ಸಹಕಾರಿ ಸಂಘದಲ್ಲಿ ಅವ್ಯವಹಾರ ಆರೋಪ, ತನಿಖೆಗೆ ಆಗ್ರಹ

| Published : Oct 15 2025, 02:08 AM IST

ಸಾರಾಂಶ

2020-21ನೇ ಸಾಲಿನಲ್ಲಿ ಅಂದಾಜು ₹1 ಲಕ್ಷ ನಿವ್ವಳ ಲಾಭ ಗಳಿಸಿತ್ತು. ನಂತರ 2021-22ರಿಂದ 2024-25ರ ವರೆಗೂ ಒಟ್ಟಾರೆ ₹85.89 ಲಕ್ಷ ಕ್ರೋಡ್ರೀಕೃತ ನಷ್ಟವಾಗಿದ್ದು, ಪ್ರತಿ ವರ್ಷ ಅನುತ್ಪಾದಕ ಆಸ್ತಿ ಹೆಚ್ಚಾಗುತ್ತಿದೆ ಎಂದು ವಕೀಲ ತಿಮ್ಮಲಾಪುರದ ರವಿಶಂಕರ ಆರೋಪಿಸಿದರು.

ಹರಪನಹಳ್ಳಿ: ಪಟ್ಟಣದ ವಿವಿದ್ಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘ (ಬಿ90)ದ ಬಿಡಿಪಿ ಮತ್ತು ಕೃಷಿಯೇತರ ಸಾಲಗಳಲ್ಲಿ ನಡೆದಿರುವ ಅವ್ಯಹಾರದ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಕೀಲ ತಿಮ್ಮಲಾಪುರದ ರವಿಶಂಕರ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಆಡಳಿತ ಮಂಡಳಿ ವೈಫಲ್ಯದಿಂದ ಸಂಘವು ದಿವಾಳಿ ಹಂತಕ್ಕೆ ತಲುಪಿದೆ. ಕೂಡಲೇ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಕಲಂ 64ರ ಅಡಿಯಲ್ಲಿ ವಿಚಾರಣೆ ನಡೆಸುವಂತೆ ಒತ್ತಾಯಿಸಿದರು.

2020-21ನೇ ಸಾಲಿನಲ್ಲಿ ಅಂದಾಜು ₹1 ಲಕ್ಷ ನಿವ್ವಳ ಲಾಭ ಗಳಿಸಿತ್ತು. ನಂತರ 2021-22ರಿಂದ 2024-25ರ ವರೆಗೂ ಒಟ್ಟಾರೆ ₹85.89 ಲಕ್ಷ ಕ್ರೋಡ್ರೀಕೃತ ನಷ್ಟವಾಗಿದ್ದು, ಪ್ರತಿ ವರ್ಷ ಅನುತ್ಪಾದಕ ಆಸ್ತಿ ಹೆಚ್ಚಾಗುತ್ತಿದೆ ಎಂದು ಆರೋಪಿಸಿದರು.

2025ರ ಮಾರ್ಚ್ ಅಂತ್ಯಕ್ಕೆ ಸದಸ್ಯರಿಂದ ವಸೂಲಾದ ಸ್ವಂತ ಹಣ ಅಂದಾಜು ₹ 9ಕೋಟಿ ಇದ್ದು, ಇದರಲ್ಲಿ ಕೃಷಿ ಸಾಲವಾಗಿ ₹ 7 ಕೋಟಿ ಸಾಲ ವಿತರಿಸಲಾಗಿದೆ. ಉಳಿದ ₹ 2 ಕೋಟಿಯನ್ನು ಯಾವುದೇ ಬ್ಯಾಂಕಿನಲ್ಲಿ ಇಟ್ಟಿಲ್ಲ. ಇದು ಅನುಮಾನಕ್ಕೆ ಕಾರಣವಾಗಿದೆ ಎಂದು ದೂರಿದರು.

ಸಹಕಾರಿ ಸಂಘದ ಅಭಿವೃದ್ಧಿಗಾಗಿ ನಬಾರ್ಡ್‌ನಿಂದ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಅಂದಾಜು ₹56 ಲಕ್ಷ ಮಂಜೂರಾಗಿದೆ. ಆದರೆ, ಕಾಂಪ್ಲೆಕ್ಸ್ ನಿರ್ಮಾಣಕ್ಕೆ ₹30 ಲಕ್ಷಕ್ಕೆ ಟೆಂಡರ್ ನೀಡಿದ್ದು, ಬಾಕಿ ಹಣ ₹25 ಲಕ್ಷ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದರು.

ಸಂಘವು ಅಂದಾಜು ₹ 6 ಕೋಟಿ ಬಿಡಿಪಿ ಸಾಲ ನೀಡಿದ್ದು, ಇದರಲ್ಲಿ ₹ 4 ಕೋಟಿಗೂ ಅಧಿಕ ಸುಸ್ತಿ ಸಾಲವಾಗಿದ್ದು ಸಂಘದ ಆಡಳಿತ ಮಂಡಳಿ ಯಾವುದೇ ವಸೂಲಿ ಕ್ರಮ ಕೈಗೊಂಡಿಲ್ಲ. ಸಂಘವು ಹಾನಿಯಲ್ಲಿದ್ದರೂ ಆಡಳಿತ ಮಂಡಳಿ ಯಾವುದೇ ಸೂಕ್ತ ಕಾನೂನು ಕ್ರಮ ಕೈಗೊಳ್ಳದೆ ಇರುವುದರಿಂದ ಸಂಘದ ಆಸ್ತಿತ್ವಕ್ಕೆ ಧಕ್ಕೆ ಉಂಟಾಗಿರುತ್ತದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಸಹಕಾರಿ ಸಂಘದ ಚುನಾವಣೆಯ ಪರಾಜಿತ ಸದಸ್ಯರಾದ ಬಾವಿಕಟ್ಟಿ ಭರಮಪ್ಪ, ಚಿಕ್ಕೇರಿ ವೆಂಕಟೇಶ, ಪೂಜಾರ ನಾಗಪ್ಪ, ಜಿ.ಹನುಮಂತಪ್ಪ, ಜಿ.ವಿಜಯಕುಮಾರ, ವಕೀಲ ಟಿ.ಅಹ್ಮದ್ ಹುಸೇನ್, ಗುಂಡಿ ಸುಜಾತ ಮಂಜುನಾಥ, ಮುಖಂಡರಾದ ವಕೀಲ ಮತ್ತಿಹಳ್ಳಿ ಕೊಟ್ರೇಶ, ಎಲ್.ನಾಗರಾಜ, ಹೆಚ್.ನಾಗರಾಜ, ಬಾರಿಕಿ ರವಿ ಇದ್ದರು.