ಆರು ತಿಂಗಳ ಹೆಣ್ಣು ಮಗುವಿನ ಕೈಯಿಂದ ಡ್ರಿಪ್ ತೆಗೆಯುವಾಗ ಕಿರುಬೆರಳು ಕತ್ತರಿಸಿದ ಆರೋಪ ಸಂಬಂಧ ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಆಡಳಿತ ಮತ್ತು ವೈದ್ಯರು ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.

ಬೆಂಗಳೂರು : ಆರು ತಿಂಗಳ ಹೆಣ್ಣು ಮಗುವಿನ ಕೈಯಿಂದ ಡ್ರಿಪ್ ತೆಗೆಯುವಾಗ ಕಿರುಬೆರಳು ಕತ್ತರಿಸಿದ ಆರೋಪ ಸಂಬಂಧ ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಆಡಳಿತ ಮತ್ತು ವೈದ್ಯರು ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.

ಅರ್ಜಿ ವಜಾ

ಎಫ್‌ಐಆರ್‌ ರದ್ದು ಕೋರಿ ಆಸ್ಪತ್ರೆ ಆಡಳಿತ ಮಂಡಳಿ ಮತ್ತು ವೈದ್ಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರು ಅರ್ಜಿ ವಜಾಗೊಳಿಸಿದರು.

ಘಟನೆಯ ಬಳಿಕ ಮಗುವನ್ನು ನಾಲ್ಕು ಗಂಟೆಗಳ ಕಾಲ ತುರ್ತು ಚಿಕಿತ್ಸಾ ವಿಭಾಗದಲ್ಲಿರಿಸಲಾಗಿತ್ತು. ಈ ವೇಳೆ ಏನಾಯಿತು ಎಂಬುದು ತಿಳಿಯಬೇಕಿದೆ. ಮಗುವಿನ ಆರೈಕೆಯಲ್ಲಿ ವೈದ್ಯರು ಅಗತ್ಯ ಮುನ್ನೆಚ್ಚರಿಕೆ ವಹಿಸದಿದ್ದರೆ ಅಥವಾ ನಿಗದಿತ ವೈದ್ಯಕೀಯ ಶಿಷ್ಟಾಚಾರ ಅನುಸರಿಸದಿದ್ದರೆ ಅದು ನಿರ್ಲಕ್ಷ್ಯದ ಪ್ರಕರಣವಾಗಬಹುದು. ಹಾಗಾಗಿ, ಪ್ರಕರಣದ ಬಗ್ಗೆ ವಸ್ತುನಿಷ್ಠ ತನಿಖೆ ನಡೆಸಬೇಕು. ಇದು ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣವೇ ಎಂಬುದನ್ನು ನಿರ್ಧರಿಸಲು ತನಿಖಾಧಿಕಾರಿ ವಿಷಯ ತಜ್ಞರ ನೆರವು ಪಡೆದು, ನಂತರ ಸೂಕ್ತ ವರದಿ ಸಲ್ಲಿಸಬೇಕು ಎಂದು ಪೊಲೀಸರಿಗೆ ಪೀಠ ನಿರ್ದೇಶಿಸಿದೆ.

ಅನಾರೋಗ್ಯದ ಕಾರಣ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಡ್ರಿಪ್ ಹಾಕಲಾಗಿತ್ತು

ಅನಾರೋಗ್ಯದ ಕಾರಣ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಡ್ರಿಪ್ ಹಾಕಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆ ಮಾಡಲು ವೈದ್ಯರು ಸೂಚಿಸಿದ ಬಳಿಕ ನರ್ಸ್ ಡ್ರಿಪ್ ತೆಗೆಯುವಾಗ ಆಕಸ್ಮಿಕವಾಗಿ ಮಗುವಿನ ಕಿರುಬೆರಳು ಕತ್ತರಿಸಿದೆ ಎನ್ನಲಾಗಿದೆ. ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 125(ಬಿ) ಅಡಿಯಲ್ಲಿ ದಾಖಲಾಗಿರುವ ಪ್ರಕರಣ ರದ್ದುಗೊಳಿಸುವಂತೆ ಕೋರಿ ವೈದ್ಯರು ಮತ್ತು ಆಸ್ಪತ್ರೆ ಆಡಳಿತ ಅರ್ಜಿ ಸಲ್ಲಿಸಿದ್ದರು.