ಎಸ್‌ಡಿಪಿಐ ಬಳಿಕ ಬಿಜೆಪಿ ಜತೆ ಮೈತ್ರಿ: ಜೆಡಿಎಸ್‌ ನಿರುತ್ಸಾಹ!

| Published : Apr 16 2024, 01:04 AM IST

ಸಾರಾಂಶ

2014ರಲ್ಲಿ ಎಸ್‌ಡಿಪಿಐನಿಂದ ಹನೀಫ್‌ ಖಾನ್‌ ಕೊಡಾಜೆ ಸ್ಪರ್ಧಿಸಿದ್ದರು. ಆಗ ಜೆಡಿಎಸ್‌ ತನ್ನ ಅಭ್ಯರ್ಥಿಯನ್ನೇ ನಿಲ್ಲಿಸದೆ ಎಸ್‌ಡಿಪಿಐ ಪರವಾಗಿ ಪ್ರಚಾರ ಕಾರ್ಯ ನಡೆಸಿತ್ತು. ಈ ಬಾರಿ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಜತೆ ಜೆಡಿಎಸ್‌ ಮೈತ್ರಿಯಾಗಿ ಹಲವು ಸಮಯವೇ ಕಳೆದಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಇನ್ನೂ ಫೀಲ್ಡಿಗೇ ಇಳಿದಿಲ್ಲ.

ಸಂದೀಪ್‌ ವಾಗ್ಲೆ

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡದಲ್ಲಿ 2014ರ ಲೋಕಸಭೆ ಚುನಾವಣೆಯಲ್ಲಿ ಎಸ್‌ಡಿಪಿಐಗೆ ಬಹಿರಂಗ ಬೆಂಬಲ ಘೋಷಿಸಿ ಪ್ರಚಾರ ನಡೆಸಿದ್ದ ಜೆಡಿಎಸ್‌ ಪಕ್ಷ ಇದೀಗ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದು, ಜಿಲ್ಲೆಯ ಅನೇಕ ಜೆಡಿಎಸ್‌ ಮುಖಂಡರು, ಕಾರ್ಯಕರ್ತರ ಆಂತರಿಕ ನಿರುತ್ಸಾಹಕ್ಕೆ ಕಾರಣವಾಗಿದೆ. ಪರಿಣಾಮವಾಗಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರಕ್ಕೆ ಜೆಡಿಎಸ್‌ ಇನ್ನೂ ಪೂರ್ಣ ಪ್ರಮಾಣದಲ್ಲಿ ಇಳಿದಿಲ್ಲ. ಚುನಾವಣೆಗೆ ಇನ್ನು ಕೇವಲ 10 ದಿನ ಮಾತ್ರ ಬಾಕಿ ಉಳಿದಿರುವಾಗ ಪ್ರಚಾರಕ್ಕೆ ಇಳಿಯಲಿದ್ದೇವೆ ಎನ್ನುತ್ತಿದ್ದಾರೆ ಜೆಡಿಎಸ್‌ ಮುಖಂಡರು.

2014ರಲ್ಲಿ ಎಸ್‌ಡಿಪಿಐನಿಂದ ಹನೀಫ್‌ ಖಾನ್‌ ಕೊಡಾಜೆ ಸ್ಪರ್ಧಿಸಿದ್ದರು. ಆಗ ಜೆಡಿಎಸ್‌ ತನ್ನ ಅಭ್ಯರ್ಥಿಯನ್ನೇ ನಿಲ್ಲಿಸದೆ ಎಸ್‌ಡಿಪಿಐ ಪರವಾಗಿ ಪ್ರಚಾರ ಕಾರ್ಯ ನಡೆಸಿತ್ತು. ಈ ಬಾರಿ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಜತೆ ಜೆಡಿಎಸ್‌ ಮೈತ್ರಿಯಾಗಿ ಹಲವು ಸಮಯವೇ ಕಳೆದಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಇನ್ನೂ ಫೀಲ್ಡಿಗೇ ಇಳಿದಿಲ್ಲ. ಅದರಲ್ಲೂ ಜೆಡಿಎಸ್‌ ಅಲ್ಪಸಂಖ್ಯಾತ ಕಾರ್ಯಕರ್ತರು ಉತ್ಸಾಹ ತೋರುತ್ತಿಲ್ಲ.

ಆಂತರಿಕ ಪರ- ವಿರೋಧ ಅಭಿಪ್ರಾಯ:

‘ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವುದರಿಂದ ಜೆಡಿಎಸ್‌ ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಉಂಟಾಗಿಲ್ಲ. ಪಕ್ಷದ ಜಾತ್ಯತೀತ ಸಿದ್ಧಾಂತಕ್ಕೂ ಇದರಿಂದ ಧಕ್ಕೆಯಾಗಿಲ್ಲ. ಈ ಮೈತ್ರಿ ಇರೋದು ಚುನಾವಣೆಗಾಗಿ ಮಾತ್ರ, ಆದ್ದರಿಂದ ಬಿಜೆಪಿ ಜತೆ ಒಗ್ಗಟ್ಟಾಗಿ ಚುನಾವಣಾ ಪ್ರಚಾರಕ್ಕೆ ಇಳಿಯುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ’ ಎಂದು ಜೆಡಿಎಸ್‌ನ ದ.ಕ. ಲೋಕಸಭಾ ಕ್ಷೇತ್ರದ ಉಸ್ತುವಾರಿ ಎಂ.ಬಿ. ಸದಾಶಿವ ಹೇಳುತ್ತಾರೆ. ಆದರೆ ‘ಪಕ್ಷ ಹೊಂದಾಣಿಕೆ ಮಾಡಿಕೊಂಡರೂ ನಾವು ಮಾಡಲ್ಲ. ಈ ಚುನಾವಣೆಯಲ್ಲಿ ಪ್ರಚಾರಕ್ಕೆ ಇಳಿಯದೆ ತಟಸ್ಥರಾಗಿ ಉಳಿಯುತ್ತೇವೆ, ಆದರೆ ಪಕ್ಷ ಬಿಡಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಜಿಲ್ಲೆಯ ಹಿರಿಯ ಮುಖಂಡರೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಈ ನಡುವೆ, ಮಂಗಳೂರಿನಲ್ಲಿ ಭಾನುವಾರವಷ್ಟೇ ನಡೆದ ನರೇಂದ್ರ ಮೋದಿ ಅವರ ಬೃಹತ್‌ ರೋಡ್‌ ಶೋದಲ್ಲಿ ಸಾವಿರಾರು ಕೇಸರಿ ಧ್ವಜಗಳ ನಡುವೆ ಜೆಡಿಎಸ್‌ನ ಒಂದೆರಡು ಧ್ವಜಗಳು ಮಾತ್ರ ಕಾಣಿಸಿಕೊಂಡಿದ್ದವು.

ಇನ್ಮುಂದೆ ಜಂಟಿ ಕಾರ್ಯಾಚರಣೆ:

ಈಗಾಗಲೇ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜತೆ ಜಂಟಿ ಸಭೆಗಳು ನಡೆದಿವೆ. ಚುನಾವಣಾ ಪ್ರಚಾರ ಕಾರ್ಯಕ್ಕೆ ಸೇರಿಕೊಳ್ಳುವಂತೆ ನಮಗೆ ಆಹ್ವಾನ ನೀಡಿದ್ದಾರೆ. ಪಕ್ಷದ ಹೈಕಮಾಂಡ್‌ ತೀರ್ಮಾನದಂತೆ ಇನ್ಮುಂದೆ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜತೆ ಜಂಟಿಯಾಗಿ ಪ್ರಚಾರ ಕಾರ್ಯ ನಡೆಸಲಿದ್ದೇವೆ ಎಂದು ಜೆಡಿಎಸ್‌ ದ.ಕ. ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ತಿಳಿಸಿದ್ದಾರೆ.

ಬಲ ಕುಂದಿದ ಜೆಡಿಎಸ್‌:

ದ.ಕ. ಲೋಕಸಭಾ ಕ್ಷೇತ್ರದಲ್ಲಿ 1990ರ ದಶಕದವರೆಗೂ ಜೆಡಿಎಸ್‌ ಬಲಿಷ್ಠವಾಗಿದ್ದು, ಕಾಂಗ್ರೆಸ್‌- ಬಿಜೆಪಿಗೆ ಪೈಪೋಟಿ ನೀಡುತ್ತಿತ್ತು. ಕ್ರಮೇಣ ಅಸ್ತಿತ್ವ ಕಳೆದುಕೊಳ್ಳತೊಡಗಿತ್ತು. ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಅಮರನಾಥ ಶೆಟ್ಟಿ ಅವರು ಎರಡು ಬಾರಿ ಜನತಾ ಪಕ್ಷದಿಂದ ಹಾಗೂ 1 ಬಾರಿ ಜನತಾದಳದಿಂದ ಸ್ಪರ್ಧಿಸಿ ಶಾಸಕರಾಗಿದ್ದರು. ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಉಳ್ಳಾಲ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜೆಡಿಎಸ್‌ ಅಭ್ಯರ್ಥಿಗಳು ಕನಿಷ್ಠ ಮತಗಳನ್ನು (ಮಂಗಳೂರು ಉತ್ತರ ಹೊರತುಪಡಿಸಿ) ಪಡೆದಿದ್ದು, ಜಿಲ್ಲೆಯಲ್ಲಿ ಜೆಡಿಎಸ್‌ ಅಸ್ತಿತ್ವವನ್ನೇ ಪ್ರಶ್ನೆ ಮಾಡುವಂತಾಗಿತ್ತು.

ಇದೀಗ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಪ್ರಚಾರಕ್ಕೆ ಇಳಿದರೂ ಜೆಡಿಎಸ್‌ನಿಂದಾಗಿ ಬಿಜೆಪಿಗೆ ದೊಡ್ಡ ಮಟ್ಟದ ಲಾಭ ದೊರೆಯುವ ನಿರೀಕ್ಷೆ ಜನರಲ್ಲಿ ಇಲ್ಲ...................

ಹಿಂದಿನ ಚುನಾವಣೆಯಲ್ಲಿ ಎಸ್‌ಡಿಪಿಐಗೆ ಬೆಂಬಲ ನೀಡಿ ಕೆಲಸ ಮಾಡಿದ್ದು ನಿಜ. ಆಗ ನಮ್ಮನ್ನು ಕೋಮುವಾದಿ ಎಂದು ಯಾರೂ ಕರೆದಿರಲಿಲ್ಲ. ಈಗ ಬಿಜೆಪಿ ಜತೆ ಮೈತ್ರಿ ಮಾಡುವಾಗ ಕೋಮುವಾದಿ ಆಗ್ತೇವಾ? ಅದೇ ರೀತಿ ಕಾಂಗ್ರೆಸ್‌, ಕಮ್ಯೂನಿಸ್ಟ್‌ ಜತೆಗೂ ಚುನಾವಣಾ ಮೈತ್ರಿ ಮಾಡಿಕೊಂಡಿದ್ದೇವೆ. ಈಗ ಬಿಜೆಪಿ ಜತೆ ನಡೆದಿರೋದು ಚುನಾವಣಾ ಮೈತ್ರಿ ಅಷ್ಟೇ. ನಮ್ಮ ಜಾತ್ಯತೀತ ಸಿದ್ಧಾಂತ ಮುಂದುವರಿಯಲಿದೆ. ಬಿಜೆಪಿಯವರೂ ಪೂರ್ತಿ ವಿಶ್ವಾಸದಿಂದ ನಡೆಸಿಕೊಂಡಿದ್ದಾರೆ. ಬಿಜೆಪಿ ಜತೆ ಜಂಟಿಯಾಗಿ ಪ್ರಚಾರ ಕಾರ್ಯ ನಡೆಸಲಿದ್ದೇವೆ.

- ಎಂ.ಬಿ. ಸದಾಶಿವ, ಜೆಡಿಎಸ್‌ನ ದ.ಕ. ಲೋಕಸಭಾ ಚುನಾವಣಾ ಉಸ್ತುವಾರಿ