ಅತ್ಯಾಚಾರ ಯತ್ನ ಆರೋಪ: ಕೊರಿಯೋಗ್ರಾಫರ್ ಸೆರೆ

| Published : Feb 10 2024, 01:46 AM IST / Updated: Feb 10 2024, 03:11 PM IST

ಸಾರಾಂಶ

ಡ್ಯಾನ್ಸ್ ಮಾಸ್ಟರ್ ಒಬ್ಬ ಅಪ್ರಾಪ್ತ ಬಾಲಕಿಯನ್ನು ಪ್ರೀತಿಯ ಬಲೆಗೆ ಬೀಳಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ತಾಲ್ಲೂಕಿನ ಆಲ್ದೂರು ಪಟ್ಟಣದಲ್ಲಿ ಗುರುವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಡ್ಯಾನ್ಸ್ ಮಾಸ್ಟರ್ ಒಬ್ಬ ಅಪ್ರಾಪ್ತ ಬಾಲಕಿಯನ್ನು ಪ್ರೀತಿಯ ಬಲೆಗೆ ಬೀಳಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ತಾಲ್ಲೂಕಿನ ಆಲ್ದೂರು ಪಟ್ಟಣದಲ್ಲಿ ಗುರುವಾರ ನಡೆದಿದೆ.

ಡ್ಯಾನ್ಸ್ ಕಲಿಯಲು ಬರುತ್ತಿದ್ದ ಅಪ್ರಾಪ್ತೆಯ ಜತೆ ಆಲ್ದೂರು ಪಟ್ಟಣದ ಸಂತೆ ಮೈದಾನದ ನಿವಾಸಿ ರುಮಾನ್ ಎಂಬಾತ ಸಲಿಗೆ ಬೆಳೆಸಿಕೊಂಡಿದ್ದ. ರುಮಾನ್ ಡಾನ್ಸ್ ಕೊರಿಯೋ ಗ್ರಾಫರ್ ಆಗಿದ್ದು, ಪ್ರೀತಿಯ ಹೆಸರಿನಲ್ಲಿ ಬಾಲಕಿಯನ್ನು ಮೋಸದ ಬಲೆಗೆ ಬೀಳಿಸಿದ್ದ ಎಂದು ಹಿಂದೂ ಕಾರ್ಯಕರ್ತರು ಆರೋಪಿಸಿದ್ದಾರೆ.

ಆಲ್ದೂರು ಸಮೀಪ ದೊಡ್ಡ ಮಾಗರವಳ್ಳಿ ಗ್ರಾಮದ ಬಾಲಕಿಯನ್ನು ಪ್ರೀತಿಯ ಹೆಸರಲ್ಲಿ ಪುಸಲಾಯಿಸಿ ದಾರಿ ತಪ್ಪಿಸಿದ್ದಾನೆ ಎಂದು ಬಾಲಕಿಯ ಪೋಷಕರು ಆಲ್ದೂರು ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಡ್ಯಾನ್ಸ್ ಮಾಸ್ಟರ್ ಮೇಲೆ ಹಲ್ಲೆ ನಡೆಸಿದ ಕಾರಣಕ್ಕೆ ಘಟನೆ ಸಂಬಂಧ ವಿಎಚ್‌ಪಿ ಜಿಲ್ಲಾ ಸಂಚಾಲಕ ಸೇರಿ 7 ಹಿಂದೂ ಕಾರ್ಯಕರ್ತರನ್ನು ಆಲ್ದೂರು ಪೊಲೀಸರು ಬಂಧಿಸಿದ್ದಾರೆ.ಬಾಲಕಿಯ ಪೋಷಕರಿಂದ ರುಮಾನ್ ವಿರುದ್ಧ ಅಪ್ರಾಪ್ತೆಯ ಅಪಹರಣ ಯತ್ನ, ಪ್ರೀತಿಸಿ ವಂಚನೆ ಎಂದು ದೂರು ದಾಖಲಿಸಿದ್ದಾರೆ. 

ಘಟನೆ ಸಂಬಂಧ ರುಮಾನ್ ಕುಟುಂಬಸ್ಥರಿಂದಲೂ ಪ್ರತಿ ದೂರು ದಾಖಲಾಗಿದೆ.ತಮ್ಮ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಸಿ.ಡಿ. ಶಿವಕುಮಾರ, ಚಿಕ್ಕಮಾಗರವಳ್ಳಿ, ಮಧು ಚಿಕ್ಕಮಾಗರವಳ್ಳಿ, ಪ್ರಜ್ವಲ್ ಆಲ್ದೂರು, ಪರೀಕ್ಷಿತ್ ಗಾಳಿಗಂಡಿ, ರಂಜಿತ್ ಅರೇನಹಳ್ಳಿ, ಸ್ವರೂಪ ಕಬ್ಬಿಣ ಸೇತುವೆ, ಆದರ್ಶ್ ಅರೇನಹಳ್ಳಿ ಹಾಗೂ ಕಾರ್ತಿಕ್ ಅರೇನಹಳ್ಳಿ ವಿರುದ್ಧ ರುಮಾನ್‌ ಕೂಡ ದೂರು ಸಲ್ಲಿಸಿದ್ದಾರೆ. 

ಘಟನೆಗೆ ಸಂಬಂಧ ಆಲ್ದೂರು ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ. ಪೋಕ್ಸೋ ಕಾಯ್ದೆಯಡಿ ರುಮಾನ್ ಬಂಧನವಾಗಿದೆ, ಇತ್ತ ರುಮಾನ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ 7 ಜನರನ್ನು ಬಂಧಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಆಲ್ದೂರು ಪಟ್ಟಣದಲ್ಲಿ ಕೆಎಸ್‌ಆರ್‌ಪಿ ನಿಯೋಜನೆ ಮಾಡಲಾಗಿದೆ.

ಬಾಲಕಿಯ ತಂದೆಯಿಂದ ದೂರು: ತನ್ನ ಹಿರಿಯ ಮಗಳು ರುಮಾನ್ ಎಂಬವರ ಬಳಿ 3 ವರ್ಷಗಳಿಂದ ಡ್ಯಾನ್ಸ್ ಕ್ಲಾಸಿಗೆ ಹೋಗುತ್ತಿದ್ದಳು, ಮುರುಡೇಶ್ವರ, ಬೇಲೂರು, ಮಂಗಳೂರಿಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ. 

ನಂತರ ವಿಡಿಯೋ ಮಾಡಿ ಅವಳನ್ನು ಬ್ಲಾಕ್ ಮೇಲ್ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮನೆಯಲ್ಲಿ ಹೇಳಿದರೆ ನಿನ್ನ ವಿಡಿಯೋ, ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ ಎಂದು ಬೆದರಿಸಿದ್ದಾನೆ. ಮಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಕೋರಿದ್ದಾರೆ.