ನಗರದ ಮಲ್ಲಿಕಾಪುರದಟ್ಟಿಯ ಸರ್ವೆ ನಂ.೩ರಲ್ಲಿ ೧೯೮೭ರಿಂದಲೂ ವಾಸವಾಗಿ, ನಗರಸಭೆಗೆ ನಿಯಮಿತವಾಗಿ ಕಂದಾಯ ಪಾವತಿಸುತ್ತಿರುವ ೧೨೭ ಕುಟುಂಬಗಳಿಗೆ ಇದುವರೆಗೂ ಹಕ್ಕುಪತ್ರ ನೀಡಿಲ್ಲ ಎಂದು ಆರೋಪಿಸಿ ನಗರಸಭೆ ಸದಸ್ಯೆ ಉಮಾ ವಿಜಯರಾಜ್ ಅವರ ನೇತೃತ್ವದಲ್ಲಿ ನಗರಸಭೆ ಕಚೇರಿ ಮುಂದೆ ಶುಕ್ರವಾರ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಶಿರಾ

ನಗರದ ಮಲ್ಲಿಕಾಪುರದಟ್ಟಿಯ ಸರ್ವೆ ನಂ.೩ರಲ್ಲಿ ೧೯೮೭ರಿಂದಲೂ ವಾಸವಾಗಿ, ನಗರಸಭೆಗೆ ನಿಯಮಿತವಾಗಿ ಕಂದಾಯ ಪಾವತಿಸುತ್ತಿರುವ ೧೨೭ ಕುಟುಂಬಗಳಿಗೆ ಇದುವರೆಗೂ ಹಕ್ಕುಪತ್ರ ನೀಡಿಲ್ಲ ಎಂದು ಆರೋಪಿಸಿ ನಗರಸಭೆ ಸದಸ್ಯೆ ಉಮಾ ವಿಜಯರಾಜ್ ಅವರ ನೇತೃತ್ವದಲ್ಲಿ ನಗರಸಭೆ ಕಚೇರಿ ಮುಂದೆ ಶುಕ್ರವಾರ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಳೆದ ಹಲವು ವರ್ಷಗಳಿಂದ ಮಲ್ಲಿಕಾಪುರದಹಟ್ಟಿ ಬಡಾವಣೆಯಲ್ಲಿ ವಾಸವಿರುವ ಕುಟುಂಬಗಳು ಕೂಲಿ ಕೆಲಸ ಮಾಡಿ ಸಂಪಾದಿಸಿದ ಹಣದಲ್ಲಿ ನಗರಸಭೆಗೆ ಕಂದಾಯ ಪಾವತಿಸುತ್ತಾ ಬಂದಿದ್ದಾರೆ. ಅವರಿಗೆ ನಗರಸಭೆಯಿಂದ ಮನೆಗಳಿಗೆ ಹಕ್ಕುಪತ್ರ ನೀಡುವುದಾಗಿ ಈ ಹಿಂದೆ ಭರವಸೆ ನೀಡಲಾಗಿತ್ತು. ಆ ಹಿನ್ನೆಲೆಯಲ್ಲಿ ನಗರಸಭೆ ಅಧ್ಯಕ್ಷರು ಸರ್ವೆ ನಂ.೫ ಮತ್ತು ೬ರಲ್ಲಿ ಹಕ್ಕುಪತ್ರ ನೀಡುವ ಪ್ರಕ್ರಿಯೆ ಕೈಗೊಂಡಿದ್ದಾರೆ. ಆದರೆ ಸರ್ವೆ ನಂ.೩ರ ಮಲ್ಲಿಕಾಪುರದಟ್ಟಿಯಲ್ಲಿ ೧೨೭ ಮನೆಗಳ ವಿಚಾರದಲ್ಲಿ ಮಾತ್ರ ವಿಳಂಬ ಮಾಡಲಾಗುತ್ತಿದ್ದಾರೆ. ಈ ಬಗ್ಗೆ ನಾನು ಸ್ಲಂ ಬೋರ್ಡ್‌ಗೆ ತೆರಳಿ ಅಧಿಕಾರಿಗಳನ್ನು ವಿಚಾರಿಸಿದಾಗ, ಶಿರಾ ತಹಸೀಲ್ದಾರ್ ಅವರು ಪಹಣಿ ಬದಲಾವಣೆ ಮಾಡಿ ಹಸ್ತಾಂತರಿಸುವ ಪ್ರಕ್ರಿಯೆ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ. ಇದುವರೆಗೂ ವಾರ್ಡ್ ನಂ. ೨೮ರ ವ್ಯಾಪ್ತಿಗೆ ಸಂಬಂಧಿಸಿದಂತೆ ನಗರಸಭೆಯಿಂದ ಅರ್ಜಿ ಸಲ್ಲಿಕೆಯಾಗಿಲ್ಲ. ನಗರಸಭೆಯ ಅಧ್ಯಕ್ಷರು ಹಾಗೂ ಪೌರಾಯುಕ್ತರು ಉದ್ದೇಶಪೂರ್ವಕವಾಗಿ ತಾರತಮ್ಯ ಮಾಡುತ್ತಿದ್ದಾರೆ. ಆಡಳಿತದ ತಪ್ಪುಗಳನ್ನು ಪ್ರಶ್ನಿಸಿ ವಿರೋಧ ವ್ಯಕ್ತಪಡಿಸಿದ್ದಕ್ಕೆ ಹಕ್ಕುಪತ್ರ ನೀಡುವ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕೂಡಲೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಶೀಲಿಸಿ, ೧೨೭ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು. ಹಕ್ಕುಪತ್ರ ನೀಡುವ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.

ಮುಖಂಡ ಬಿ.ಕೆ.ಮಂಜುನಾಥ್ ಮಾತನಾಡಿ ಶಿರಾ ನಗರಸಭೆಯಲ್ಲಿ ವಾರ್ಡ್ ನಂ. ೨೮ರ ನಿವಾಸಿಗಳಿಗೆ ಹಕ್ಕು ಪತ್ರ ನೀಡುವಲ್ಲಿ ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ತಾರತಮ್ಯ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಆ ವಾರ್ಡಿನ ಸದಸ್ಯರಾದ ಉಮಾ ವಿಜಯರಾಜ್ ಅವರು ಜನರಿಗೋಸ್ಕರ ನಗರಸಭೆ ಮುಂಭಾಗ ಸತ್ಯಾಗ್ರಹ ಮಾಡುತ್ತಿದ್ದಾರೆ. ನಗರದ ಹಲವು ವಾರ್ಡ್‌ಗಳಿಗೆ ಹಕ್ಕು ಪತ್ರ ವಿತರಣೆ ಮಾಡಲು ಕ್ರಮ ಕೈಗೊಂಡು ವಾರ್ಡ್ ನಂ ೨೮ರ ಜನರಿಗೆ ಹಕ್ಕು ಪತ್ರ ವಿತರಿಸಲು ಕ್ರಮ ಕೈಗೊಂಡಿಲ್ಲ. ಇದು ಖಂಡನೀಯ ಈ ಕೂಡಲೇ ಶಾಸಕರು, ನಗರಸಭೆ ಅಧ್ಯಕ್ಷರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಬಂದು ಧರಣಿ ಸತ್ಯಾಗ್ರಹ ನಿರತರ ಸಮಸ್ಯೆ ಬಗೆ ಹರಿಸಬೇಕು. ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.

ಧರಣಿ ಸತ್ಯಾಗ್ರಹದಲ್ಲಿ ನಗರ ಬಿಜೆಪಿ ಅಧ್ಯಕ್ಷ ಗಿರಿಧರ್, ನಿವಾಸಿಗಳಾದ ರಾಧಾಮಣಿ, ಗೌರಮ್ಮ, ಲಕ್ಷ್ಮೀದೇವಮ್ಮ, ವಂತಲಕ್ಷ್ಮಿ, ಮಂಜಮ್ಮ, ನಿರ್ಮಲ, ತಾಯಮ್ಮ, ನೇತ್ರಾವತಿ, ಮಹಾಲಕ್ಷ್ಮಿ, ಯಲ್ಲಮ್ಮ, ಶಾರದಮ್ಮ, ಕಲಾವತಿ, ಶಿವಣ್ಣ, ರಾಜಣ್ಣ, ಸ್ವಾತಿ, ಯಶೋದಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.