ಪ್ರಸಿದ್ಧ ಗಂಜಾಂ ಶ್ರೀನಿಮಿಷಾಂಬ ದೇವಾಲಯದಲ್ಲಿ ಗುತ್ತಿಗೆ ನೀಡಿಕೆ ವಿಚಾರದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ದೇವಾಲಯದಲ್ಲಿ ಕಳ್ಳತನ ಎಸಗಿ ಸಿಕ್ಕಿಬಿದ್ದಿದ್ದ ವ್ಯಕ್ತಿಗೆ ಗುತ್ತಿಗೆ ನೀಡಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಎಲ್.ವಿ.ನವೀನ್ ಕುಮಾರ್

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪ್ರಸಿದ್ಧ ಗಂಜಾಂ ಶ್ರೀನಿಮಿಷಾಂಬ ದೇವಾಲಯದಲ್ಲಿ ಗುತ್ತಿಗೆ ನೀಡಿಕೆ ವಿಚಾರದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ದೇವಾಲಯದಲ್ಲಿ ಕಳ್ಳತನ ಎಸಗಿ ಸಿಕ್ಕಿಬಿದ್ದಿದ್ದ ವ್ಯಕ್ತಿಗೆ ಗುತ್ತಿಗೆ ನೀಡಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಪಟ್ಟಣ ಸಮೀಪದ ಗಂಜಾಂನ ಶ್ರೀನಿಮಿಷಾಂಬ ದೇವಾಲಯವು ರಾಜ್ಯ ಮಾತ್ರವಲ್ಲದೆ ರಾಷ್ಟ್ರದಲ್ಲೂ ಕೂಡ ಸಾಕಷ್ಟು ಭಕ್ತಗಣ ಹೊಂದಿದೆ. ಪ್ರತಿನಿತ್ಯವೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆಯುತ್ತಿದ್ದಾರೆ. ಭಕ್ತರಿಗೆ ಅನ್ನಸಂತರ್ಪಣೆ ನೀಡುವ ಉದ್ದೇಶದಿಂದ ಮುಜರಾಯಿ ಇಲಾಖೆಯಿಂದ ದೇವಾಲಯದಲ್ಲಿ ಕಳೆದ 3 ವರ್ಷಗಳಿಂದ ನಿರಂತರವಾಗಿ ಅನ್ನದಾಸೋಹ ನೆರವೇರುತ್ತಿದೆ.

ಇದೀಗ ಈ ಅನ್ನದಾಸೋಹದಲ್ಲಿ ತೊಡಗಿರುವ ಗುತ್ತಿಗೆದಾರ ಹಾಗೂ ಇದಕ್ಕೆ ಅವಕಾಶ ಕಲ್ಪಿಸಿರುವ ಆಡಳಿತದಿಂದಲೇ ಭ್ರಷ್ಟಾಚಾರ ನಡೆಯುತ್ತಿರುವ ಆರೋಪ ಕೇಳಿಬಂದಿದ್ದು, ಸರ್ಕಾರಿ ಹಾಗೂ ಧಾರ್ಮಿಕ ದತ್ತಿ ಇಲಾಖೆ ನಿಯಮಗಳ ಪ್ರಕಾರ ಯಾವುದೇ ದೇವಸ್ಥಾನದ ಸೇವೆಗಳು, ಸೌಲಭ್ಯಗಳು ಅಥವಾ ಆದಾಯದ ಮೂಲಗಳಿಗೆ ಸಂಬಂಧಿಸಿದಂತೆ ಗುತ್ತಿಗೆ ನೀಡಬೇಕಾದರೆ ಪಾರದರ್ಶಕವಾಗಿ ಇ-ಪ್ರೊಕ್ಯೂರ್‌ಮೆಂಟ್ ಮೂಲಕ ಟೆಂಡರ್ ಕರೆಯುವುದು ಕಡ್ಡಾಯವಾಗಿದೆ. ಆದರೆ, ಯಾವುದೇ ಸಾರ್ವಜನಿಕ ಪ್ರಕಟಣೆ ಅಥವಾ ಸ್ಪರ್ಧಾತ್ಮಕ ಬಿಡ್ಡಿಂಗ್ ನಡೆಸದೆ ಒಂದೇ ವ್ಯಕ್ತಿಗೆ ಸತತವಾಗಿ ವರ್ಷಗಳಿಂದ ಗುತ್ತಿಗೆ ನವೀಕರಿಸುತ್ತಾ ಬಂದಿರುವುದು ಸಾರ್ವಜನಿಕರ ಹಾಗೂ ಭಕ್ತಾದಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ದೇವಾಲಯದಲ್ಲಿ ಲಾಡು ಪ್ರಸಾದವು ಸಹ ಪ್ರಖ್ಯಾತಿಯಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ದೇವಾಲಯದ ಆಡಳಿತ ಲಾಡು ತಯಾರಿಕಾ ಗುತ್ತಿಗೆದಾರನೊಂದಿಗೆ ಅಕ್ರಮದಲ್ಲಿ ಜೊತೆಯಾಗಿದೆ ಎಂಬುದು ಹರಾಜು ಪ್ರಕ್ರಿಯೆಯಲ್ಲಿ ನಡೆದಿರುವ ವ್ಯತ್ಯಾಸಗಳಿಂದ ಕಂಡು ಬಂದಿದೆ.

ಇಲಾಖೆ ಕರೆದಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ಒಬ್ಬನೇ ಮಾಲೀಕತ್ವದ ಎರಡು ಹೆಸರಿನ ಏಜೆನ್ಸಿಗಳು ಸೇರಿದಂತೆ ಒಟ್ಟು 4 ಮಂದಿ ಭಾಗಿಯಾಗಿದ್ದರು. ದೇವಾಲಯದ ಅಡಳಿತದ ಸೂಚನೆ, ಗುಣಮಟ್ಟ ಮತ್ತು ಮೌಲ್ಯದಂತೆಯೇ 100 ಗ್ರಾಂ ತೂಕದ ಲಾಡು ಒಂದರ ತಯಾರಿಕೆಗೆ ಓರ್ವ ಗುತ್ತಿಗೆದಾರನಿಂದ 0.29 ಪೈಸೆ, ಮತ್ತೊಬ್ಬ 0.42 ಪೈಸೆ, ಇನ್ನೊಬ್ಬ 0.90 ಪೈಸೆಗೆ ಮಾಡಿಕೊಡುವುದಾಗಿ ದರ ಪಟ್ಟಿ ನೀಡಿದ್ದರು. ಕೆಲವೊಂದು ಸಣ್ಣ ಪುಟ್ಟ ಮಾನ್ಯತೆ ಪ್ರಮಾಣಪತ್ರ ಹೊಂದಿಲ್ಲ.

ಇವರನ್ನು ಹೊರತು ಪಡಿಸಿ ಒಂದೇ ಉದ್ಯಮಿ ಮಾಲೀಕತ್ವದ ಮಮತ ಕ್ಯಾಟರಿಂಗ್ 0.91 ಪೈಸೆ ಮತ್ತು ಶಾಮಿಯಾನ ಸರ್ವಿಸ್ ಹಾಗೂ ಜೀವನ್ ಶಾಮಿಯಾನ ಮತ್ತು ಕೇಟರಿಂಗ್ ಸರ್ವೀಸ್ 0.96 ಪೈಸೆಗೆ ನೀಡಿದ್ದು, ಇದರಲ್ಲಿ ಜೀವನ್ ಶಾಮಿಯಾನ ಸರ್ವಿಸ್‌ನ ಒಂದು ದಾಖಲಾತಿ ಪತ್ರ ಲಗತ್ತಿಸಿಲ್ಲ ಎಂದು ತಿರಸ್ಕರಿಸಿ ಅವರದ್ದೇ ಮಾಲೀಕತ್ವದ 0.91 ಪೈಸೆಯ ಮಮತ ಕ್ಯಾಟರಿಂಗ್ ಸರ್ವಿಸ್ ನಿರ್ವಹಿಸುತ್ತಿರುವ ಸಿದ್ದರಾಜುವಿಗೆ ನೀಡಿ ಅಕ್ರಮಕ್ಕೆ ಸಹಕಾರ ನೀಡಿರುವುದು ಪತ್ತೆಯಾಗಿದೆ.

ಕಳ್ಳತನದಲ್ಲಿ ಸಿಕ್ಕಿಬಿದ್ದಿದ್ದ ಗುತ್ತಿಗೆದಾರ:

ದೇವಾಲಯದಲ್ಲಿ ಪ್ರಸ್ತುತ ಅಡುಗೆ ಹಾಗೂ ಲಾಡು ತಯಾರಿಕಾ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಸಿದ್ದರಾಜು ಕಳೆದ 8 ವರ್ಷಗಳ ಹಿಂದೆ ಇದೇ ದೇವಾಲಯದಲ್ಲಿ ಹಿತ್ತಾಳೆ ದೀಪಾಲೆ ಕಂಬಗಳು, ತಾಮ್ರದ ಅಡುಗೆ ತಯಾರಿಸುವ ದೊಡ್ಡ ಪಾತ್ರೆಗಳು ಸೇರಿದಂತೆ ಅಧಿಕ ಮೌಲ್ಯದ ಸಾಮಗ್ರಿಗಳನ್ನು ಕದ್ದು ತಮ್ಮದೇ ಮಾಲೀಕತ್ವದ ಗೂಡ್ಸ್ ಆಟೋದಲ್ಲಿ ಸಾಗಿಸಲು ಮುಂದಾದ ವೇಳೆ ಅಂದಿನ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಗೂ ದೇವಾಲಯದ ಪ್ರಧಾನ ಅರ್ಚಕರಿಗೆ ಸಿಕ್ಕಿಬಿದ್ದಿದ್ದು, ಅಂದಿನ ವ್ಯವಸ್ಥಾಪನ ಸಮಿತಿ ಸಭೆ ಹಾಗೂ ಅಧಿಕಾರಿ ವರ್ಗದ ಆಡಳಿತದ ತೀರ್ಮಾನದಂತೆ ಈತನ ಗುತ್ತಿಗೆ ರದ್ದು ಮಾಡಿ ದೇವಾಲಯದಿಂದ ಹೊರದೂಡಲಾಗಿತ್ತು.

ವಿಪರ್‍ಯಾಸವೆಂದರೆ, ಅಂದು ಕಳ್ಳತನ ಎಸಗಿದ್ದ ಇದೇ ಗುತ್ತಿಗೆದರ ಸಿದ್ದರಾಜುವಿಗೆ ಇಂದು ಶ್ರೀನಿಮಿಷಾಂಬ ದೇವಾಲಯದ ಬಹುತೇಕ ಕಾರ್ಯಗಳಲ್ಲಿ ಗುತ್ತಿಗೆ ನೀಡಿ ಸರ್ವಾಧಿಕಾರ ನೀಡಿ ಭ್ರಷ್ಟಾಚಾರ ಮತ್ತು ಲಂಚ ಬಾಕತನಕ್ಕೆ ಅವಕಾಶ ಕಲ್ಪಿಸಿರುವುದು ಸಾರ್ವಜನಿಕ ಟೀಕೆಗೆ ಗುರಿಯಾಗಿದೆ.

ಸರ್ಕಾರದ ನಿಯಮಾವಳಿಯಂತೆ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ಗುತ್ತಿಗೆದಾರರ ಹಿನ್ನಲೆ ಹಾಗೂ ದಾಖಲಾತಿಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಮುಂದಿನ ಪ್ರಕ್ರಿಯೆಯಲ್ಲಿ ತೊಡಗಲು ಅವಕಾಶ ಕಲ್ಪಿಸಿಕೊಡುವ ಅವರ ಕರ್ತವ್ಯ. ಆದರೆ, ಇದೇ ಗುತ್ತಿಗೆದಾರರ ಕಳ್ಳತನದಲ್ಲಿ ಭಾಗಿಯಾಗಿ ಸಿಕ್ಕಿಬಿದ್ದು ನಂತರ ಇದೇ ದೇವಾಲಯದಿಂದ ಹೊರದೂಡಲ್ಪಟ್ಟಿರುವ ಅಧಿಕೃತ ದಾಖಲೆಗಳಿದ್ದರೂ ಸಹ ಎಲ್ಲವನ್ನೂ ಮುಚ್ಚಿಟ್ಟು, ಪುನಃ ಆತನಿಗೆ ಅಕ್ರಮವಾಗಿ ಅವಕಾಶ ಕಲ್ಪಿಸಿದ್ದಾರೆ. ಇದಲ್ಲದೆ ಇತ್ತೀಚೆಗೆ ದೇವಾಲಯದಿಂದ ಮತ್ತೊಂದು ಅವಧಿಯ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಈತನಿಗೂ ಅವಕಾಶ ಕಲ್ಪಿಸಿರುವುದು ಅಧಿಕಾರಿಗಳ ಕಳ್ಳಾಟಕ್ಕೆ ಸಾಕ್ಷಿಯಾಗಿದೆ.ಈ ಹಿಂದಿನ ವರ್ಷಗಳಲ್ಲಿ ಟೆಂಡರ್ ನಡೆಸಬೇಕಿತ್ತು. ಆದರೆ, ಕಾರಣಾಂತರಗಳಿಂದ ನಡೆದಿಲ್ಲ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ನಾನು ಅಧಿಕಾರ ವಹಿಸಿಕೊಂಡ ನಂತರ ನನ್ನ ಅವಧಿಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿ ಇದೀಗ ತಾಂತ್ರಿಕ ಬಿಡ್ ತೆರೆದು ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದು.

-ಎಚ್.ಎಸ್.ಮಹೇಶ್, ದೇಗುಲದ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಶ್ರೀನಿಮಿಷಾಂಬ ದೇವಾಲಯದಲ್ಲಿ ಈ ಹಿಂದೆ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ ಸಿದ್ದರಾಜು ಎಂಬ ವ್ಯಕ್ತಿಗೆ ಅನ್ನದಾಸೋಹ ಹಾಗೂ ಲಾಡು ತಯಾರಿಕೆ ಗುತ್ತಿಗೆ ನೀಡಿರುವುದನ್ನು ರದ್ದು ಮಾಡುವಂತೆ ದೇವಾಲಯದ ಇಒ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೂ ಯಾವುದೇ ಪ್ರಯೋಜವಾಗಿಲ್ಲ. ತಕ್ಷಣ ಆತನ ಮಾಲೀಕತ್ವದಲ್ಲಿ ನಡೆಯುತ್ತಿರುವ ಎಲ್ಲಾ ಗುತ್ತಿಗೆಗಳನ್ನ ಸ್ಥಗಿತಗೊಳಿಸಿ ಕಪ್ಪುಪಟ್ಟಿಗೆ ಸೇರ್ಪಡಿಸುವ ಜೊತೆಗೆ ಹೆಚ್ಚುವರಿಗೆ ತನಿಖೆಗೆ ಒಳಪಡಿಸಬೇಕು.

- ಗಂಜಾಂ, ಕುಮಾರ್, ತಾಲೂಕು ಅಧ್ಯಕ್ಷ, ಜಯ ಕರ್ನಾಟಕ ಜನಪರ ವೇದಿಕೆ