ಮತ್ತೊಮ್ಮೆ ಮೋದಿ ನಾಯಕತ್ವದ ಅಗತ್ಯಕ್ಕಾಗಿ ಮೈತ್ರಿ : ಎಂ.ಕೆ.ಪ್ರಾಣೇಶ್‌

| Published : Apr 03 2024, 01:40 AM IST / Updated: Apr 03 2024, 08:28 AM IST

ಸಾರಾಂಶ

ಕಡೂರು ತಾಲೂಕಿನ‌ ಮಲ್ಲೇಶ್ವರದ ಬೆಂಕಿ‌ ಲಕ್ಷ್ಮಯ್ಯ ಸಭಾಂಗಣದಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಜಂಟಿ ಸಮನ್ವಯ ಸಭೆ ನಡೆಯಿತು.

 ಕಡೂರು:  ಈ ನಾಡಿನ ಅನ್ನದಾತ ರೈತರ ಪರ ಹೋರಾಟಗಾರರಾದ ಮಾಜಿ ಪ್ರಧಾನಿ ದೇವೇಗೌಡರು ಚಿಂತನೆ ನಡೆಸಿ, ಈ ದೇಶದ ರಕ್ಷಣೆಗೆ ಹಾಗು ಜನ ಸಾಮಾನ್ಯರ ಅಭಿವೃದ್ಧಿಗೆ ಮತ್ತೊಮ್ಮೆ ಮೋದಿಯವರ ನಾಯಕತ್ವದ ಅಗತ್ಯವಿದೆ ಎಂಬ ನಿಟ್ಟಿನಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮೂಲಕ ಚುನಾವಣೆ ಎದುರಿಸಲಾಗುತ್ತಿದೆ ಎಂದು ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು. ಅವರು ಮಂಗಳವಾರ ತಾಲೂಕಿನ‌ ಮಲ್ಲೇಶ್ವರದ ಬೆಂಕಿ‌ ಲಕ್ಷ್ಮಯ್ಯ ಸಭಾಂಗಣದಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಜಂಟಿ ಸಮನ್ವಯ ಸಭೆ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಲೆತಗ್ಗಿಸುವಂತಹ ಕೆಲಸ ಮಾಡದೆ ಉತ್ತಮ ಆಡಳಿತ ನೀಡುತ್ತೇನೆ, ಭಾರತವನ್ನು ಪ್ರಪಂಚದಲ್ಲೇ 5 ನೇ ಅಭಿವೃದ್ಧಿಶೀಲ ಹಾಗು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಲು ಮತ್ತೊಮ್ಮೆ ನನಗೆ ಬೆಂಬಲಿಸಿ ಎನ್ನುವ ಮೋದಿಯವರ ಕರೆಯಂತೆ ಪಕ್ಷಕ್ಕಿಂತ ದೇಶದ ಹಿತವೇ ಮುಖ್ಯ ಎಂಬ ದೃಢ ನಿರ್ಧಾರದಿಂದಲೇ ಎನ್‌ಡಿಎ ಮೈತ್ರಿಕೂಟದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷ ಒಂದಾಗಿರುವುದು ನಮ್ಮ ರಾಜ್ಯದ ಅಭಿವೃದ್ಧಿಗೆ ಸಹಕಾರಿ ಆಗಲಿದೆ ಎಂದರು.

ವಿಶ್ವವೇ ತಿರುಗಿ ನೋಡುವ ಆಡಳಿತ ನೀಡುತ್ತಿರುವ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಭಾರತ ದೇಶ ವಿಶ್ವನಾಯಕ ಸ್ಥಾನಕ್ಕೇರುವುದರಲ್ಲಿ ಯಾವ ಅನುಮಾನವಿಲ್ಲ. ಹಾಗಾಗೀ ಹಾಸನ ಲೋಕಸಭಾ ಕ್ಷೇತ್ರದ ಕಡೂರು ಕ್ಷೇತ್ರದಲ್ಲಿ 75 ಸಾವಿರಕ್ಕೂ ಹೆಚ್ಚಿನ ಮತ ಕೊಡಿಸಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣನವರ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದರು.

ಪ್ರಾಸ್ತಾವಿಕವಾಗಿ ಜೆಡಿಎಸ್‌ನ ಮಾಜಿ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ಮೋದಿಯವರನ್ನು ಮತ್ತೊಮ್ಮೆ ಈ ದೇಶದ ಪ್ರಧಾನಿ ಮಾಡುವ ಬಹು ದೊಡ್ಡ ಗುರಿ ನಮ್ಮ ಮುಂದಿರುವುದರಿಂದ ಇಂತಹ ಮೈತ್ರಿಗಳು ಅ‍‍ವಶ್ಯಕವಾಗಿವೆ. ಇದರಲ್ಲಿ ಸಣ್ಣ ಪುಟ್ಟ ವ್ಯತ್ಯಾಸ ಬಂದರೂ ಹೊಂದಿಕೊಂಡು ಎರಡೂ ಪಕ್ಷದ ಕಾರ್ಯಕರ್ತರು ಒಟ್ಟಾಗಿ ಶ್ರಮಿಸಿ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಗೆಲ್ಲಿಸಬೇಕು. ಕಡೂರಿಗೂ ದೇವೇಗೌಡರಿಗೂ ಅವಿನಾಭಾವ ಸಂಬಂಧವಿದ್ದು ಮೋದಿಯವರ ಕೈ ಬಲಪಡಿಸಲು ಎಲ್ಲರೂ ಒಗ್ಗಟ್ಟಾಗಿ ದುಡಿಯೋಣ ಎಂದರು.

ಬಿಜೆಪಿಯ ಮಾಜಿ ಶಾಸಕ ಬೆಳ್ಳಿಪ್ರಕಾಶ್ ಮಾತನಾಡಿ, ಇಂತಹ ಸಂದರ್ಭದಲ್ಲಿ ನಾನು ಎನ್ನುವುದಕ್ಕಿಂತ ನಾವು ಎಂಬ ನಡವಳಿಕೆ ಅಳ‍ವಡಿಸಿಕೊಂಡು ಹೋರಾಟ ಮಾಡಬೇಕು. ಬೇರೆಯವರ ಟೀಕೆಗೆ ನಾವು ಭಾವನಾತ್ಮಕವಾಗಿ ಉತ್ತರಿಸುವ ಅಗತ್ಯವಿಲ್ಲ. ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿ ಮಾಡುವುದು ನಮ್ಮ ಗುರಿ. ವ್ಯಕ್ತಿಗಿಂತ ಪಕ್ಷ ಮುಖ್ಯ ಪಕ್ಷಕ್ಕಿಂತ ನಮಗೆ ರಾಷ್ಟ್ರದ ಹಿತವೇ ಮುಖ್ಯ ಎಂಬ ಧ್ಯೇಯದೊಂದಿಗೆ ಬಿಜೆಪಿ-ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಇಲ್ಲಿ ಎರಡೂ ಪಕ್ಷಗಳು ಸಮಾನವಾಗಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣನವರ ಪರವಾಗಿ ಶ್ರಮಿಸಿ ಗೆಲ್ಲಿಸಬೇಕು. ನಾವು ನೀಡುವ ಪ್ರತಿ ಮತವೂ ರಾಷ್ಟ್ರ ರಕ್ಷಣೆಗೆ ಎಂಬ ಚಿಂತನೆ ಎಲ್ಲರಲ್ಲೂ ಮೂಡಬೇಕು. ಅತ್ಯಂತ ಪ್ರಾಮಾಣಿಕವಾಗಿ ಪ್ರಜ್ವಲ್ ಅವರ ಗೆಲುವಿಗೆ ಕಾರ್ಯಕರ್ತರ ಜೊತೆಗೂಡಿ ಶ್ರಮಿಸುತ್ತೇನೆ ಎಂದರು.

ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ವಿರೋಧಿ ಟೀಕೆಗೆ ಉತ್ತರಿಸುವ ಅವಶ್ಯಕತೆಯಿಲ್ಲ. ಕೊಚ್ಚೆಗೆ ಕಲ್ಲು‌ ಹಾಕಲು ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷದ ನಿಲುವು ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ನಿಲುವನ್ನು ಗಮನಿಸಬೇಕು. ಕಾಂಗ್ರೆಸ್ ಪಕ್ಷವು ರಾಷ್ಟ್ರ ಒಡೆಯುವ ಅಂಚಿನಲ್ಲಿದೆ. ಆದರೆ ಮೋದಿಯವರು ರಾಷ್ಟ್ರದ ಏಕತೆ ಮತ್ತು ಸಮಗ್ರತೆ ಚಿಂತನೆಯಲ್ಲಿದ್ದಾರೆ. ದೇಶ ಮತ್ತು ರಾಜ್ಯದ ಹಿತದೃಷ್ಠಿಯಿಂದ ದೇವೇಗೌಡರು ನರೇಂದ್ರ ಮೋದಿಯವರನ್ನು ಬೆಂಬಲಿಸಿದ್ದಾರೆ. ಸಂಸದನಾಗಿ ಆಯ್ಕೆಯಾದಲ್ಲಿ ನರೇಂದ್ರ ಮೋದಿಯವರ ಕೈ ಬಲಪಡಿಸುವ ಮೂಲಕ ಕಡೂರು ಕ್ಷೇತ್ರದ ಅಭಿವೃದ್ಧಿಗೆ ಕೈ ಜೋಡಿಸುತ್ತೇನೆ ಎಂದರು.

ಸಭೆಯಲ್ಲಿ ಬೇಲೂರು ಶಾಸಕ ಹುಲ್ಲಹಳ್ಳಿ ಸುರೇಶ್, ತಾಲೂಕು ಜೆಡಿಎಸ್‌ ಅಧ್ಯಕ್ಷ ಕೆ.ಎಂ.ಮಹೇಶ್ವರಪ್ಪ, ಬಿಜೆಪಿ ಮಂಡಲಾಧ್ಯಕ್ಷ ಬಿ.ಪಿ.ದೇವಾನಂದ್, ಬಿಜೆಪಿ ಜಿಲ್ಲಾ ವಕ್ತಾರ ಕೆ.ಆರ್.ಮಹೇಶ್ ಒಡೆಯರ್, ಜಿಗಣೇಹಳ್ಳಿ ನೀಲಕಂಠಪ್ಪ, ಮುಖಂಡರಾದ ಸೋನಾಲ್ ಧರ್ಮೇಗೌಡ, ಬಿ.ಟಿ.ಗಂಗಾಧರನಾಯ್ಕ, ಚೇತನ್ ಕೆಂಪರಾಜ್, ಕೆ.ಎಂ.ವಿನಾಯಕ, ಶೂದ್ರಶ್ರೀನಿವಾಸ್, ಅಡಕೆ ಚಂದ್ರು, ಸವಿತಾ ರಮೇಶ್, ಟಿ.ಆರ್.ಲಕ್ಕಪ್ಪ, ಕೆ.ಎನ್.ಬೊಮ್ಮಣ್ಣ, ಬಿ.ಪಿ.ನಾಗರಾಜ್, ಸುನೀತಾ ಜಗದೀಶ್ ಮತ್ತಿತರರು ಇದ್ದರು.

ಬಹಳ ದಿನಗಳ ಬಳಿಕ ಕಳೆದ ಕಡೂರು ವಿಧಾನಸಭಾ ಚುನಾವಣೆ ರಾಜಕೀಯ ಕಾಳಗದಲ್ಲಿ ಬಿರುಸಿನ ಹೋರಾಟ ನಡೆಸಿದ್ದ ಮಾಜಿ ಶಾಸಕರಾದ ವೈ.ಎಸ್.ವಿ ದತ್ತ ಹಾಗು ಬೆಳ್ಳಿಪ್ರಕಾಶ್ ಇಬ್ಬರೂ ಸಭೆಯಲ್ಲಿ ಪ್ರಥಮ ಭಾರಿಗೆ ಅಕ್ಕಪಕ್ಕದಲ್ಲಿ ಕುಳಿತು ವೇದಿಕೆ ಹಂಚಿಕೊಂಡರು. ಕೋಮುವಾದಿ ಪಕ್ಷ ಎಂದು ಹೇಳುತ್ತಿದ್ದ ದತ್ತ ಮತ್ತು ಬೆಳ್ಳಿಪ್ರಕಾಶ್ ಇಬ್ಬರೂ ಬಿಜೆಪಿ ಮತ್ತು ಜೆಡಿಎಸ್ ಶಾಲು ಧರಿಸಿ ಎರಡೂ ಪಕ್ಷಗಳ ಮುಖಂಡರ, ಕಾರ್ಯಕರ್ತರ ಗಮನ ಸೆಳೆದರು. ಮಾತಿನ ಮಧ್ಯೆ ದತ್ತ ಅವರು ಬೆಳ್ಳಿ ನನ್ನ ಶಿಷ್ಯ ಆತನ ನೇತೃತ್ವದಲ್ಲಿಯೇ ಕಾರ್ಯಕರ್ತರು ಪ್ರಜ್ವಲ್ ಅವರನ್ನು ಗೆಲ್ಲಿಸಿಕೊಂಡು ಬರಬೇಕು ಎಂದರು. ಬೆಳ್ಳಿ‌ ಪ್ರಕಾಶ್ ಕೂಡ ತಮ್ಮ ಭಾಷಣದಲ್ಲಿ ವೈ.ಎಸ್ ವಿ.ದತ್ತರವರು ನನ್ನ ಗುರುಗಳು ಎಂದು ಹೇಳು‍ವ ಮೂಲಕ ಒಗ್ಗಟ್ಟು ಪ್ರದರ್ಶಿಸಿದಾಗ ಕಾರ್ಯಕರ್ತರು ಜೋರಾಗಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.