ಸಿದ್ದರಾಮಯ್ಯ ಸರ್ಕಾರದಿಂದ ಹಿಂದೂ ವಿರೋಧಿ ನೀತಿ ಆರೋಪ

| Published : Mar 07 2024, 01:51 AM IST

ಸಿದ್ದರಾಮಯ್ಯ ಸರ್ಕಾರದಿಂದ ಹಿಂದೂ ವಿರೋಧಿ ನೀತಿ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಸೇರಿದ ಕರ್ನಾಟಕ ದೇವಸ್ಥಾನ–ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಪ್ರತಿಭಟನಾಕಾರರು, ದೇವಸ್ಥಾನಗಳ ಹಣವನ್ನು ದೇವಾಲಯಗಳ ಅಭಿವೃದ್ದಿಗೆ ಬಳಸದ ಸಿದ್ದರಾಮಯ್ಯ ಸರ್ಕಾರ, ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಜ್ಯ ಸರ್ಕಾರವು ಧಾರ್ಮಿಕ ದತ್ತಿ ಇಲಾಖೆಯ ಕಾಯ್ದೆಗೆ ಹೊಸ ತಿದ್ದುಪಡಿ ತಂದಿದ್ದು, ವಿಧಾನಸಭೆಯಲ್ಲೂ ಅಂಗೀಕಾರವಾಗಿದೆ. ಇದರಲ್ಲಿ ಅನೇಕ ಹಿಂದೂ ವಿರೋಧಿ ಅಂಶಗಳಿವೆ ಎಂದು ಆರೋಪಿಸಿ ಕರ್ನಾಟಕ ದೇವಸ್ಥಾನ–ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಲಾಯಿತು.ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು, ದೇವಸ್ಥಾನಗಳ ಹಣವನ್ನು ದೇವಾಲಯಗಳ ಅಭಿವೃದ್ದಿಗೆ ಬಳಸದ ಸಿದ್ದರಾಮಯ್ಯ ಸರ್ಕಾರ, ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಂದಿರ ಮಹಾಸಂಘದ ದಕ್ಷಿಣ ಕನ್ನಡ ಜಿಲ್ಲಾ ಸಂಯೋಜಕ ವಿಜಯ್ ಕುಮಾರ್, ದೇವಸ್ಥಾನಗಳ ಪರಂಪರೆಗೆ ಕಾಂಗ್ರೆಸ್ ಸರ್ಕಾರದಿಂದ ಅಪಾಯ ಎದುರಾಗಿದೆ. ದೇವಸ್ಥಾನಗಳ ಹಣವನ್ನು ಅನ್ಯ ಮತೀಯರ ಧಾರ್ಮಿಕ ಸ್ಥಳಗಳಿಗೆ ಬಳಸುವುದು ಖಂಡನೀಯ ಎಂದರು. ದೇವಾಲಯ ಸಮಿತಿಯಲ್ಲಿ ಹಿಂದೂಗಳಲ್ಲದವರನ್ನೂ ಸೇರ್ಪಡೆಗೊಳಿಸಿದ್ದು ಸರಿಯಲ್ಲ. ಆ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸವಾಗಿದೆ ಎಂದು ಆಕ್ಷೇಪಿಸಿದರು.1 ಕೋಟಿ ರು. ಆದಾಯವಿರುವ ದೇವಸ್ಥಾನಗಳಿಂದ ಶೇ.10ರಷ್ಟು ಹಾಗೂ 5-10 ಲಕ್ಷ ರು. ಆದಾಯವಿರುವ ದೇವಸ್ಥಾನಗಳಿಂದ ಶೇ.5ರಷ್ಟು ಹಣವನ್ನು ಸರ್ಕಾರವು ಸಾಮಾನ್ಯ ನಿಧಿಗೆ ವರ್ಗಾವಣೆ ಮಾಡುವ ಷಡ್ಯಂತ್ರ ನಡೆಸಿದೆ ಎಂದು ಆರೋಪಿಸಿದರು. ಕರ್ನಾಟಕ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕವನ್ನು ಕೂಡಲೇ ರದ್ದು ಮಾಡುವಂತೆ ಒತ್ತಾಯಿಸಿದ ಅವರು, ಜಿಲ್ಲಾಡಳಿತ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು. ಸರ್ಕಾರ ಸ್ಪಂದಿಸದಿದ್ದರೆ ರಾಜ್ಯ ಮಟ್ಟದ ಹೋರಾಟ ರೂಪಿಸುವುದಾಗಿ ಇದೆ ಸಂದರ್ಭ ಎಚ್ಚರಿಸಿದರು. ಪ್ರಮುಖರಾದ ಹೊಸೂರು ದೇವಾಲಯ ಸಮಿತಿಯ ಹೊಸೂರು ಧರ್ಮಜ, ಕುಶಾಲನಗರ ಮುತ್ತಪ್ಪ ದೇವಾಲಯದ ಪವನ್ ಬಿದ್ದಪ್ಪ, ಕುಶಾಲನಗರ ಸಾಯಿ ದೇವಾಲಯದ ಓಬಲ್ ರೆಡ್ಡಿ, ಮಡಿಕೇರಿಯ ಶ್ರೀಚೌಡೇಶ್ವರಿ ದೇವಾಲಯದ ಜಗದೀಶ್, ಗಜಾನನ, ಕನ್ನಿಕಾ ಪರಮೇಶ್ವರಿ ದೇವಾಲಯದ ಯೋಗೇಶ್ ಮತ್ತಿತರರು ಪಾಲ್ಗೊಂಡಿದರು. ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.