ಕನ್ನಡಪ್ರಭ ವಾರ್ತೆ ಅಮೀನಗಡ

ಪಟ್ಟಣ ಪಂಚಾಯತಿಯಲ್ಲಿ ಹಿಂದಿನ ಮುಖ್ಯಾಧಿಕಾರಿಯಿಂದ ಹಣ ದುರ್ಬಳಕೆಯಾಗಿದ್ದು, ತನಿಖೆಗೆ ಆದೇಶಿಸಿ ಕ್ರಮಕೈಗೊಳ್ಳಬೇಕು ಎಂದು ಚುನಾಯಿತ ಸದಸ್ಯರು ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಸಮೇತ ಮಾಹಿತಿ ನೀಡಿದ ಪಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯರಾದ ರಮೇಶ ಮುರಾಳ, ಸಂಜಯ ಐಹೊಳ್ಳಿ, ಹಿಂದಿನ ಮುಖ್ಯಾಧಿಕಾರಿ ಶಿವಕುಮಾರ ಕಟ್ಟಿಮನಿ, ಜನರಲ್‌ ಫಂಡ್‌ ಹಾಗೂ ಪಪಂ ವಾಣಿಜ್ಯ ಮಳಿಗೆಗಳ ಬಾಡಿಗೆ ಹಣ ಲಕ್ಷಾಂತರ ರೂಪಾಯಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಪಟ್ಟಣದಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಪಪಂ ಮೂಲಕ ಸಾಮಾಗ್ರಿಗಳ ಪೂರೈಕೆಗೆ ಸುಮಾರು ₹ 8 ಲಕ್ಷ ನಗದು ಜಮೆ ಮಾಡಲಾಗಿದ್ದು, ಅದನ್ನು ಅಂಗನವಾಡಿ ಕೇಂದ್ರಗಳಿಗೆ ಪೂರೈಸದೆ ದುರ್ಬಳಕೆ ಮಾಡಲಾಗಿದೆ.

ಈ ಕುರಿತು ನಿಯಮಾನುಸಾರ ಸಭೆಯ ಗಮನಕ್ಕಾಗಲಿ, ಮೇಲಧಿಕಾರಿಗಳ ಗಮನಕ್ಕಾಗಲಿ ತರದೇ ನೇರವಾಗಿ ಹಣ ದುರ್ಬಳಕೆ ಮಾಡುವುದರ ಮೂಲಕ ಅಧಿಕಾರಿ ವಂಚಿಸಿದ್ದಾರೆ. ಅಲ್ಲದೆ, ಪಟ್ಟಣದ ವ್ಯಾಪ್ತಿಯಲ್ಲಿ ನೂತನವಾಗಿ ಲೇಔಟ್ ಗಳಾಗುತ್ತಿದ್ದು, ಕೆಲವು ಲೇಔಟ್‌ಗಳಿಗೆ ನೇರವಾಗಿ ಹೋಗಿ ಪರಿಶೀಲಿಸದೆ, ಸಭೆಯ ಗಮನಕ್ಕೂ ತಾರದೆ ಪಪಂನಿಂದ ಅನುಮತಿ ನೀಡಿದ್ದು, ಇನ್ನೂ ಕೆಲವು ಲೇಔಟ್‌ಗಳಲ್ಲಿ ಮೂಲಭೂತ ಸೌಲಭ್ಯಗಳೇ ಇಲ್ಲದಿದ್ದರೂ ಉತಾರಗಳನ್ನು ಪೂರೈಸುವ ಮೂಲಕ ಭ್ರಷ್ಟಾಚಾರ ಎಸೆಯಲಾಗಿದೆ. ಇದರಲ್ಲಿ ಪಪಂ ಅಧ್ಯಕ್ಷರೂ ಶಾಮೀಲಾಗಿರುವ ಸಂಶಯವಿದ್ದು, ಸಂಬಂಧಿಸಿದ ಮೇಲಧಿಕಾರಿಗಳು ಹಿಂದಿನ ಮುಖ್ಯಾಧಿಕಾರಿ ಶಿವಕುಮಾರ ಕಟ್ಟಿಮನಿಯವರ ಮೇಲೆ ಸೂಕ್ತಕ್ರಮ ಕೈಗೊಳ್ಳುವುದರ ಮೂಲಕ ತಪ್ಪಿತಸ್ಥರ ವಿರುದ್ಧ ಜಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಪಪಂ ಸದಸ್ಯರಾದ ಗಣೇಶ ಚಿತ್ರಗಾರ, ತುಕಾರಾಮ ಲಮಾಣಿ, ರಾಘವೇಂದ್ರ ಮುಳ್ಳೂರ, ಯಮನಪ್ಪ ನಾಗರಾಳ, ತುಕಾರಾಮ ಪವಾರ ಇದ್ದರು.