ಸಾರಾಂಶ
ಕುಮಾರಸ್ವಾಮಿಯವರು ಭಾನುವಾರ ತಾಲೂಕಿನ ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಮಹಾ ಸ್ವಾಮೀಜಿಗಳನ್ನು ಭೇಟಿಯಾಗಿ, ಆಶೀರ್ವಾದ ಪಡೆದು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಶಿರಾ
ಕಳಸಾ ಬಂಡೂರಿ ನೀರಾವರಿ ಯೋಜನೆ ಸೇರಿ ಕಾವೇರಿ ನೀರಿನ ವಿಚಾರದಲ್ಲೂ ರಾಜ್ಯಕ್ಕೆ ಅನ್ಯಾಯ ಆಗುತ್ತಲೇ ಬಂದಿದೆ, ಅನ್ನದಾತ ಮತ್ತು ಜನರ ಹಿತ ಕಾಯುವ ಇಂತಹ ನೀರಾವರಿ ಯೋಜನೆಗಳಿಗೆ ಶಾಶ್ವತ ಪರಿಹಾರ ಸಿಗಬೇಕು, ಇದಕ್ಕೆ ಗಟ್ಟಿ ಧ್ವನಿಯಾಗಿ ಕೆಲಸ ಮಾಡುವ ಸದುದ್ದೇಶದಿಂದ ಮೈತ್ರಿ ಅನಿವಾರ್ಯ ಎಂದು ಮಾಜಿ ಮುಖ್ಯಮಂತ್ರಿ, ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.ಅವರು ಭಾನುವಾರ ತಾಲೂಕಿನ ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಮಹಾ ಸ್ವಾಮೀಜಿಗಳನ್ನು ಭೇಟಿಯಾಗಿ, ಆಶೀರ್ವಾದ ಪಡೆದು ಮಾತನಾಡಿದರು. ನಾಡು - ನುಡಿ, ನೆಲ-ಜಲದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ, ನಾಡಿನ ಅಸ್ಮಿತೆ ವಿಷಯದಲ್ಲೂ ರಾಜ್ಯದ ಜನರ ಹಿತಾಶಕ್ತಿ ಮುಖ್ಯ. ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುವ ಅವಶ್ಯಕತೆ ಇದ್ದು ಇದಕ್ಕೆ ಶಕ್ತಿ ಬೇಕಾಗಿದೆ. ಇಂತಹ ಶಕ್ತಿ ಪಡೆಯಲು, ಜನಸಾಮಾನ್ಯರ ಸಮಸ್ಯೆಗಳಿಗೆ ಗಟ್ಟಿ ಧ್ವನಿಯಾಗಲು, ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಬಿಜೆಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದೆ. ರಾಜ್ಯದ ಜನರ ಮೇಲೆ ವಿಶ್ವಾಸವಿದ್ದು, ಈ ಬಾರಿ ಮೈತ್ರಿಕೂಟ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದರು.
ಶ್ರೀ ನಂಜಾವಧೂತ ಮಹಾ ಸ್ವಾಮೀಜಿ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಎಚ್ .ಡಿ. ಕುಮಾರಸ್ವಾಮಿ ರವರಿಗೆ ಆಶೀರ್ವಚನ ನೀಡಿ ಮಾತನಾಡಿ, ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆ ಕಿವಿಮಾತು ಹೇಳಿದರು.ಮುಖಂಡರಾದ ಜವರಾಯಗೌಡ, ನೇಗಿಲ ಯೋಗಿ ಟ್ರಸ್ಟ್ ಅಧ್ಯಕ್ಷ ಜಯರಾಮಯ್ಯ, ಮುನಿರತ್ನಪ್ಪ, ಚನ್ನಕೇಶವ, ಹನುಮಗೌಡ, ಅಂಬರೀಶ್ ಸೇರಿ ಹಲವು ಮುಖಂಡರು ಹಾಜರಿದ್ದರು.