ಅವ್ಯವಹಾರ ಆರೋಪ: ಅಳಗವಾಡಿ ಗ್ರಾಪಂಗೆ ಬೀಗ

| Published : Aug 09 2025, 12:00 AM IST

ಸಾರಾಂಶ

ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಅಧ್ಯಕ್ಷ ಹಾಗೂ ಪಿಡಿಒಗಳು ಸಾರ್ವಜನಿಕ ಹಿತಾಸಕ್ತಿಯಡಿ ಅಭಿವೃದ್ಧಿ ಕಾಮಗಾರಿ ನಡೆಸಿದ್ದೇವೆ ಎಂದು ಕೋಟ್ಯಾಂತರ ರುಪಾಯಿ ಹಗರಣ ಮಾಡಿದ್ದು, ಈ ಕುರಿತಾಗಿ ಗ್ರಾಪಂಗೆ ಯಾವ ಅವಧಿಯಲ್ಲಿ ಎಷ್ಟು ಅನುದಾನ ಮಂಜೂರಾಗಿದೆ ಎಂಬುದರ ಕುರಿತಾಗಿ ಆರ್‌ಟಿಐ ಕಾಯ್ದೆಯಡಿ ಮನವಿ ಸಲ್ಲಿಸಿ ತಿಂಗಳಾದರೂ ಗ್ರಾಪಂ ಅಧಿಕಾರಿಗಳು ಯಾವುದೇ ಉತ್ತರ ನೀಡಿಲ್ಲ. ಹೀಗಾಗಿ, ಬೇಸತ್ತು ಗ್ರಾಪಂಗೆ ಬೀಗ ಹಾಕಿರುವುದಾಗಿ ಗ್ರಾಮಸ್ಥರು ವಿವರಿಸಿದರು.

ನವಲಗುಂದ: ಗ್ರಾಮದ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಿಲ್ಲ ಎಂದು ಆರೋಪಿಸಿ ತಾಲೂಕಿನ ಅಳಗವಾಡಿ ಗ್ರಾಮಸ್ಥರು ಸ್ಥಳೀಯ ಗ್ರಾಪಂಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ಜರುಗಿದೆ.

ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಅಧ್ಯಕ್ಷ ಹಾಗೂ ಪಿಡಿಒಗಳು ಸಾರ್ವಜನಿಕ ಹಿತಾಸಕ್ತಿಯಡಿ ಅಭಿವೃದ್ಧಿ ಕಾಮಗಾರಿ ನಡೆಸಿದ್ದೇವೆ ಎಂದು ಕೋಟ್ಯಾಂತರ ರುಪಾಯಿ ಹಗರಣ ಮಾಡಿದ್ದು, ಈ ಕುರಿತಾಗಿ ಗ್ರಾಪಂಗೆ ಯಾವ ಅವಧಿಯಲ್ಲಿ ಎಷ್ಟು ಅನುದಾನ ಮಂಜೂರಾಗಿದೆ ಎಂಬುದರ ಕುರಿತಾಗಿ ಆರ್‌ಟಿಐ ಕಾಯ್ದೆಯಡಿ ಮನವಿ ಸಲ್ಲಿಸಿ ತಿಂಗಳಾದರೂ ಗ್ರಾಪಂ ಅಧಿಕಾರಿಗಳು ಯಾವುದೇ ಉತ್ತರ ನೀಡಿಲ್ಲ. ಹೀಗಾಗಿ, ಬೇಸತ್ತು ಗ್ರಾಪಂಗೆ ಬೀಗ ಹಾಕಿರುವುದಾಗಿ ಗ್ರಾಮಸ್ಥರು ವಿವರಿಸಿದರು.

ಈ ಕುರಿತಾಗಿ ಧಾರವಾಡ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರಿಗೆ ಪ್ರತಿಭಟನೆ ನಡೆಸಿದರೂ ಏನೂ ಪ್ರಯೋಜನವಾಗಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಮುಖಂಡರು ಬೇಸರ ವ್ಯಕ್ತ ಪಡಿಸಿದರು.

ಜತೆಗೆ ಕಳೆದ ಒಂದು ತಿಂಗಳಿಂದ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಿಲ್ಲ. ಬದಲಾಗಿ ಒಂದು ತಿಂಗಳಿಂದ ಗ್ರಾಪಂ ಕಸ ತುಂಬಿದ ವಾಹನ ಗ್ರಾಪಂ ಆವರಣದಲ್ಲಿ ಹಾಗೇ ನಿಂತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಸುದ್ದಿ ತಿಳಿದ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ಗ್ರಾಮಸ್ಥರು ಹಾಗೂ ಗ್ರಾಪಂ ಅಧಿಕಾರಿಗಳೊಂದಿಗೆ ಚರ್ಚಿಸಿ ಗ್ರಾಪಂ ಎಲ್ಲ ಸದಸ್ಯರು ಹಾಗೂ ಅಧಿಕಾರಿಗಳು ಮಂಗಳವಾರ ನವಲಗುಂದ ಪೊಲೀಸ್ ಠಾಣಿಗೆ ಬಂದು ವಿವರಣೆ ನೀಡಬೇಕು ಎಂದು ತಾಕೀತು ಮಾಡಿ ಗ್ರಾಮಸ್ಥರ ಮನವೊಲಿಸಿ ಗ್ರಾಪಂ ಬೀಗ ತೆರವುಗೊಳಿಸಿದರು.

ಈ ವೇಳೆ ಮಂಜುನಾಥ ಗುಡಿಸಾಗರ, ಫಕ್ಕೀರಗೌಡ ತೆಗ್ಗಿನಕೇರಿ, ಫಕ್ಕೀರಗೌಡ ತಡಹಾಳ, ಮಂಜುನಾಥ ನಿಂಬಣ್ಣವರ, ನಿಂಗರಾಜ ಈರೇಶನವರ, ಅಶೋಕ ಕಮ್ಮಾರ, ಮಂಜುನಾಥ ಸಾಲಿಯವರ, ಮುತ್ತಪ್ಪ ಶಿವಳ್ಳಿ, ಮಾಬುಸಾಬ ನದಾಫ್, ಮಲ್ಲಪ್ಪ ಮೇವುಂಡಿ, ಮಹೇಶ ಹನಸಿ, ಕಿರಣ ಹನಸಿ, ಭರತ ಜೈನರ, ಕಾರ್ತಿಕ ಸಾಲಿ ಸೇರಿದಂತೆ ಮತ್ತಿತರರು ಇದ್ದರು.