ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ತಾಲೂಕು ಕಚೇರಿಯಲ್ಲಿ ಆಚರಿಸುವಲ್ಲಿ ತಹಸೀಲ್ದಾರ್ ವರದರಾಜ್ ಹಾಗೂ ಪ್ರಭಾರ ಸಮಾಜ ಕಲ್ಯಾಣಾಧಿಕಾರಿ ದಿನೇಶ್ ಅಸಡ್ಡೆ ತೋರಿದ ಹಿನ್ನೆಲೆಯಲ್ಲಿ ಇಲ್ಲಿನ ದಲಿತಪರ ಸಂಘಟನೆಗಳ ಮುಖಂಡರು ಅಧಿಕೃತ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಪಾವಗಡ
ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ತಾಲೂಕು ಕಚೇರಿಯಲ್ಲಿ ಆಚರಿಸುವಲ್ಲಿ ತಹಸೀಲ್ದಾರ್ ವರದರಾಜ್ ಹಾಗೂ ಪ್ರಭಾರ ಸಮಾಜ ಕಲ್ಯಾಣಾಧಿಕಾರಿ ದಿನೇಶ್ ಅಸಡ್ಡೆ ತೋರಿದ ಹಿನ್ನೆಲೆಯಲ್ಲಿ ಇಲ್ಲಿನ ದಲಿತಪರ ಸಂಘಟನೆಗಳ ಮುಖಂಡರು ಅಧಿಕೃತ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವಿಟ್ಟು ಪ್ರತ್ಯೇಕವಾಗಿ ಸಂವಿಧಾನ ದಿನಾಚರಣೆ ನಡೆಸಿದರು. ಸಂವಿಧಾನ ದಿನದಂತಹ ಮಹತ್ವದ ಕಾರ್ಯಕ್ರಮಕ್ಕೆ ಅಧಿಕಾರಿಗಳು ಸೂಕ್ತ ಸಿದ್ಧತೆ ಮಾಡಿಕೊಂಡಿರಲಿಲ್ಲ. ಕಾರ್ಯಕ್ರಮದ ಬಗ್ಗೆ ದಲಿತಪರ ಸಂಘಟನೆಗಳಿಗೆ ಸರಿಯಾದ ಮಾಹಿತಿ ನೀಡಿರಲಿಲ್ಲ. ಸಂವಿಧಾನದ ಆಶಯಕ್ಕೆ ತಕ್ಕಂತೆ ಕಾರ್ಯಕ್ರಮ ನಡೆಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿರುವ ದಲಿತ ಮುಖಂಡರು, ಶಿಸ್ತು ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.
ಇದೇ ವೇಳೆ ತಾಲೂಕು ಮಾದರ ಮಹಾಸಭಾ ಅಧ್ಯಕ್ಷ ಕತಿಕ್ಯಾನಹಳ್ಳಿಯ ನರಸಿಂಹಪ್ಪ ಮಾತನಾಡಿ, ಸಂವಿಧಾನದಿಂದಲೇ ನಮಗೆಲ್ಲರಿಗೂ ಹಕ್ಕುಗಳು ಸಿಕ್ಕಿವೆ. ಅಂತಹ ಪವಿತ್ರ ದಿನದಂದು 11 ಗಂಟೆಯಾದರೂ ತಾಲೂಕು ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸದೇ ತಹಸೀಲ್ದಾರ್ ವರದರಾಜ್ ಹಾಗೂ ತಾಲೂಕು ಸಮಾಜ ಕಲ್ಯಾಣಾಧಿಕಾರಿ ದಿನೇಶ್ ಇತರೆ ಅಧಿಕಾರಿಗಳು ಅಸಡ್ಡೆ ತೋರುವುದು ಖಂಡನೀಯ. ಈ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ಕಾರ್ಯಕ್ರಮದ ಬಗ್ಗೆ ಉಡಾಫೆ ತೋರುವ ಪ್ರಭಾರ ಸಮಾಜ ಕಲ್ಯಾಣಾಧಿಕಾರಿ ದಿನೇಶ್ ಅವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಸಿ.ಕೆ. ತಿಪ್ಪೇಸ್ವಾಮಿ ಮಾತನಾಡಿ, ಸಂವಿಧಾನದ ಮೀಸಲು ಅಡಿ ಸೌಲಭ್ಯ ಪಡೆದ ಎಸ್ಸಿ ಮೀಸಲು ಕ್ಷೇತ್ರದಿಂದ ಆಯ್ಕೆಯಾದ ಹಾಲಿ ಶಾಸಕ ಹಾಗೂ ಮಾಜಿ ಶಾಸಕರಿಗೆ ಕಾಳಜಿ ಇರಬೇಕು. ತಹಸೀಲ್ದಾರ್, ತಾಪಂ ಇಒ ಹಾಗೂ ಸಮಾಜ ಕಲ್ಯಾಣಾಧಿಕಾರಿ ಎಸ್ಸಿಗಳೇ ಆಗಿದ್ದರೂ ಮೀಸಲು ಸೌಲಭ್ಯದಿಂದ ಅಧಿಕಾರ ವಹಿಸಿಕೊಂಡ ಈ ಅಧಿಕಾರಿಗಳಿಗೆ ಸಂವಿಧಾನವನ್ನು ಗೌರವಿಸುವ ಬದ್ಧತೆ ಇಲ್ಲ. ಸಂವಿಧಾನ ಕಾರ್ಯಕ್ರಮಗಳ ಬಗ್ಗೆ ಉದಾಸೀನತೆ ತೋರುವ ಪ್ರಭಾರ ಸಮಾಜ ಕಲ್ಯಾಣಾಧಿಕಾರಿಯನ್ನು ಎತ್ತಂಗಡಿ ಮಾಡದಿದ್ದರೆ 30ರಂದು ಪಾವಗಡದಲ್ಲಿ ದಲಿತಪರ ಸಂಘಟನೆಗಳಿಂದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಮಹಾ ಆದಿಗ ಹೋರಾಟ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿದರು. ಮಾದರ ಮಹಾಸಭಾದ ಕಾರ್ಯದರ್ಶಿ ಕುಮಾರ್ ಅವಿನಾಶ್, ದವಡಬೆಟ್ಟ ನರಸಪ್ಪ ಖಂಡಿಸಿದ್ದು, ದಲಿತಪರ ಹೋರಾಟಗಾರ ಸುಬ್ಬರಾಜ್, ತಮಟೆ ಸುಬ್ಬರಾಯಪ್ಪ, ವಳ್ಳೂರು ನಾಗೇಶ್, ಕಡಮಲಕುಂಟೆ ಹನುಮಂತರಾಯಪ್ಪ, ಗ್ರಾಪಂ ಮಾಜಿ ಸದಸ್ಯ ಗೋವಿಂದಪ್ಪ, ಬಿ.ಪಿ. ಪೆದ್ದನ್ನ, ಕಡಪಲಕರೆ ನರಸಿಂಹಪ್ಪ, ಕನ್ನಮೇಡಿ ನಾಗರಾಜು, ಸಿದ್ದಪ್ಪ, ಸಿ.ಟಿ. ಮಾರಪ್ಪ, ಗಂಗಾಧರ್, ಮಂಗಳವಾಡ ಹನುಮಂತರಾಯಪ್ಪ, ಚಿನ್ನಮ್ಮನಹಳ್ಳಿ ವೆಂಕಟರಮಣಪ್ಪ, ಕಾಲೋನಿ ಗುತ್ತಿಗೆದಾರ ನಾಗರಾಜ್, ಬಳಸಮುದ್ರ ವೆಂಕಟೇಶ್, ಬ್ಯಾಡನೂರು ಉಗ್ರಪ್ಪ, ಪೊನ್ನಸಮುದ್ರ ನಾಗರಾಜ್ ಇತರೆ ಅನೇಕ ಮಂದಿ ದಲಿತಪರ ಸಂಘಟನೆಯ ಮುಖಂಡರು ಇದ್ದರು.