ಮಳೆ ನಡುವೆ ಮೈತ್ರಿ ಮೈಸೂರು ಚಲೋ ಉತ್ಸಾಹ

| Published : Aug 04 2024, 01:15 AM IST

ಸಾರಾಂಶ

ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ಹಮ್ಮಿಕೊಂಡಿರುವ ಎಂಟು ದಿನಗಳ ‘ಮೈಸೂರು ಚಲೋ’ ಪಾದಯಾತ್ರೆಯ ಮೊದಲ ದಿನವಾದ ಶನಿವಾರ ವರುಣನ ಸಿಂಚನದ ನಡುವೆಯೂ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ನ ಮುಖಂಡರು ಹಾಗೂ ಕಾರ್ಯಕರ್ತರು ಉತ್ಸಾಹದಿಂದ ಹೆಜ್ಜೆ ಹಾಕಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ಹಮ್ಮಿಕೊಂಡಿರುವ ಎಂಟು ದಿನಗಳ ‘ಮೈಸೂರು ಚಲೋ’ ಪಾದಯಾತ್ರೆಯ ಮೊದಲ ದಿನವಾದ ಶನಿವಾರ ವರುಣನ ಸಿಂಚನದ ನಡುವೆಯೂ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ನ ಮುಖಂಡರು ಹಾಗೂ ಕಾರ್ಯಕರ್ತರು ಉತ್ಸಾಹದಿಂದ ಹೆಜ್ಜೆ ಹಾಕಿದರು.

ಪಾದಯಾತ್ರೆಗೆ ಚಾಲನೆ ನೀಡುವ ಮುನ್ನ ದೋಸ್ತಿ ಪಕ್ಷಗಳ ಮುಖಂಡರು ಕೆಂಗೇರಿಯ ಕೆಂಪಮ್ಮ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ಮುಂಜಾನೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೈಸೂರಿಗೆ ತೆರಳಿ ಐತಿಹಾಸಿಕ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಹೀಗಾಗಿ, ದೇವರ ಆಶೀರ್ವಾದ ಪಾದಯಾತ್ರೆಗೆ ಮತ್ತಷ್ಟು ಶಕ್ತಿ ನೀಡಿದಂತಾಗಿತ್ತು.

ಕೆಂಗೇರಿಯ ಜೆ.ಕೆ.ಗ್ರೌಂಡ್‌ ಅರೆನಾ ಆವರಣದಲ್ಲಿ ನಡೆದ ಪಾದಯಾತ್ರೆ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರು ವಿಶೇಷವಾಗಿ ಸಂಯೋಜಿಸಿದ್ದ ಮೈಸೂರು ಚಲೋ ಪಾದಯಾತ್ರೆ ಗೀತೆ ಲೋಕಾರ್ಪಣೆಗೊಳಿಸಿದರು. ಈ ಗೀತೆಯೇ ಪಾದಯಾತ್ರೆಯುದ್ದಕ್ಕೂ ಅನುರಣಿಸುತ್ತಿತ್ತು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ರಾಜ್ಯ ಬಿಜೆಪಿ ಉಸ್ತುವಾರಿ ಡಾ। ರಾಧಾ ಮೋಹನ್‌ದಾಸ್‌ ಅಗರ್‌ವಾಲ್‌ ಮೊದಲಾದ ನಾಯಕರು ನಗಾರಿ ಬಾರಿಸುವ ಮುಖಾಂತರ ಮೈಸೂರು ಚಲೋ ಪಾದಯಾತ್ರೆಗೆ ಚಾಲನೆ ಭರ್ಜರಿ ಚಾಲನೆ ನೀಡಿದರು. ಈ ವೇಳೆ ಕಲಾವಿದರು ಕಹಳೆ ಊದಿದರು. ನಗಾರಿ ಮತ್ತು ಕಹಳೆ ಸದ್ದಿಗೆ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರಲ್ಲಿ ರಣೋತ್ಸಾಹ ಹೆಚ್ಚಾಗಿ ಘೋಷಣೆ ಕೂಗಿದರು.

ಬೆಳಗ್ಗೆ 10 ಗಂಟೆಗೆ ವಿಳಂಬವಾಗಿ ಆರಂಭಗೊಂಡ ವೇದಿಕೆ ಕಾರ್ಯಕ್ರಮ ಮಧ್ಯಾಹ್ನ 12.20ರ ವರೆಗೂ ಜರುಗಿತು. ಬಳಿಕ ಮುಖಂಡರು ಹಾಗೂ ಕಾರ್ಯಕರ್ತರು ಮೈಸೂರಿನತ್ತ ಹೆಜ್ಜೆ ಹಾಕಿದರು.

ಕಾರ್ಯಕರ್ತರಲ್ಲಿ ರಣೋತ್ಸಾಹ

ಪಾದಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಉಪನಾಯಕ ಅರವಿಂದ ಬೆಲ್ಲದ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ಬಾಬು, ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಡಾ। ಸಿ.ಎನ್‌.ಅಶ್ವತ್ಥನಾರಾಯಣ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದ ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರು ರಣೋತ್ಸಾಹದಲ್ಲಿ ಹೆಜ್ಜೆ ಹಾಕಿದರು. ಆರಂಭದಲ್ಲಿ ಯಡಿಯೂರಪ್ಪ ಮತ್ತು ಸಂಸದ ಗೋವಿಂದ ಕಾರಜೋಳ ಅವರು ಸ್ವಲ್ಪ ದೂರ ಹೆಜ್ಜೆ ಹಾಕುವ ಮೂಲಕ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.ಘೋಷಣೆ ಕೂಗಿ ನೃತ್ಯ ಮಾಡಿದ ಕಾರ್ಯಕರ್ತರು

ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಉಭಯ ಪಕ್ಷಗಳ ಕಾರ್ಯಕರ್ತರು ಮಾರ್ಗದುದ್ದಕ್ಕೂ ತಮ್ಮ ನಾಯಕರಿಗೆ ಜಯ ಘೋಷಣೆ ಕೂಗಿದರು. ತಮಟೆ, ಬ್ಯಾಂಡ್‌ ಶಬ್ಧ, ಪಾದಯಾತ್ರೆ ಗೀತೆಗೆ ಕುಣಿದು ಕುಪ್ಪಳಿಸಿದರು. ಬಿಜೆಪಿ-ಜೆಡಿಎಸ್‌ ಬಾವುಟಗಳನ್ನು ಗಾಳಿಯಲ್ಲಿ ತೇಲಾಡಿಸಿ ಸಂಭ್ರಮಿಸಿದರು. ಸುರಿಯುವ ಮಳೆಯನ್ನೂ ಲೆಕ್ಕಿಸದೆ ಅತ್ಯುತ್ಸಾಹದಲ್ಲಿ ಪಾದಯಾತ್ರೆಯಲ್ಲಿ ಸಾಗಿದರು. ಈ ವೇಳೆ ಬಿ.ವೈ.ವಿಜಯೇಂದ್ರ ಸ್ವಲ ದೂರು ಓಡುವ ಮುಖಾಂತರ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದರು.ಕಿ.ಮೀ.ನಷ್ಟು ಉದ್ದಕ್ಕೆ ಸಂಚಾರ ದಟ್ಟಣೆ

ಬಿಜೆಪಿ-ಜೆಡಿಎಸ್‌ ಮೈಸೂರು ಚಲೋ ಪಾದಯಾತ್ರೆಯಿಂದ ಬೆಂಗಳೂರು-ಮೈಸೂರು ರಸ್ತೆ ಕೆಂಗೇರಿ, ಚಲಘಟ್ಟ, ನೈಸ್‌ ರಸ್ತೆ ಜಂಕ್ಷನ್‌ಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿ ಸವಾರರು ಪರದಾಡಿದರು.

ಎಕ್ಸ್‌ಪ್ರೆಸ್‌ ವೇ, ಸರ್ವಿಸ್‌ ರಸ್ತೆಯಲ್ಲಿ ಮೈಸೂರಿನಿಂದ ಬೆಂಗಳೂರು ಕಡೆಗೆ ಬಂದ ವಾಹನಗಳು ಹಾಗೂ ಬೆಂಗಳೂರು ಕಡೆಯಿಂದ ರಾಮನಗರ, ಮಂಡ್ಯ, ಬೆಂಗಳೂರು ಕಡೆಗೆ ತೆರಳುತ್ತಿದ್ದ ವಾಹನಗಳು ಸುಮಾರು ಒಂದು ತಾಸು ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದವು. ದ್ವಿಮುಖ ರಸ್ತೆ ರಸ್ತೆಯಲ್ಲಿ ಸುಮಾರು ಎರಡು ಕಿ.ಮೀ.ಗಳಷ್ಟು ಉದ್ದಕ್ಕೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಇದೇ ಸಮಯಕ್ಕೆ ಮಳೆ ಸುರಿದ ಪರಿಣಾಮ ದಟ್ಟಣೆಯಲ್ಲಿ ಸಿಲುಕಿದ್ದ ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲೇ ನಿಲ್ಲುವ ಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಚಲಘಟ್ಟದಿಂದ ಮುಂದಕ್ಕೆ ಸರ್ವಿಸ್‌ ರಸ್ತೆಯಲ್ಲಿ ಪಾದಯಾತ್ರೆ ಸಾಗಿದ ಪರಿಣಾಮ ಸರ್ವಿಸ್‌ ರಸ್ತೆ ಬಳಸುವ ವಾಹನ ಸವಾರರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ನಲುಗಿದರು.ಸಂಚಾರ ನಿಯಂತ್ರಣಕ್ಕೆ ಪೊಲೀಸರು ಹೈರಾಣ

ಬೆಂಗಳೂರು-ಮೈಸೂರು ರಸ್ತೆಯಲ್ಲಿ ಪಾದಯಾತ್ರೆ ಹಿನ್ನೆಲೆಯಲ್ಲಿ ಉಂಟಾದ ವಾಹನ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಹೈರಾಣಾದರು. ಏಕಕಾಲಕ್ಕೆ ಭಾರೀ ಸಂಖ್ಯೆಯ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಸಾಗಿದ ಪರಿಣಾಮ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ವಾಹನ ಸಂಚಾರಕ್ಕೆ ಪರ್ಯಾಯ ರಸ್ತೆಗಳು ಇಲ್ಲದೆ ಪಾದಯಾತ್ರೆ ಕುಂಬಳಗೋಡು ಪ್ರವೇಶಿಸುವವರೆಗೂ ಸಂಚಾರ ದಟ್ಟಣೆ ಉಂಟಾಗಿತ್ತು. ಈ ವೇಳೆ ಸಂಚಾರ ಪೊಲೀಸರು ಹಾಗೂ ನಾಗರಿಕ ಪೊಲೀಸರು ಕಾರ್ಯಕರ್ತರನ್ನು ಒಂದು ಕಡೆಗೆ ಚದುರಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಲು ಸುಸ್ತು ಹೊಡೆದರು.ಭೋಜನ ವಿರಾಮ ಇಲ್ಲದೆ ಯಾತ್ರೆ

ಮಧ್ಯಾಹ್ನ 12.30ಕ್ಕೆ ಕೆಂಗೇರಿಯ ಜೆ.ಕೆ.ಗ್ರೌಂಡ್ ಅರೆನಾದ ಆವರಣದಿಂದ ಆರಂಭಗೊಂಡ ಮೊದಲ ದಿನದ ಪಾದಯಾತ್ರೆ 16 ಕಿ.ಮೀ. ಸಾಗಿ ಸಂಜೆ 7 ಗಂಟೆ ಹೊತ್ತಿಗೆ ಬಿಡದಿಯಲ್ಲಿ ಅಂತ್ಯವಾಯಿತು. ನಿಗದಿತ ಸಮಯಕ್ಕಿಂತ ತಡವಾಗಿ ಪಾದಯಾತ್ರೆ ಆರಂಭವಾದರೂ ಭೋಜನ ವಿರಾಮ ಪಡೆಯದೇ ಕಾರ್ಯಕರ್ತರು ಹುರುಪಿನಲ್ಲಿ ಪಾಲ್ಗೊಂಡಿದ್ದರು.

ಪಾದಯಾತ್ರೆ ಮಾರ್ಗ ಮಧ್ಯೆ ಕಾರ್ಯಕರ್ತರು ಟೀ ಸೇವಿಸಿ, ಬಿಸ್ಕೆಟ್‌, ಟೀ, ಸೌತೆಕಾಯಿ, ಕಡಲೆಕಾಯಿ ತಿಂದರು. ರಾತ್ರಿ ಬಿಡದಿ ವೆಂಕಟೇಶ್ವರ ದೇವಸ್ಥಾನದ ಬಳಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಅನ್ನ, ರಾಗಿಮುದ್ದೆ, ಸಾಂಬಾರು, ಮೈಸೂರು ಪಾಕ್‌ ಸವಿಸಿದರು. ಬಳಿಕ ಎರಡನೇ ದಿನದ ಪಾದಯಾತ್ರೆಯಲ್ಲಿ ಮುಂದುವರೆಯುವ ಕಾರ್ಯಕರ್ತಯರಿಗೆ ಮಂಜುನಾಥ ಕನ್ವೆನ್‌ಷನ್‌ ಹಾಲ್‌ನಲ್ಲಿ ರಾತ್ರಿ ಮಲಗಲು ವ್ಯವಸ್ಥೆ ಮಾಡಲಾಗಿತ್ತು.ಕೈಕೈ ಹಿಡಿದು ಹಜ್ಜೆ ಹಾಕಿದ ರೆಡ್ಡಿ-ರಾಮುಲು

ಮೈಸೂರು ಚಲೋ ಪಾದಯಾತ್ರೆಯಲ್ಲಿ ಮಾಜಿ ಸಚಿವರಾದ ಜನಾರ್ದನರೆಡ್ಡಿ ಮತ್ತು ಶ್ರೀರಾಮುಲು ಕೈ ಕೈ ಹಿಡಿದು ಹೆಜ್ಜೆ ಹಾಕಿದರು. ಆತ್ಮೀಯ ಸ್ನೇಹಿಯರಾದ ಇಬ್ಬರೂ ಉತ್ಸಾಹದಿಂದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಈ ಹಿಂದೆ ಸಿದ್ದರಾಮಯ್ಯ ಅವರು ಇದೇ ಜನಾರ್ದನ ರೆಡ್ಡಿ ವಿರುದ್ಧ ಬೆಂಗಳೂರು-ಬಳ್ಳಾರಿಗೆ ಪಾದಯಾತ್ರೆ ನಡೆಸಿದ್ದರು. ಇದೀಗ ಅದೇ ಸಿದ್ದರಾಮಯ್ಯ ವಿರುದ್ಧ ಬೆಂಗಳೂರು-ಮೈಸೂರು ಪಾದಯಾತ್ರೆಯಲ್ಲಿ ಜನಾರ್ದನರೆಡ್ಡಿ ಪಾಲ್ಗೊಂಡಿರುವುದು ಗಮನಾರ್ಹ ಸಂಗತಿಯಾಗಿದೆ.ನಾಯಕರ ಜತೆ ಸೆಲ್ಫಿ

ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರು, ಮುಖಂಡರು ತಮ್ಮ ನೆಚ್ಚಿನ ನಾಯಕರ ಜತೆಗೆ ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಬಿ.ಎಸ್. ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಆರ್‌.ಅಶೋಕ್‌, ನಿಖಿಲ್‌ ಕುಮಾರಸ್ವಾಮಿ, ಶ್ರೀರಾಮುಲು, ಜನಾರ್ದನರೆಡ್ಡಿ ಸೇರಿದಂತೆ ಉಭಯ ಪಕ್ಷಗಳ ನಾಯಕರ ಜತೆಗೆ ಸೆಲ್ಫಿ, ಪೋಟೋ ತೆಗೆದುಕೊಂಡು ಸಂತಸಪಟ್ಟರು. ಅದರಲ್ಲೂ ಮಹಿಳಾ ಕಾರ್ಯಕರ್ತರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅತ್ಯುತ್ಸಾಹ ತೋರುತ್ತಿದ್ದ ದೃಶ್ಯಗಳು ಪಾದಯಾತ್ರೆ ವೇಳೆ ಕಂಡು ಬಂದಿತು.