ಕೆಲವು ದಿನಗಳ ಹಿಂದೆ ಬಿಕ್ಕಳಸೆಯ ಹಿಂದೂ ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ವಿಳಂಬ ಧೋರಣೆ ಮತ್ತು ತನಿಖೆಯಲ್ಲಿ ನಿರ್ಲಕ್ಷ್ಯವಹಿಸಿದೆ ಎಂದು ಸಿದ್ದಾಪುರ ಬಿಜೆಪಿ ಮಂಡಲ ಘಟಕ ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದೆ.

ಕನ್ನಡಪ್ರಭ ವಾರ್ತೆ ಸಿದ್ದಾಪುರಕೆಲವು ದಿನಗಳ ಹಿಂದೆ ಬಿಕ್ಕಳಸೆಯ ಹಿಂದೂ ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ವಿಳಂಬ ಧೋರಣೆ ಮತ್ತು ತನಿಖೆಯಲ್ಲಿ ನಿರ್ಲಕ್ಷ್ಯವಹಿಸಿದೆ ಎಂದು ಸಿದ್ದಾಪುರ ಬಿಜೆಪಿ ಮಂಡಲ ಘಟಕ ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ., ಇದು ಕೇವಲ ಸಾಮಾನ್ಯ ಆತ್ಮಹತ್ಯೆಯಲ್ಲ, ಇದೊಂದು ವ್ಯವಸ್ಥಿತ ಲವ್ ಜಿಹಾದ್ ಕೃತ್ಯವಾಗಿದ್ದು, ಪೊಲೀಸರು ಅಪರಾಧಿಯನ್ನು ರಕ್ಷಿಸುತ್ತಿದ್ದಾರೆ ಎಂದು ದೂರಿದರು.ಮೃತ ಯುವತಿ ಮಲ್ಲಿಕಾ ಅಪ್ಪಟ ಹಿಂದುತ್ವವಾದಿಯಾಗಿದ್ದಳು. ಪ್ರತಿದಿನ ಡೈರಿಯಲ್ಲಿ ಶ್ರೀರಾಮ್ ಜೈರಾಮ್ ಎಂದು ಬರೆಯುವಷ್ಟು ಧಾರ್ಮಿಕಳಾಗಿದ್ದ ಅವಳನ್ನು, ಮುಸ್ಲಿಂ ಯುವಕನೊಬ್ಬ ತಾನು ಹಿಂದೂ ಮತ್ತು ನಾಯ್ಕ ಜನಾಂಗದವನು ಎಂದು ಸುಳ್ಳು ಹೇಳಿ ಆರು ತಿಂಗಳ ಕಾಲ ಪ್ರೀತಿಸುವ ನಾಟಕವಾಡಿದ್ದಾನೆ. ಬೇರೆ ಕಡೆ ಮದುವೆ ನಿಶ್ಚಯವಾದಾಗಲೂ ಸುಳ್ಳು ಹೇಳಿ ನಂಬಿಸಿದ್ದ. ಕೊನೆಗೆ ಆತ ಮುಸ್ಲಿಂ ಎಂಬ ಸತ್ಯ ತಿಳಿದಾಗ ಆಕೆಗೆ ತೀವ್ರ ಆಘಾತವುಂಟು ಮಾಡಿದ್ದಾನೆ ಎಂದು ಘಟನೆಯ ಕುರಿತು ಹೇಳಿದರು.

ಮಾ. 15ರಂದು ಘಟನೆ ನಡೆದಾಗ ಪೊಲೀಸರು ಅದನ್ನು ಸಹಜ ಸಾವು ಎಂದು ಬಿಂಬಿಸಲು ಪ್ರಯತ್ನಿಸಿದರು. ಅತಂತ್ರ ಸ್ಥಿತಿಯಲ್ಲಿದ್ದ ಆಕೆಯ ತಾಯಿಗೆ ತಪ್ಪು ಮಾಹಿತಿ ನೀಡಿ ದೂರು ಬರೆಸಲು ಮಹಿಳಾ ಪೊಲೀಸರೇ ಮುಂದಾಗಿದ್ದರು. ಪಕ್ಷದ ಮುಖಂಡರು ಮತ್ತು ಸಾರ್ವಜನಿಕರ ಒತ್ತಡದ ನಂತರ ತನಿಖೆಯ ಭರವಸೆ ನೀಡಿದ ಸಿಪಿಐ ಅವರು, ಇದುವರೆಗೆ ಯಾವುದೇ ಕಾಲ್ ಲಿಸ್ಟ್ ಪರಿಶೀಲನೆಯನ್ನಾಗಲಿ ಅಥವಾ ಆರೋಪಿಯ ಬಂಧನವನ್ನಾಗಲಿ ಮಾಡಿಲ್ಲ. ಎಫ್ಎಸ್ಎಲ್ ವರದಿ ಹೆಸರಿನಲ್ಲಿ ಕೇವಲ ಕಾಲಹರಣ ಮಾಡಲಾಗುತ್ತಿದೆ ಎಂದು ಆರೋಪಿಸಿ, ಯುವತಿಯು ಸಾವಿಗೂ ಮುನ್ನ ಸದರಿ ಯುವಕನಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾಳೆ ಎನ್ನಲಾದ ಕಾಲ್ ರೆಕಾರ್ಡ್‌ಗಳಿದ್ದರೂ ಪೊಲೀಸರು ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.

ತನಿಖೆ ನಡೆಸದ ಅಧಿಕಾರಿಗಳು, ಸಾಕ್ಷ್ಯಗಳನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಇದರ ವಿರುದ್ಧ ಹಿಂದೂ ಜಾಗರಣ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಜೊತೆಗೂಡಿ ಈಗಾಗಲೇ ತಹಶೀಲ್ದಾರರಿಗೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಏ20ರಂದು ಸಿದ್ದಾಪುರ ಪೊಲೀಸ್ ಸ್ಟೇಷನ್ ಎದುರು ಎಲ್ಲಾ ಸಂಘಟನೆಗಳ ಸಹಯೋಗದೊಂದಿಗೆ ಬೃಹತ್ ಧರಣಿ ಹಮ್ಮಿಕೊಳ್ಳಲಾಗಿದೆ. ಪೊಲೀಸರು ತಕ್ಷಣವೇ ಎಚ್ಚೆತ್ತುಕೊಂಡು ಆರೋಪಿಯನ್ನು ಬಂಧಿಸದಿದ್ದರೆ ಮುಂಬರುವ ದಿನಗಳಲ್ಲಿ ಸಿದ್ದಾಪುರ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭ ಪಕ್ಷದ ಪ್ರಮುಖರಾದ ಗುರುರಾಜ ಶಾನಭಾಗ, ಎಸ್.ಕೆ. ಮೇಸ್ತ, ನಂದನ ಬೋರ್ಕರ, ತೋಟಪ್ಪ ನಾಯ್ಕ, ವೆಂಕಟೇಶ, ಸುರೇಶ ನಾಯ್ಕ, ಶಾಂತಕುಮಾರ ಭಟ್ಟ, ಶ್ರೀಧರ ನಾಯ್ಕ, ಕೃಷ್ಣಮೂರ್ತಿ ನಾಯ್ಕ, ಮಂಜುನಾಥ ಭಟ್ಟ, ಶ್ರೀನಿವಾಸ ಮಡಿವಾಳ, ಜಿ.ಬಿ. ನಾಯ್ಕ ಹಾಗೂ ಶಿವು ಕೊಂಡ್ಲಿ ಉಪಸ್ಥಿತರಿದ್ದರು.