ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಆದ್ಯತೆ ನೀಡುವುದಾಗಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಆದ್ಯತೆ ನೀಡುವುದಾಗಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ನಗರದ ಸಮೀಪ ಬೂವನಹಳ್ಳಿ, ವಿಮಾನ ನಿಲ್ದಾಣದ ಬಳಿ ಜನವರಿ 24ರಂದು ನಡೆಯುವ ಜೆಡಿಎಸ್ ಬೃಹತ್ ಸಮಾವೇಶದ ಪರಿಶೀಲನೆ ನಡೆಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಜೆಡಿಎಸ್ ನಿಲುವು ಸ್ಪಷ್ಟವಾಗಿದ್ದು, ಹೊಂದಾಣಿಕೆಯ ಮೂಲಕವೇ ಚುನಾವಣೆ ಎದುರಿಸುವುದು ನಮ್ಮ ಆದ್ಯತೆ. ಈ ಸಂಬಂಧ ಈಗಾಗಲೇ ಬಿಜೆಪಿ ನಾಯಕರೊಂದಿಗೆ ಒಂದು ಸುತ್ತು ಚರ್ಚೆ ನಡೆಸಿದ್ದು, ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಹಾಸನದಲ್ಲಿ ಕೆಲವರಿಗೆ ಅಸಮಾಧಾನ ಇದ್ದರೂ, ಪಕ್ಷದ ಕೇಂದ್ರ ನಾಯಕರು ಅದನ್ನು ಸರಿಪಡಿಸಲಿದ್ದಾರೆ ಎಂದು ಹೇಳಿದರು.

ಜೆಡಿಎಸ್‌ನ 25ನೇ ವರ್ಷದ ಬೆಳ್ಳಿಹಬ್ಬದ ಅಂಗವಾಗಿ ಇದೇ ಜನವರಿ 24ರಂದು ಹಾಸನ ಜಿಲ್ಲೆಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ದೇವೇಗೌಡರ ಜನ್ಮಭೂಮಿಯಾದ ಹಾಸನದಿಂದಲೇ ಪಕ್ಷ ಸಂಘಟನೆಗೆ ಹೊಸ ಚೈತನ್ಯ ನೀಡಲಾಗುತ್ತದೆ. ಹಾಸನ ಜಿಲ್ಲೆಯ ಜನರು ದೇವೇಗೌಡರಿಗೆ ನೀಡಿದ ಶಕ್ತಿಯಿಂದಲೇ ಅವರು ರಾಷ್ಟ್ರಮಟ್ಟದ ನಾಯಕರಾದರು. ಜಿಲ್ಲೆಯ ಜನತೆ ಹಾಗೂ ಜೆಡಿಎಸ್ ನಡುವೆ ಅವಿನಾಭಾವ ಸಂಬಂಧವಿದೆ ಎಂದರು.

ಅಹಿಂದ ಸಮಾವೇಶದ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, 2023ರಿಂದ 2025ರವರೆಗೆ 1.64 ಲಕ್ಷ ಒಬಿಸಿ ಹಾಗೂ ಮುಸ್ಲಿಂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡದೆ ಸರ್ಕಾರ ವಂಚಿಸಿದೆ. ಅಹಿಂದ ಹೆಸರನ್ನು ಮುಖ್ಯಮಂತ್ರಿ ಕುರ್ಚಿ ಗಟ್ಟಿಗೊಳಿಸಿಕೊಳ್ಳಲು ಮಾತ್ರ ಬಳಸಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದರು.--ವಾಸ್ತು ಪ್ರಕಾರವೇ ಎಚ್ಡಿಕೆ ಪ್ರವೇಶ:ಯಾವುದೇ ಶುಭ ಕಾರ್ಯವಾಗಲಿ ಅಥವಾ ರಾಜಕೀಯ ಕಾರ್ಯಕ್ರಮವಾಗಲಿ, ವಾಸ್ತು ಸಂಪ್ರದಾಯಕ್ಕೆ ಹೆಚ್ಚಿನ ಮಹತ್ವ ನೀಡುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಬುಧವಾರದಂದು ಅದೇ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸಿದರು. ಶನಿವಾರ ನಗರದಲ್ಲಿ ನಡೆಯಲಿರುವ ಜೆಡಿಎಸ್ ಬೃಹತ್ ಜನತಾ ಸಮಾವೇಶದ ಸಿದ್ಧತೆಗಳನ್ನು ಪರಿಶೀಲಿಸಲು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಬುಧವಾರ ಹಾಸನಕ್ಕೆ ಆಗಮಿಸಿದ್ದರು. ಆರಂಭದಲ್ಲಿ ಕುಮಾರಸ್ವಾಮಿ ಅವರ ಕಾರು ದಕ್ಷಿಣ ದಿಕ್ಕಿನಿಂದ ವೇದಿಕೆ ಬಳಿ ಆಗಮಿಸಿತು. ಕಾರಿನಲ್ಲಿ ಕುಮಾರಸ್ವಾಮಿ ಅವರೊಂದಿಗೆ ರೇವಣ್ಣ ಇದ್ದರು. ಕಾರು ನಿಂತು ಕುಮಾರಸ್ವಾಮಿ ಇಳಿಯಲು ಸಿದ್ಧರಾಗಿದ್ದಾಗ, ತಕ್ಷಣವೇ ರೇವಣ್ಣ ಅವರು ಕಾರಿನಿಂದ ಇಳಿಯದಂತೆ ಸೂಚಿಸಿದರು. ರೇವಣ್ಣ ಅವರ ಸೂಚನೆಯಂತೆ ಕಾರು ಉತ್ತರ ದಿಕ್ಕಿಗೆ ತೆರಳಿ, ಬಳಿಕ ಈಶಾನ್ಯ ಮೂಲೆಯಿಂದ ಪ್ರವೇಶಿಸಿ ಪೂರ್ವ ದಿಕ್ಕಿನತ್ತ ಕಾರನ್ನು ನಿಲ್ಲಿಸಲಾಯಿತು. ಪೂರ್ವಾಭಿಮುಖವಾಗಿ ಕಾರು ನಿಂತ ನಂತರವೇ ಕುಮಾರಸ್ವಾಮಿ ಕಾರಿನಿಂದ ಕೆಳಗಿಳಿದರು.ವಾಸ್ತು ಪ್ರಕಾರ ಪ್ರವೇಶ ಮಾಡಿದ ನಂತರ ಕೇಂದ್ರ ಸಚಿವರು ಸಮಾವೇಶದ ವೇದಿಕೆ, ಆಸನ ವ್ಯವಸ್ಥೆ, ಭದ್ರತೆ ಹಾಗೂ ಇತರ ಸಿದ್ಧತೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು.