ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಅಯೋಧ್ಯೆಯಲ್ಲಿ ಸೋಮವಾರ ಶ್ರೀ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಸ್ಥಳೀಯ ಜೆಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ಶ್ರೀರಾಮ ಚರಿತಾಮೃತ ರೂಪಕ ಪ್ರದರ್ಶನ ಹಾಗೂ ಅಯೋಧ್ಯೆ ರಾಮಮಂದಿರ ಭವ್ಯ ಪ್ರತಿಕೃತಿ ಜನಮನ ಸೂರೆಗೊಂಡಿತು.1 ರಿಂದ 4 ನೇ ತರಗತಿಯ 150ಕ್ಕೂ ಅಧಿಕ ಮಕ್ಕಳ ಪುಟ್ಟ ಹೆಜ್ಜೆಗಳ ಮನೋಜ್ಞ ಅಭಿನಯದಲ್ಲಿ ಪ್ರಭು ಶ್ರೀರಾಮ, ಲಕ್ಷ್ಮಣ, ಭರತ ಶತ್ರುಘ್ನರ ಜನನ, ವಿದ್ಯಾಭ್ಯಾಸ, ಸೀತಾ ಸ್ವಯಂವರ, ಮಂಥರೆಯ ಕುತಂತ್ರ, ಶ್ರೀ ರಾಮಚಂದ್ರನ ವನವಾಸ, ಶಬರಿಯ ಭಕ್ತಿ, ಶೂರ್ಪನಖಿಯ ಮೋಹ, ಸೀತಾಪಹರಣ, ವಾಲಿ ಸುಗ್ರೀವರ ಕದನ, ವಾಲಿಯ ವಧೆ, ಹನುಮಂತನ ಸೀಮೋಲ್ಲಂಘನ, ಸೀತೆಯ ಅಶೋಕ ವನದ ವ್ಯಥೆ, ಹನುಮಂತನ ಪರಾಕ್ರಮ, ಲಂಕೆಯ ದಹನ, ಸೇತುವೆ ನಿರ್ಮಾಣ, ರಾಮ ರಾವಣರ ಯುದ್ಧ, ಸಂಜೀವಿನಿಗಾಗಿ ಹನುಮಂತ ಪರ್ವತವನ್ನೇ ಎತ್ತಿ ತರುವ ದೃಶ್ಯ, ವಿಭೀಷಣನ ಸ್ನೇಹ, ರಾವಣನ ಅಂತ್ಯ, ಶ್ರೀರಾಮ ಪಟ್ಟಾಭಿಷೇಕ ಹೀಗೆ ಇಡೀ ರಾಮಾಯಣವನ್ನು ಕೇವಲ 1 ಗಂಟೆಯೊಳಗೆ ಕಟ್ಟಿಕೊಟ್ಟರು.
ಶಿಕ್ಷಕಿ ಶಬಾನಾ ಮುಂಡಗನೂರ ಮುಸಲ್ಮಾನ ಧಾರ್ಮಿಕರಾದರೂ ಇಡೀ ರೂಪಕದ ಕತೆ, ಸಂಭಾಷಣೆ, ನಿರ್ದೇಶನ , ಹಿನ್ನೆಲೆ ಧ್ವನಿ ನೀಡಿದ್ದು, ಗಮನ ಸೆಳೆಯಿತು. ಚಿತ್ರಕಲಾ ಶಿಕ್ಷಕ ಶಿವಾನಂದ ನಿರ್ಮಿತ ಥರ್ಮಾಕೂಲ್ ನ ಭವ್ಯ ರಾಮಮಂದಿರ ಪ್ರತಿಕೃತಿ ಆಕರ್ಷಿಸಿತು.ಸಂಸ್ಥೆಯ ಅಧ್ಯಕ್ಷ ಶಾಂತಿಲಾಲ ಪಟೇಲ್, ಉಪಾಧ್ಯಕ್ಷ ಶಿವಾನಂದ ತಿಪ್ಪಾ, ಕಾರ್ಯದರ್ಶಿ ಗುರುರಾಜ ಅಂಬಿ, ನಿರ್ದೇಶಕರಾದ ರಮೇಶ ಮುಳವಾಡ, ಈಶ್ವರ ಮುರಗೋಡ, ರಾಜು ಘಟ್ಟೆಪ್ಪನವರ, ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ, ಪತ್ರಕರ್ತರಾದ ಶಿವಲಿಂಗ ಸಿದ್ನಾಳ, ನಾರನಗೌಡ ಉತ್ತಂಗಿ, ಮುಖ್ಯೋಪಾಧ್ಯಾಯ ಎಸ್.ಜಿ. ಕೌಜಲಗಿ ಮತ್ತು ಪಾಲಕರು, ಶಿಕ್ಷಕರು ಇದ್ದರು.