ಬಿಜೆಪಿ ಜತೆಗಿನ ಮೈತ್ರಿ ಆತ್ಮಾಹುತಿ ತೀರ್ಮಾನ

| Published : Mar 30 2024, 12:51 AM IST

ಸಾರಾಂಶ

ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದು ಆತ್ಮಾಹುತಿ ತೀರ್ಮಾನವಾಗಿದೆ. ದೇವೇಗೌಡರು ತಾವು ಜಾತ್ಯತೀತ ಎಂದು ಭಾಷಣ ಮಾಡಿದ್ದರು. ಆದರೆ ಈಗ ಅದನ್ನು ಪಾಲಿಸಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌.ರಾಜಣ್ಣ ಹೇಳಿದರು. ಅರಸೀಕೆರೆಯಲ್ಲಿ ಮಾತನಾಡಿದರು.

ಸಚಿವ ಕೆ.ಎನ್‌.ರಾಜಣ್ಣ । ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರ ಸಭೆ

ಕನ್ನಡಪ್ರಭ ವಾರ್ತೆ ಅರಸೀಕೆರೆ

ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದು ಆತ್ಮಾಹುತಿ ತೀರ್ಮಾನವಾಗಿದೆ. ದೇವೇಗೌಡರು ತಾವು ಜಾತ್ಯತೀತ ಎಂದು ಭಾಷಣ ಮಾಡಿದ್ದರು. ಆದರೆ ಈಗ ಅದನ್ನು ಪಾಲಿಸಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌.ರಾಜಣ್ಣ ಹೇಳಿದರು.

ನಗರದಲ್ಲಿ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮೋದಿ ಪ್ರಧಾನಿ ಆದರೆ ದೇಶ ಬಿಟ್ಟು ಹೋಗ್ತೀನಿ ಎಂದು ದೇವೇಗೌಡ ಹೇಳಿದ್ದರು. ಬಿಜೆಪಿ ಕೋಮುವಾದಿ ಎಂದು ಹೇಳುತ್ತಿದ್ದರು. ಆದರಿಂದು ಅವರ ಹೇಳಿಕೆಗೂ, ನಡವಳಿಕೆಗೂ ವ್ಯತ್ಯಾಸ ಇರುವುದನ್ನು ವಿದ್ಯಾವಂತ, ಪ್ರಬುದ್ಧ ಜನ ಅರ್ಥ ಮಾಡಿಕೊಳ್ಳುತ್ತಾರೆ. ಸರಿಯಾದ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ಕಾಂಗ್ರೆಸ್‌ನಿಂದ ಸಚಿವರ ಕುಟುಂಬದವರಿಗೆ ಟಿಕೆಟ್ ನೀಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಈಗ ಅದೆಲ್ಲಾ ಮಾಮೂಲಿ ಆಗಿದೆ. ಎಲ್ಲಾ ಪಕ್ಷದಲ್ಲೂ ಕೊಟ್ಟಿದ್ದಾರೆ, ಕಾಂಗ್ರೆಸ್ ವಿರುದ್ಧ ಮಾತ್ರ ಆಕ್ಷೇಪಣೆ ಏಕೆ?. ಜನ ಯಾರ ಪರ ಇದ್ದಾರೆ ಎನ್ನುವುದನ್ನು ತಿಳಿದು ಟಿಕೆಟ್ ಕೊಟ್ಟಿದ್ದಾರೆ. ಅದನ್ನು ಟೀಕೆ ಮಾಡುವುದನ್ನು ಸರಿಯಲ್ಲ ಎಂದು ಸಮರ್ಥಿಸಿಕೊಂಡರು.

ಪ್ರೀತಂ ಉತ್ತಮ ನಿರ್ಧಾರ ವಿಶ್ವಾಸ:

ಪ್ರೀತಂಗೌಡ ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡಲು ನಿರ್ಧಾರ ಮಾಡದೇ ಇರುವ ಕುರಿತು ಉತ್ತರಿಸಿ, ‘ಅವರೊಬ್ಬ ಪ್ರಬುದ್ಧ ರಾಜಕಾರಣಿ. ಶಾಸಕರಾಗಿ ಹೋರಾಟದಲ್ಲಿ ಬಂದವರು, ಅವರಿಗೂ ಸ್ಥಳೀಯವಾಗಿ ಅಳಿವು, ಉಳಿವಿನ ಪ್ರಶ್ನೆ ಇರುತ್ತದೆ. ಉತ್ತಮವಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ನಮ್ಮ ನಿರೀಕ್ಷೆ’ ಎಂದರು.

ಡಿಸಿ ವಿರುದ್ಧ ದೇವೇಗೌಡರ ಆರೋಪ ಸತ್ಯಕ್ಕೆ ದೂರ:

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಜಿಲ್ಲಾಧಿಕಾರಿ ಸಿ.ಸತ್ಯಭಾಮ ವಿರುದ್ಧ ಮಾಡಿರುವ ಆರೋಪ ಖಂಡನೀಯ ಎಂದು ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ದೇವೇಗೌಡರು ಹಲವು ಆರೋಪ ಹೊರಿಸಿ, ಅವರನ್ನು ವರ್ಗಾವಣೆ ಮಾಡಬೇಕು ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಪತ್ರ ಬರೆಯುವುದು ಅವರಿಗೆ ಬಿಟ್ಟದ್ದು, ಆದರೆ ಆರೋಪ ಮಾಡಿರುವುದನ್ನು ಖಂಡಿಸುತ್ತೇನೆ. ಸರ್ಕಾರಿ ನೌಕರರು ಸದಭಿಪ್ರಾಯ ಹೊಂದಿರುತ್ತಾರೆ. ಒಂದು ಪಕ್ಷದ ಬಗ್ಗೆ ಒಬ್ಬೊಬ್ಬರು ಅಭಿಪ್ರಾಯ ಇಟ್ಟುಕೊಂಡಿರುತ್ತಾರೆ. ಆದರೆ ಒಬ್ಬ ಅಧಿಕಾರಿ ಮೇಲೆ ಸುಳ್ಳು ಆರೋಪ ಮಾಡಿರುವುದನ್ನು ಖಂಡಿಸುತ್ತೇನೆ ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿದರು.