ಯರಾತ್ರಿಯೇ ಬ್ಲಾಕ್ ಮಾಡಿದ್ದರೂ ಪರ್ಮಿಟ್ ಇಲ್ಲದೆ ಕ್ವಾರಿಯಿಂದ ಕಲ್ಲು ಹಾಗೂ ಕ್ರಷರ್‌ನ ಉತ್ಪನ್ನಗಳು ಅಕ್ರಮವಾಗಿ ಎರಡು ದಿನಗಳಿಂದ ಸಾಗಾಣಿಕೆ ಆಗುತ್ತಿವೆ.
ಡಿ.8 ರ ಭಾನುವಾರ ಮಧ್ಯರಾತ್ರಿಯೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಇಂಟಿಗ್ರೇಡ್ ಲೀಸ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಐಎಲ್‌ಎಂಎಸ್) ತಾತ್ಕಾಲಿಕವಾಗಿ ಸ್ಥಗಿತ ಮಾಡಿದೆ. ಡಿ.12ರ ಬೆಳಿಗ್ಗೆ ಸಿಸ್ಟಂ ಹೊಸ ಆ್ಯಪ್ ಅಳವಡಿಸಿಕೊಂಡ ಬಳಿಕವೇ ಕಲ್ಲು ಹಾಗೂ ಕ್ರಷರ್‌ನ ಉತ್ಪನ್ನಗಳ ಸಾಗಾಣಿಕೆಗೆ ಪರ್ಮಿಟ್/ಎಂಡಿಪಿಯನ್ನು ಕ್ವಾರಿ ಲೀಸ್‌ದಾರರು, ಕ್ರಷರ್ ಮಾಲೀಕರು ತೆಗೆದು ಕಲ್ಲು ಮತ್ತು ಕ್ರಷರ್ ಉತ್ಪನ್ನಗಳ ಸಾಗಾಣಿಕೆ ಮಾಡಬೇಕಿರುವುದು ಇಲಾಖೆಯ ನಿಯಮ.ಆದರೆ ಜಿಲ್ಲಾಡಳಿತದ ವೈಫಲ್ಯದ ಪರಿಣಾಮ ಡಿ.8ರ ಮಧ್ಯ ರಾತ್ರಿಯೇ ಹಳೇ ಆ್ಯಪ್ ಅನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯೇ ಬ್ಲಾಕ್ ಮಾಡಿದೆ. ಈ ಬಗ್ಗೆ ಅಧಿಕಾರಿಗಳು ಕ್ವಾರಿ ಲೀಸ್‌ದಾರರು ಹಾಗೂ ಕ್ರಸರ್ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ.
ಆದರೂ ಕ್ವಾರಿ ಲೀಸ್‌ದಾರರು ಮಾತ್ರ ಪರ್ಮಿಟ್/ಎಂಡಿಪಿ ತೆಗೆಯುವ ಆಪ್ ಬ್ಲಾಕ್ ಆಗಿದ್ದರೂ ಅಕ್ರಮವಾಗಿ ಸೋಮವಾರ ಮತ್ತು ಮಂಗಳವಾರ ಹಗಲು ರಾತ್ರಿ ಎನ್ನದೆ ಕ್ವಾರಿಯಿಂದ ಸಾವಿರಾರು ಟನ್ ಕಲ್ಲು ಕ್ರಷರ್ ರಾಯಲ್ಟಿ ಇಲ್ಲದೆ ಹೋಗಿದೆ. ಕ್ರಷರ್‌ನಿಂದಲೂ ಎಂ.ಸ್ಯಾಂಡ್, ಜಲ್ಲಿ ಕೂಡ ಎಂಡಿಪಿ ಇಲ್ಲದೆ ಮಾರಾಟವಾಗಿದೆ.ಹೊಸ ಆ್ಯಪ್ ಅನ್ನು ಕ್ವಾರಿ ಲೀಸ್‌ದಾರರು, ಕ್ರಷರ್ ಮಾಲೀಕರು ಅಳವಡಿಸಿಕೊಳ್ಳುವ ತನಕ ಸಾಗಾಣಿಕೆ ಮಾಡಬಾರದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೂಚನೆ ನೀಡಿದ್ದರೂ ಕಲ್ಲು ಹಾಗೂ ಕ್ರಸರ್ ಉತ್ಪನ್ನಗಳನ್ನು ಪರ್ಮಿಟ್/ಎಂಡಿಪಿ ಇಲ್ಲದೆಯೂ ಟಿಪ್ಪರ್‌ಗಳು ರಾಜಾರೋಷವಾಗಿ ಸಂಚರಿಸುತ್ತಿವೆ.
ಡಿ.8ರಂದು ಇಂಟಿಗ್ರೇಡ್ ಸಿಸ್ಟಂ ಬ್ಲಾಕ್ ಆಗಿದೆ. ಪರ್ಮಿಟ್ ಇಲ್ಲದಿದ್ದರೂ ಕ್ರಷರ್ ಮಾಲೀಕರು ಅಕ್ರಮವಾಗಿ ಕಲ್ಲು ಖರೀದಿಸಿದ್ದು ಮತ್ತು ಕ್ರಷರ್ ಉತ್ಪನ್ನ ಮಾರಾಟ ಮಾಡಿದ್ದರೂ ಕೂಡ ಕಾನೂನು ಬಾಹಿರವಾಗಿದೆ. ಕ್ವಾರಿ ಲೀಸ್‌ದಾರರು ಪರ್ಮಿಟ್ ಇಲ್ಲದೆ ಹಾಗೂ ಕ್ರಷರ್ ಮಾಲೀಕರು ಕ್ರಷರ್ ಉತ್ಪನ್ನಗಳಿಗೆ ಎಂಡಿಪಿ ಇಲ್ಲದೆ ಖರೀದಿಸಿದ್ದು ಮತ್ತು ಮಾರಾಟ ಮಾಡಿದ ಬಗ್ಗೆ ಜಿಲ್ಲಾಡಳಿತ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ರೈತ ಕೂಲಿ ಸಂಗ್ರಾಮ ಸಮಿತಿ ಆಗ್ರಹಿಸಿದೆ.ಡಿ.12 ರಂದು ಹೊಸ ಆಪ್ ಅಳವಡಿಸಿಕೊಂಡು ಪರ್ಮಿಟ್ ತೆಗೆದು ಕಲ್ಲು ಹಾಗೂ ಕ್ರಷರ್ ಉತ್ಪನ್ನಗಳ ಸಾಗಾಣಿಕೆ ಮಾಡುವ ಬದಲು ಸರ್ಕಾರಕ್ಕೆ ರಾಜಧನ, ಸಿಸ್ಟಂ ಬ್ಲಾಕ್ ಅಗಿದ್ದರೂ ಕಲ್ಲು ಹಾಗೂ ಕ್ರಷರ್ ಉತ್ಪನ್ನಗಳ ಮಾರಾಟ ಮಾಡಿದ ಹಾಗೂ ಕಲ್ಲು ಕೊಟ್ಟ ಲೀಸ್‌ದಾರರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಇದ್ದೂ ಇಲ್ಲದಂತಾದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ:ಪರ್ಮಿಟ್ ತೆಗೆಯುವ ಇಂಟಿಗ್ರೇಡ್ ಸಿಸ್ಟಂ ಬ್ಲಾಕ್ ಆಗಿದೆ ಎನ್ನುವ ವಿಷಯ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಗೆ ಗೊತ್ತಿಲ್ಲವೇ? ಆದರೆ ಸಮಿತಿ ಪರ್ಮಿಟ್ ಇಲ್ಲದೆ ಸಾವಿರಾರು ಟನ್ ಕಲ್ಲು ಹಾಗೂ ಕ್ರಷರ್ ಉತ್ಪನ್ನಗಳನ್ನು ಎಂಡಿಪಿ ಇಲ್ಲದೆ ಹಾಡಹಗಲೇ ಮಾರಾಟ ಮಾಡಿ ಅಕ್ರಮವಾಗಿ ಸಾಗಿಸುತ್ತಿದ್ದರೂ ಕ್ರಮ ಕೈಗೊಳ್ಳದೆ ಸುಮ್ಮನೆ ಕುಳಿತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್, ಅರಣ್ಯ ಇಲಾಖೆ, ಕಂದಾಯ ಇಲಾಖೆ, ಪ್ರಾದೇಶಿಕ ಸಾರಿಗೆ, ಪರಿಸರ ಮತ್ತು ಮಾಲಿನ್ಯ ಇಲಾಖೆಗಳು ಇದ್ದರೂ ಸಹ ಯಾವ ಇಲಾಖೆಯೂ ಕನಿಷ್ಠ ತಪಾಸಣೆ ನಡೆಸಿ ಟಿಪ್ಪರ್ ಹಿಡಿಯುವ ಸಹಾಸಕ್ಕೆ ಮುಂದಾಗಿಲ್ಲ.ಸಾವಿರಾರು ಟನ್ ಕಲ್ಲು ಅಕ್ರಮವಾಗಿ ಸಾಗಾಣಿಕೆಯಾಗುತ್ತಿದ್ದರೂ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಗೆ ಒಳಪಡುವ ಅಧಿಕಾರಿಗಳು ತಪಾಸಣೆ ಮಾಡುವ ಧೈರ್ಯ ತೋರಿಸಿಲ್ಲ. ಇದು ಕರ್ತವ್ಯ ಲೋಪವೋ, ಸೋಮಾರಿತನವೋ ಎಂದು ಜನರು ವ್ಯಂಗ್ಯವಾಡಿದ್ದಾರೆ.
ಓಪನ್ ಆದ ಹಿರೀಕಾಟಿ ಚೆಕ್‌ಪೋಸ್ಟ್!ಗುಂಡ್ಲುಪೇಟೆ: ಹೋಂ ಗಾರ್ಡ್ ಬದಲಿಸಲು ಖನಿಜ ತನಿಖಾ ಠಾಣೆ ವಾರದಿಂದ ಮುಚ್ಚಿದ್ದ ಬಗ್ಗೆ ಕನ್ನಡಪ್ರಭ ವರದಿಯ ಬೆನ್ನಲ್ಲೆ ಮಂಗಳವಾರ ಬೆಳಿಗ್ಗೆಯೇ ಹಿರೀಕಾಟಿ ಖನಿಜ ತನಿಖಾ ಠಾಣೆ ಓಪನ್ ಆಗಿದೆ.ಡಿ.9 ರ ಕನ್ನಡಪ್ರಭದಲ್ಲಿ ಚೆಕ್‌ಪೋಸ್ಟ್ ಮುಚ್ಚಿ ಮೂರು ದಿನಗಳಾಯ್ತು ಎಂದು ವರದಿ ಪ್ರಕಟಿಸಿ ಜಿಲ್ಲಾಡಳಿತದ ಗಮನ ಸೆಳೆದಿತ್ತು. ಕೊನೆಗೂ ಎಚ್ಚೆತ್ತ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹೋಂ ಗಾರ್ಡ್ ಕಳುಹಿಸಿ ಚೆಕ್‌ಪೋಸ್ಟ್ ಬಾಗಿಲು ಓಪನ್ ಮಾಡಿಸಿದ್ದಾರೆ.