ಮೈತ್ರಿ ಕೂಟದ ಅಭ್ಯರ್ಥಿ ರಂಗನಾಥ್ ಗೆಲುವು ಶತಃಸಿದ್ಧ

| Published : Feb 12 2024, 01:32 AM IST

ಮೈತ್ರಿ ಕೂಟದ ಅಭ್ಯರ್ಥಿ ರಂಗನಾಥ್ ಗೆಲುವು ಶತಃಸಿದ್ಧ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಉಪಚುನಾವಣೆಯು ಮುಂದಿನ ಲೋಕಸಭಾ ಚುನಾವಣೆಗೂ ಪೂರ್ವ ಸಿದ್ಧತಾ ಪರೀಕ್ಷೆಯಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎ.ಪಿ.ರಂಗನಾಥ್ ಗೆಲುವು ಶತಸಿದ್ಧ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

ಚನ್ನಪಟ್ಟಣ: ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಉಪಚುನಾವಣೆಯು ಮುಂದಿನ ಲೋಕಸಭಾ ಚುನಾವಣೆಗೂ ಪೂರ್ವ ಸಿದ್ಧತಾ ಪರೀಕ್ಷೆಯಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎ.ಪಿ.ರಂಗನಾಥ್ ಗೆಲುವು ಶತಸಿದ್ಧ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಮುದುಗೆರೆ ಬಳಿಯ ಖಾಸಗಿ ರೆಸಾರ್ಟ್‌ನಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿ ಎ.ಪಿ.ರಂಗನಾಥ್ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೂ ಮುನ್ನವೇ ಶಿಕ್ಷಕರ ಕ್ಷೇತ್ರದ ಚುನಾವಣೆ ಎದುರಿಸುವ ಸವಾಲು ನಮ್ಮ ಮುಂದಿದೆ. ಈ ಬಾರಿಯ ಚುನಾವಣೆಯಲ್ಲಿ ರಂಗನಾಥ್ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.

ಮತ್ತೆ ಬಂದ ಪುಟ್ಟಣ್ಣ:

ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆ ವೇಳೆ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ಎಷ್ಟು ತಿಳಿ ಹೇಳಿದರೂ ಕೇಳದ ಪುಟ್ಟಣ್ಣ ತಮ್ಮ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನಸಭೆಗೆ ಸ್ಪರ್ಧಿಸಿ ಸೋಲು ಅನುಭವಿಸಿದರು. ಸಾರ್ವಜನಿಕರ ಜತೆ ಇರಬೇಕು ಎಂದು ಶಿಕ್ಷಕರ ಕ್ಷೇತ್ರ ತೊರೆದರು. ಇದೀಗ ಅವರು ಮತ್ತೆ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಲು ಬರುತ್ತಿದ್ದಾರೆ. ಈ ಕ್ಷೇತ್ರ ಬೇಡ ಎಂದು ತಿರಸ್ಕರಿಸಿ ಹೋದವರು ಮತ್ತೆ ಶಿಕ್ಷಕರ ಪ್ರತಿನಿಧಿಯಾಗಲು ಬಯಸಿರುವುದು ಎಷ್ಟು ಸರಿ ಎಂದು ಶಿಕ್ಷಕರೇ ತೀರ್ಮಾನಿಸಬೇಕು ಎಂದು ಹೇಳಿದರು.

ರಂಗನಾಥ್ ವಕೀಲರಾಗಿ ಉತ್ತಮ ಹೆಸರು ಗಳಿಸಿದ್ದಾರೆ. ಕಳೆದ ಬಾರಿಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎ.ಪಿ.ರಂಗನಾಥ್ ಕಡಿಮೆ ಅಂತರದಿಂದ ಪರಾಭವಗೊಂಡಿದ್ದರು. ಆದರೆ, ಈ ಬಾರಿ ಶಿಕ್ಷಕರ ಒಲವು ರಂಗನಾಥ್ ಪರ ಕಂಡುಬರುತ್ತಿದೆ. ರಂಗನಾಥ್ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಸೋತ ಮೇಲೆ ಪುಟ್ಟಣ್ಣರಿಗೆ ಶಿಕ್ಷಕರ ನೆನಪು:

ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎ.ಪಿ. ರಂಗನಾಥ್ ಮಾತನಾಡಿ, ಕಳೆದ ೨೦ ವರ್ಷಗಳಿಂದ ನಿರಂತರವಾಗಿ ಬೆಂಬಲಿಸಿದ ಶಿಕ್ಷಕರನ್ನು ತೊರೆದು ಪುಟ್ಟಣ್ಣ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದರು. ಶಿಕ್ಷಕರ ಸಹವಾಸ ಸಾಕು ಎಂದು ತಮ್ಮ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ವಿಧಾನಸಭೆಗೆ ಆಯ್ಕೆಯಾದರೂ ಇನ್ನು ಹೆಚ್ಚಿನ ಅಧಿಕಾರ ಸಿಗುತ್ತದೆ ಎಂದು ಶಿಕ್ಷಕರನ್ನು ನಡುದಾರಿಯಲ್ಲಿ ಬಿಟ್ಟು ಹೋದರು. ಆದರೆ, ವಿಧಾನಸಭೆ ಚುನಾವಣೆಯಲ್ಲಿ ತಿರಸ್ಕೃತಗೊಂಡ ಬಳಿಕ ಪುಟ್ಟಣ್ಣನವರಿಗೆ ಮತ್ತೆ ಶಿಕ್ಷಕರ ನೆನಪಾಗಿದೆ ಎಂದು ವಾಗ್ದಾಳಿ ನಡೆಸಿದರು.

ಆಂಧ್ರ ಶಿಕ್ಷಣ ಸಂಸ್ಥೆಗಳ ಪರ: ಕೊರೋನಾ ಸಂದರ್ಭದಲಿ ಸಂಕಷ್ಟದಲ್ಲಿದ್ದ ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರ ಸಮಸ್ಯೆ ಕೇಳದೆ ಪುಟ್ಟಣ್ಣ ಮನೆಯಲ್ಲಿದ್ದರು. ನಾವು ಬೀದಿಯಲಿ ನಿಂತು ಹೋರಾಟ ಮಾಡಿ ಶಿಕ್ಷಕರಿಗೆ ನೆರವಾಗುವ ಕೆಲಸ ಮಾಡಿದೆವು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ನಾವು ಶಿಕ್ಷಕರಿಗೆ ಒಪಿಎಸ್ ಕೊಡಿ ಎಂದು ಬೀದಿಯಲ್ಲಿ ನಿಂತು ಪ್ರತಿಭಟನೆ ಮಾಡಿದೆವು. ಆಗೆಲ್ಲ ನೆನಪಿಗೆ ಬಾರದ ಶಿಕ್ಷಕರು ಈಗ ಪುಟ್ಟಣ್ಣಗೆ ನೆನಪಾಗಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಪುಟ್ಟಣ್ಣ ಶಿಕ್ಷಕರ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಲಿಲ್ಲ. ಶಿಕ್ಷಕ ಸಂಕಷ್ಟ ಪರಿಹರಿಸಲು ಮುಂದಾಗಲಿಲ್ಲ. ತಮ್ಮ ಸ್ವಂತ ಕೆಲಸ ಮಾಡಿಕೊಳ್ಳಲು ಅವರು ಸರ್ಕಾರವನ್ನು ಉಪಯೋಗಿಸಿಕೊಂಡರು. ಆಂಧ್ರ ಸೇರಿದಂತೆ ಹೊರರಾಜ್ಯಗಳವರ ಶಿಕ್ಷಣ ಸಂಸ್ಥೆಗಳಿಗೆ ರಾಜ್ಯದಲ್ಲಿ ಹಣ ಮಾಡಲು ಅವಕಾಶ ನೀಡಿದ ಕಾರಣ ಅವರು ಬಿಜೆಪಿ ಬಿಟ್ಟು ಹೋದರು. ಇದೀಗ ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಆಂಧ್ರ ಸೇರಿದಂತೆ ಹೊರರಾಜ್ಯಗಳ ಉದ್ಯಮಿಗಳು ತೆರೆದಿರುವ ಶಿಕ್ಷಣ ಸಂಸ್ಥೆಗಳ ಹಿತ ಕಾಯಲು ಶಿಕ್ಷಕರ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುತ್ತಿದ್ದಾರೆ ಎಂದು ಆರೋಪಿಸಿದರು.

ಶಿಕ್ಷಕರ ಸಮಸ್ಯೆಗೆ ಸ್ಪಂದಿಸದ ಪುಟ್ಟಣ್ಣ:

ರಾಜ್ಯದ ನೂರಾರು ಖಾಸಗಿ ಶಿಕ್ಷಣ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಪುಟ್ಟಣ್ಣ ನೆರವಿಗೆ ಬರಲಿಲ್ಲ. ಆದರೆ, ಹೊರ ರಾಜ್ಯದ ಉದ್ಯಮಿಗಳಿಗೆ ಶಿಕ್ಷಣ ಸಂಸ್ಥೆ ತೆರಯಲು ಪರವಾನಗಿ ಕೊಡಿಸಲು ನೆರವು ನೀಡಿದರು. ೨೦ವರ್ಷ ಬೆಂಬಲಿಸಿದ ಶಿಕ್ಷಕರಿಗೆ ಮೋಸ ಮಾಡಿದರು. ಜೆಡಿಎಸ್‌ನಿಂದ ಸಾಕಷ್ಟು ಅಧಿಕಾರ ಪಡೆದ ಪುಟ್ಟಣ್ಣ ಜೆಡಿಎಸ್ ಬೆನ್ನಿಗೆ ಚೂರಿ ಹಾಕಿದರು. ಅವಕಾಶ ನೀಡಿದ ಬಿಜೆಪಿಗೂ ಮೋಸ ಮಾಡಿದರು. ಶಿಕ್ಷಕರ ಕೊಟ್ಟ ಅಧಿಕಾರ ತಿರಸ್ಕರಿಸಿ ಹೋದ ಪುಟ್ಟಣ್ಣ ಈ ಬಾರಿಯ ಚುನಾವಣೆಯಲ್ಲಿ ಶಿಕ್ಷಕರು ಬುದ್ಧಿ ಕಲಿಸಬೇಕು. ನಿಮ್ಮ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಈ ಬಾರಿ ನನಗೊಂದು ಅವಕಾಶ ನೀಡಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಪ್ರಕಾಶ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್.ಆನಂದಸ್ವಾಮಿ ಇತರರಿದ್ದರು.ಬಾಕ್ಸ್‌ ..................

ಲೋಕಸಭಾ ಚುನಾವಣೆಗೆ ದಿಕ್ಸೂಚಿ: ಸಿಪಿವೈ

ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಮುಂಬರುವ ಲೋಕಸಭೆ ಸೇರಿದಂತೆ ಎಲ್ಲಾ ಚುನಾವಣೆಗಳಿಗೂ ದಿಕ್ಸೂಚಿಯಾಗಿದ್ದು, ರಂಗನಾಥ್ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಈಗಾಗಲೇ ನಾವೆಲ್ಲ ಜಿಲ್ಲಾದ್ಯಂತ ಶ್ರಮಿಸುತ್ತಿದ್ದೇವೆ. ಈ ಬಾರಿಯ ಚುನಾವಣೆಯಲ್ಲಿ ರಂಗನಾಥ್ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆ ತಯಾರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಪಕ್ಷದ ಹಂತದಲ್ಲಿ ಮುಖಂಡರ ಸಭೆಗಳನ್ನು ಮಾಡುತ್ತಿದ್ದೇವೆ. ಪಕ್ಷದ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಾನು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಒಗ್ಗೂಡಿ ಜಿಲ್ಲಾದ್ಯಂತ ಪ್ರವಾಸ ಮಾಡಬೇಕು ಎಂದು ನಿರ್ಧರಿಸಿದ್ದೇವೆ. ಮುಂದಿನ ದಿನಗಳಲ್ಲಿ ಈ ಕುರಿತು ರೂಪುರೇಷಗಳು ತಯಾರಿಸಲಾಗುವುದು ಎಂದು ತಿಳಿಸಿದರು.

ಟಿಕೆಟ್ ಹಂಚಿಕೆ ಕುರಿತಂತೆ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಯಾರೇ ನಿಂತರೂ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ಈ ಬಾರಿ ಎನ್‌ಡಿಎ ಅಭ್ಯರ್ಥಿ ಗೆಲ್ಲಲಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ತಾವು ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿದ ಸಿಪಿವೈ, ಅದನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ಆ ಬಗ್ಗೆ ತಮಗೇನು ಗೊತ್ತಿಲ್ಲ. ಅಂತೆಯೇ ಮಂಡ್ಯದ ವಿಚಾರವಾಗಿಯೂ ಸಹ ನನಗೇನು ಮಾಹಿತಿ ಇಲ್ಲ ಎಂದು ಹೇಳಿದರು. ಪೊಟೋ೧೧ಸಿಪಿಟಿ೧:

ಚನ್ನಪಟ್ಟಣ ತಾಲೂಕಿನ ಮುದುಗೆರೆ ಬಳಿಯ ಖಾಸಗಿ ರೆಸಾರ್ಟ್‌ನಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮೈತ್ರಿ ಕೂಟದ ಅಭ್ಯರ್ಥಿ ಎ.ಪಿ.ರಂಗನಾಥ್ ಪರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಮಾತನಾಡಿದರು.