ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ ಜನಪರ ಸಮಸ್ಯೆ ಅಲಿಸುವಲ್ಲಿ ಇಲ್ಲಿನ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಪೂಜಾರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪಾವಗಡ

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆ.26 ರಂದು ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ 4ನೇ ಪ್ರಜಾ ಸೇವಾ ಕಾರ್ಯಕ್ರಮದ ಕುರಿತು ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ನೀಡಿಲ್ಲ. ಅಲ್ಲದೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಭಾಗವಹಿಸದೆ, ಬದಲಾಗಿ ಕೆಲವು ಸಿಬ್ಬಂದಿ ಕಳುಹಿಸಿದ್ದಾರೆ. ಸಮಸ್ಯೆ ಹಿನ್ನೆಲೆ ಆಗಮಿಸಿದ್ದವರಿಗೆ ಅಧಿಕಾರಿಗಳಿಂದ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಆದ್ದರಿಂದ ಜನರಿಗೆ ಇದು ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ದೂರಿದರು.

ಈಗಾಗಲೇ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರಜಾಸೇವಾ ಕಾರ್ಯಕ್ರಮ ನಡೆಯುತ್ತದೆ. ಆದರೆ ಗಡಿ ಭಾಗದ ಪಾವಗಡ ತಾಲೂಕಿನ ಸಮಸ್ಯೆ ಅಲಿಸಲು ಪ್ರಜಾಸೇವಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳು ಏಕೆ ಭಾಗವಹಿಸಿಲ್ಲ. ಕಾರ್ಯಕ್ರಮಕ್ಕೆ ಡಿಸಿ ಅಗಮಿಸಿದರೆ ಅನೇಕ ರೈತ ಹಾಗೂ ಜನಪರ ಸಮಸ್ಯೆ ಸ್ಥಳದಲ್ಲಿಯೆ ಬಗೆಹರಿಸಲು ಸಾಧ್ಯವಿದೆ ಎಂದು ಅವರು ಹೇಳಿದರು.

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಅನುಕೂಲ ಸಾರ್ವಜನಿಕರಿಗೆ ದೊರಕಿಸಿಕೊಡಲು ಅಧಿಕಾರಿಗಳು ತಮ್ಮ ನಿರ್ಲಕ್ಷ್ಯ ಧೋರಣೆಯನ್ನು ಸರಿಪಡಿಸಿಕೊಳ್ಳಬೇಕು. ಈ ಕೂಡಲೇ ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಎಚ್ಚೆತ್ತುಕೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಇದೇ ವೇಳೆ ಹಸಿರು ಸೇನೆ ತಾಲೂಕು ಅಧ್ಯಕ್ಷ ಶಿವು, ರಾಮಾಂಜನಪ್ಪ, ಸದಾಶಿವಪ್ಪ ಹನುಮಂತರಾಯಪ್ಪ ಇತರೆ ರೈತ ಸಂಘದ ಪದಾಧಿಕಾರಿಗಳು ಇದ್ದರು.