ನಾಗತಿಹಳ್ಳಿ ಗ್ರಾಮದ ಶಿಕ್ಷಕ ಓಂಕಾರ ಮೂರ್ತಿ ಅವರ ಹೆಸರು ಮತದಾರ ಪಟ್ಟಿಯಿಂದ ಕಾಣೆಯಾಗಿರುವುದಾಗಿ ಅವರು ಗಂಭೀರ ಆರೋಪ ಮಾಡಿದ್ದು, ಶಿಕ್ಷಕರ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಮಾತನಾಡಿದ ಓಂಕಾರ ಮೂರ್ತಿ, ಉದ್ದೇಶಪೂರ್ವಕವಾಗಿ ತಮ್ಮ ಹೆಸರನ್ನು ಮತದಾರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆರೋಪಿಸಿದರು. ಈ ಘಟನೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸದಾನಂದ ಮೂರ್ತಿ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜು ಹಾಗೂ ರಾಜ್ಯ ಮಟ್ಟದ ನಾಯಕರ ಪಾತ್ರವಿದೆ ಎಂದು ಅವರು ನೇರವಾಗಿ ದೂರಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಸಿದ್ಧತೆಗಳು ಆರಂಭವಾಗಿರುವ ನಡುವೆಯೇ ಮತದಾರ ಪಟ್ಟಿಗೆ ಸಂಬಂಧಿಸಿದಂತೆ ವಿವಾದ ತಲೆದೋರಿದೆ. ನಾಗತಿಹಳ್ಳಿ ಗ್ರಾಮದ ಶಿಕ್ಷಕ ಓಂಕಾರ ಮೂರ್ತಿ ಅವರ ಹೆಸರು ಮತದಾರ ಪಟ್ಟಿಯಿಂದ ಕಾಣೆಯಾಗಿರುವುದಾಗಿ ಅವರು ಗಂಭೀರ ಆರೋಪ ಮಾಡಿದ್ದು, ಶಿಕ್ಷಕರ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಮಾತನಾಡಿದ ಓಂಕಾರ ಮೂರ್ತಿ, ಉದ್ದೇಶಪೂರ್ವಕವಾಗಿ ತಮ್ಮ ಹೆಸರನ್ನು ಮತದಾರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆರೋಪಿಸಿದರು. ಈ ಘಟನೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸದಾನಂದ ಮೂರ್ತಿ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜು ಹಾಗೂ ರಾಜ್ಯ ಮಟ್ಟದ ನಾಯಕರ ಪಾತ್ರವಿದೆ ಎಂದು ಅವರು ನೇರವಾಗಿ ದೂರಿದರು. ಕಳೆದ ಹಲವು ವರ್ಷಗಳಿಂದ ಕೆಲವೇ ಮಂದಿ ಸಂಘದ ಆಡಳಿತವನ್ನು ಹಿಡಿತದಲ್ಲಿಟ್ಟುಕೊಂಡಿದ್ದು, ಲೆಕ್ಕಪತ್ರಗಳಲ್ಲಿ ಪಾರದರ್ಶಕತೆ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಹೆಸರನ್ನು ಯಾವುದೇ ನೋಟಿಸ್ ನೀಡದೆ ತೆಗೆದುಹಾಕಿರುವುದು ನ್ಯಾಯಸಮ್ಮತವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವಿಚಾರದಲ್ಲಿ ನ್ಯಾಯ ದೊರಕದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಹರೀಶ್, ಪುಟ್ಟಸ್ವಾಮಿ, ಕೇಶವ, ಬಸವರಾಜ್ ಹುಲ್ಲಳ್ಳಿ, ನವೀನ್, ಶೇಖರಪ್ಪ, ರವಿಕುಮಾರ್, ನಾಗೇಶ್, ನರೇಂದ್ರ, ಸಿದ್ದಪ್ಪ, ಗಂಗಾಧರ್, ಧರ್ಮಪ್ಪ, ತೋಪೇಗೌಡ ಸೇರಿದಂತೆ ಹಲವು ಶಿಕ್ಷಕರು ಉಪಸ್ಥಿತರಿದ್ದರು.