ಲೋಕಾಪುರ ಪಟ್ಟಣದ ಹೃದಯ ಭಾಗದಲ್ಲಿರುವ ತಾಲೂಕು ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಕಚೇರಿಗಾಗಿ ಮೀಸಲಿಟ್ಟ ಜಾಗವನ್ನು ಹಣದ ಆಸೆಗೆ ಮತ್ತು ಕಾನೂನು ಗಾಳಿಗೆ ತೂರಿ ಮುಧೋಳ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಅಂಬಿಗೇರ ಖಾಸಗಿಯವರಿಗೆ ನೀಡಿದ್ದಾರೆ ಎಂದು ಸ್ಥಳೀಯ ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಲೋಕಾಪುರ

ಪಟ್ಟಣದ ಹೃದಯ ಭಾಗದಲ್ಲಿರುವ ತಾಲೂಕು ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಕಚೇರಿಗಾಗಿ ಮೀಸಲಿಟ್ಟ ಜಾಗವನ್ನು ಹಣದ ಆಸೆಗೆ ಮತ್ತು ಕಾನೂನು ಗಾಳಿಗೆ ತೂರಿ ಮುಧೋಳ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಅಂಬಿಗೇರ ಖಾಸಗಿಯವರಿಗೆ ನೀಡಿದ್ದಾರೆ ಎಂದು ಸ್ಥಳೀಯ ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.

ಬಿಜೆಪಿ ಮುಖಂಡ ಲೋಕಣ್ಣ ಕತ್ತಿ ಮಾತನಾಡಿ, ಸಂಸದ ಹಾಗೂ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಸಾರ್ವಜನಿಕರ ಅನುಕೂಲಕ್ಕಾಗಿ ಮಿನಿಸೌಧ ನಿರ್ಮಿಸಲು ಸರಕಾರದಿಂದ ಅನುದಾನ ತಂದು ಜಾಗ ಮೀಸಲಿಟ್ಟದ್ದರು. ತಾಪಂ ಅಧಿಕಾರಿಗಳು ಬೇಜವಾಬ್ದಾರಿ ತನದಿಂದ, ಅಧಿಕಾರ ದುರ್ಬಳಪಡಿಸಿಕೊಂಡು, ಹಣದ ಆಸೆಗೆ ಸರಕಾರಿ ಜಾಗವನ್ನು ಸ್ವಹಿತಾಶಕ್ತಿಗೆ ಕಡಿಮೆ ಬಾಡಿಗೆಗೆ ನೀಡಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ಮಿನಿವಿಧಾನಸೌಧ, ಸಬ್ ರಿಜಿಸ್ಟ್ರಾರ್‌ ಆಫೀಸ್, ಕಂದಾಯ ಇಲಾಖೆ ಕಚೇರಿಗಳು ಇದೇ ಜಾಗದಲ್ಲಿ ನಿರ್ಮಿಸುವುದರಿಂದ ಪಟ್ಟಣ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ, ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ, ಸರಕಾರದ ಜಾಗೆಯನ್ನು ಮರಳಿ ತಾಪಂಗೆ ಪಡೆದುಕೊಳ್ಳಬೇಕು. ಸರಕಾರದ ಆಸ್ತಿಯನ್ನು ಉಳಿಸಲು ಕ್ರಮ ಕೈಗೊಳ್ಳಲು ಒತ್ತಾಯಿಸಿ, ಸರಕಾರಿ ಜಾಗವನ್ನು ನೀಡಿದ ತಾಪಂ ಅಧಿಕಾರಿಗಳ ಮಲ್ಲಿಕಾರ್ಜುನ ಅಂಬಿಗೇರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ಒತ್ತಾಯಿಸಿದರು.

ಚರಂಡಿ ಕಾಮಗಾರಿಗಳಲ್ಲಿ ಅವ್ಯವಹಾರ:

ಪಟ್ಟಣದ ಕಾಡರಕೊಪ್ಪ ರಸ್ತೆಯ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಿರುವ ಚರಂಡಿ ಪಿಡಬ್ಲೂಡಿ ಎಂಜಿನಿಯರ್ ಚನ್ನಬಸವ ಮಾಚನೂರ ಅವರ ಬೇಜಾಬ್ದಾರಿ ಹಾಗೂ ನಿಸ್ಕಾಳಜಿಯಿಂದ ಕಳಪೆಗಾರಿಯಿಂದ ವರ್ಷದಲ್ಲಿ ಮೂರು ಬಾರಿ ಬಿದ್ದು ಹೋದ ಪರಿಣಾಮ ರಾಜ್ಯ ಹೆದ್ದಾರಿ ಮೇಲೆ ತೆಗ್ಗು ಗುಂಡಿ ನಿರ್ಮಾಣವಾಗಿದೆ. ಇದರಿಂದ ಭಾರಿ ವಾಹನಗಳು, ಕಾರು, ಬೈಕ್‌ ಸವಾರರಿಗೆ ತುಂಬಾ ತೊಂದರೆಯಾಗಿದೆ. ಇದರಿಂದ ಸರಕಾರದಿಂದ ಬಂದ ಹಣದಲ್ಲಿ ಗುಣಮಟ್ಟದ ಕಾಮಗಾರಿ ನಿರ್ಮಿಸದಿರುವುದು ಅಧಿಕಾರಿ ದುರ್ವತೆನೆಗೆ ಹಿಡಿದ ಕನ್ನಡಿಯಾಗಿದೆ ಎಂದು ಪಿಕೆಪಿಎಸ್ ಅಧ್ಯಕ್ಷ ಹೊಳಬಸು ಕಾಜಗಾರ ಆರೋಪಿಸಿದ್ದಾರೆ.

ಸಂಗಮ-ಸಂಕೇಶ್ವರ ರಾಜ್ಯ ಹೆದ್ದಾರಿಯ ಲೋಕಾಪುರದಿಂದ ಯಾದವಾಡಕ್ಕೆ ಹೋಗುವ ಮಾರ್ಗದಲ್ಲಿ ರಸ್ತೆಯ ಅಗಲೀಕರಣದ ನೆಪದಲ್ಲಿ ಐದಾರು ಆರು ತಿಂಗಳಿನಿಂದ ಡಾಂಬರೀಕರಣಗೊಳಿಸದೇ ಹಾಗೆಯೇ ಬಿಟ್ಟಿರುವುದರಿಂದ ಕಲ್ಲಿನ ಖಡಿಗಳ ಮೇಲೆ ಬೈಕ್‌ ಅಪಘಾತ ಸಂಭವಿಸುತ್ತಿದ್ದು, ಶೀಘ್ರವೇ ಸಂಬಂಧಪಟ್ಟ ಅಧಿಕಾರಿಗಳು ಡಾಂಬರೀಕರಣ ಮಾಡಿ ಮುಂದಾಗುವ ಅನಾಹುತ ತಪ್ಪಿಸಬೇಕೆಂದು ಒತ್ತಾಯಿಸಿದರು.

ಲೋಕಾಪುರ ಪಟ್ಟಣ ಪಂಚಾಯತಿಗೆ ೫ ವರ್ಷಗಳಿಂದ ಸದಸ್ಯರಿಲ್ಲದೆ ಸಾರ್ವಜನಿಕರ ಮೂಲ ಸಮಸ್ಯೆಗಳಾದ ನೀರು, ಚರಂಡಿ, ರಸ್ತೆ, ಲೈಟ್, ಸ್ವಚ್ಛತೆ, ಉತಾರೆ ಬಗ್ಗೆ ಯಾರೋ ಹೇಳುವವರು, ಕೇಳವವರು ಇಲ್ಲದಂತಾಗಿದೆ. ಸದಸ್ಯರಿಲ್ಲದ ಕಾರಣ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾರ್ವಜನಿಕರ ಜೊತೆ ತಮ್ಮ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದಾರೆ. ಸದಸ್ಯರಿಲ್ಲದ ಕಾರಣ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವವರು ಯಾರೋ ಇಲ್ಲದಂತಾಗಿದೆ. ಇದರಿಂದ ಪಟ್ಟಣದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಆದಷ್ಟು ಬೇಗ ಸರಕಾರ ಪಟ್ಟಣ ಪಂಚಾಯತಿ ಚುನಾವಣೆ ನಡೆಸಿ ಪಟ್ಟಣ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಒತ್ತಾಯಿಸಿದರು.

ಸ್ಥಳೀಯ ಬಿಜೆಪಿ ಮುಖಂಡರಾದ ವ್ಹಿ.ಎಂ.ತೆಗ್ಗಿ, ಎಂ.ಎಂ.ವಿರಕ್ತಮಠ, ಯಮನಪ್ಪ ಹೊರಟ್ಟಿ, ಸಿದ್ರಾಮಪ್ಪ ದೇಸಾಯಿ, ವಿರೇಶ ಪಂಚಕಟ್ಟಿಮಠ, ಬಿ.ಎಲ್.ಬಬಲಾದಿ, ಶ್ರೀನಿವಾಸ ಹೂಗಾರ, ವಸಂತಗೌಡ ಪಾಟೀಲ, ಶಶಿಧರ ಕಂಟೆಪ್ಪಗೋಳ, ರಮೇಶ ದೇವರಡ್ಡಿ, ಕಾಶಲಿಂಗ ಮಾಳಿ, ಆನಂದ ಹವಳಖೋಡ, ಸೂರಜ ಅಂಗಡಿ, ಗುರುರಾಜ ಪಂಚಕಟ್ಟಿಮಠ, ಅರುಣ ಮುಧೋಳ ಒತ್ತಾಯಿಸಿದ್ದಾರೆ.

ಸರಕಾರಿ ಜಾಗವನ್ನು ಮೊದಲು ಬೇರೆದವರಿಗೆ ಟೆಂಡರ್ ನೀಡಿದ್ದರು. ಇದಕ್ಕೆ ಸಾರ್ವಜನಿಕರು ವಿರೋಧ ಪಡಿಸಿದ್ದರಿಂದ ಟೆಂಡರ್ ರದ್ದು ಮಾಡಿದ್ದರು. ಈಗ ಯಾರಿಗೂ ತಿಳಿಯದ ಹಾಗೆ ಮತ್ತೆ ಜಾಗವನ್ನು ಬೇರೆಯವರಿಗೆ ಬಾಡಿಗೆ ರೂಪದಲ್ಲಿ ನೀಡಿದ್ದಾರೆ. ಇದನ್ನು ರದ್ದು ಪಡಿಸದೇ ಇದ್ದರೆ ಲೋಕಾಯುಕ್ತರಿಗೆ ಮಾಹಿತಿ ನೀಡಿ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುವುದು.

- ಲೋಕಣ್ಣ ಭೀ ಕತ್ತಿ, ಬಿಜೆಪಿ ಮುಖಂಡರು

ತಾಪಂ ವ್ಯಾಪ್ತಿಗೆ ಬರುವ ಜಾಗವನ್ನು ಟೆಂಡರ್ ಮೂಲಕ ಕೊಡಲಾಗಿದೆ. ಸ್ಥಳೀಯ ಪತ್ರಿಕೆಯಲ್ಲಿ ಟೆಂಡರ್ ಕರೆದು ಬಾಡಿಗೆ ನೀಡಿದ್ದೇವೆ. ಕಾನೂನು ಮೀರಿ ಯಾವುದೇ ಕೆಲಸ ಮಾಡಿರುವುದಿಲ್ಲ.

- ಮಲ್ಲಿಕಾರ್ಜುನ ಅಂಬಿಗೇರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಮುಧೋಳ