ತೋಟಗಾರರ ಸೇವಾ ಸಮಿತಿ ವತಿಯಿಂದ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಶ್ರೀಪಾದ ಹೆಗಡೆ ಇನ್‌ಸ್ಟಿಟ್ಯೂಟ್‌ ಆಫ್‌ ಅಲೈಡ್‌ ಹೆಲ್ತ್‌ ಸೈನ್ಸಸ್‌ ಕಾಲೇಜನ್ನು ಪ್ರಾರಂಭಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ತಿಳಿಸಿದರು.

ಶಿರಸಿ: ಪ್ರತಿಷ್ಠಿತ ತೋಟಗಾರರ ಸೇವಾ ಸಮಿತಿ ವತಿಯಿಂದ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಶ್ರೀಪಾದ ಹೆಗಡೆ ಇನ್‌ಸ್ಟಿಟ್ಯೂಟ್‌ ಆಫ್‌ ಅಲೈಡ್‌ ಹೆಲ್ತ್‌ ಸೈನ್ಸಸ್‌ ಕಾಲೇಜನ್ನು ಪ್ರಾರಂಭಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ತಿಳಿಸಿದರು.

ಶುಕ್ರವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ತೋಟಗಾರರ ಸೇವಾ ಸಮಿತಿ ಈಗಾಗಲೇ ಪ್ಯಾರಾಮೆಡಿಕಲ್ ಡಿಪ್ಲೊಮಾ ಕಾಲೇಜನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಈಗ ಪದವಿ ಶಿಕ್ಷಣಕ್ಕೆ ಒತ್ತು ನೀಡುವ “ಶ್ರೀಪಾದ ಹೆಗಡೆ ಕಡವೆ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್” ಕಾಲೇಜನ್ನು ಸ್ಥಾಪನೆ ಮಾಡಲಾಗುತ್ತಿದೆ. ಈ ಕೋರ್ಸ್‌ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಶಿರಸಿಯಲ್ಲಿ ಪ್ರಾರಂಭವಾಗುತ್ತಿದೆ ಎಂದರು.

15 ವರ್ಷಗಳಿಂದ ಪ್ಯಾರಾಮೆಡಿಕಲ್ ಕಾಲೇಜು ನಡೆಯುತ್ತಿದ್ದು, ಇಲ್ಲಿಯವರೆಗೆ 650ಕ್ಕೂ ಹೆಚ್ಚು ವಿದ್ಯಾರ್ಥಿಗಳು ಡಿಪ್ಲೊಮಾ ಕೋರ್ಸ್‌ ಪೂರ್ಣಗೊಳಿಸಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಉನ್ನತ ಶೈಕ್ಷಣಿಕ ಸಾಧನೆ ಮಾಡಿದ್ದು, 5 ರಾಜ್ಯ ಮಟ್ಟದ ರ‍್ಯಾಂಕ್‌ ಪಡೆದಿರುವುದು ಸಂಸ್ಥೆಯ ಶಿಕ್ಷಣದ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ ಎಂದರು.

ವೈದ್ಯಕೀಯ ಶಿಕ್ಷಣದ ಡೀನ್‌ ಡಾ. ಪಿ.ಎಸ್‌. ಹೆಗಡೆ ಅಜ್ಜೀಬಳ ಮಾತನಾಡಿ, ಸಂಸ್ಥೆಯಲ್ಲಿ ಆರಂಭವಾಗುತ್ತಿರುವ ಬಿಎಸ್‌ಸಿ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಆರೋಗ್ಯ ಶಿಕ್ಷಣಕ್ಕೆ ನೂತನ ಮೌಲ್ಯಗಳನ್ನು ತರುವುದು. ಇದೊಂದು ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಂತ ಬೇಡಿಕೆಯಲ್ಲಿರುವ ವಿಭಾಗವಾಗಿದೆ. ವೈದ್ಯರೊಂದಿಗೆ ಕೆಲಸ ಮಾಡುವ, ರೋಗ ನಿರ್ಣಯ, ಚಿಕಿತ್ಸಾ ಸಹಾಯ, ತಾಂತ್ರಿಕ ಸೇವೆಗಳು ಮತ್ತು ಆಸ್ಪತ್ರೆಗಳ ನಿರ್ವಹಣೆ ನೆರವೇರಿಸುವ ಅತ್ಯಂತ ಮುಖ್ಯ ವೃತ್ತಿಪರರನ್ನು ತಯಾರಿಸುವ ಶಿಕ್ಷಣ ಇದಾಗಿದೆ. ರಕ್ತ ಪರೀಕ್ಷೆ, ಎಕ್ಸ್‌-ರೆ, ಸಿಟಿ ಸ್ಕಾನ್, ಎಂಆರ್‌ಐ, ಒಟಿ ಹಾಗೂ ಅನಸ್ತೇಶಿಯಾ ಸಹಾಯ ಹಾಗೂ ಆಸ್ಪತ್ರೆಯ ನಿರ್ವಹಣಾ ವಿಭಾಗ ನಿರ್ವಹಿಸಲು ಅಲೈಡ್ ಹೆಲ್ತ್ ಸೈನ್ಸಸ್ ಇಲ್ಲದೇ ಸಾಧ್ಯವಿಲ್ಲ. ಈ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಸಹ ಅವಕಾಶವಿದೆ. ಮಾಸ್ಟರ್ ಡಿಗ್ರಿಗಳಾದ ಎಂಎಸ್‌ಸಿ, ಎಂಪಿಎಚ್‌, ಎಂಬಿಎ ಹಾಗೂ ಎಂಎಚ್‌ಎ ಪದವಿಗಳು, ಪದವಿ ನಂತರದ ಡಿಪ್ಲೊಮಾ ಕೋರ್ಸಗಳು ಹಾಗೂ ಪಿಎಚ್‌ಡಿಗಳ ಮೂಲಕ ತಮ್ಮ ವೃತ್ತಿ ಮೌಲ್ಯ ಹೆಚ್ಚಿಸಿಕೊಳ್ಳಬಹುದು ಎಂದರು.

ಉಪಾಧ್ಯಕ್ಷ ಎಂ.ವಿ. ಜೋಶಿ ಕಾಗೇರಿ, ಕೋಶಾಧಿಕಾರಿ ಎಂ.ಪಿ. ಹೆಗಡೆ ಬಪ್ಪನಳ್ಳಿ, ಕಾರ್ಯದರ್ಶಿ ಎಚ್‌.ಎನ್. ಹೆಗಡೆ ಬಾಳೆತೋಟ, ಉಪಸಮಿತಿಯ ಸದಸ್ಯ ನಿರಂಜನ ಭಟ್ಟ ಹೊಸತೋಟ, ಅಲೈಡ್ ಹೆಲ್ತ್ ಸೈನ್ಸಸ್‌ ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ. ಜ್ಞಾನಪ್ರಕಾಶ ಬಿ. ಕಾರಂತ, ವೈದ್ಯಕೀಯ ಅಧೀಕ್ಷಕ ಡಾ. ಗೌತಮ ಶೇಟ್ ಹಾಗೂ ಆಸ್ಪತ್ರೆಯ ಆಡಳಿತ ವಿಭಾಗದವರು ಇದ್ದರು.ನೇರ ಪ್ರವೇಶ

ಬಿಎಸ್‌ಸಿ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜಿಗೆ ಸೇರ್ಪಡೆಗೊಳ್ಳುವವರಿಗೆ ಯಾವುದೇ ಪ್ರವೇಶ ಪರೀಕ್ಷೆ ಇಲ್ಲ. ನೇರ ಪ್ರವೇಶ ನೀಡಲಾಗುತ್ತದೆ. ಪಿಯುಸಿ ತೇರ್ಗಡೆಗೊಂಡ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 9113294205 ಈ ನಂಬರ್‌, (E-mail - tssahscollege@gmail.com) ಸಂಪರ್ಕಿಸಿ ಅಥವಾ ಟಿಎಸ್ಎಸ್ ಆಸ್ಪತ್ರೆಯಲ್ಲಿರುವ ವೈದ್ಯಕೀಯ ಕಾಲೇಜನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯವರು ಮಾಹಿತಿ ನೀಡಿದರು.ದಾನಿಗಳ ಸಹಾಯ

ನೂತನ ಕೋರ್ಸ್‌ ಜ. 1ರಿಂದ ಪ್ರಾರಂಭಗೊಳ್ಳಲಿದೆ. 3 ವರ್ಷದ ಕೋರ್ಸ್ ಇದಾಗಿದ್ದು, ಸುಮಾರು ₹4.5 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ದಾನಿಗಳು ಸಹಕಾರ ನೀಡಿದ್ದು, ಇನ್ನೂ ದಾನಿಗಳ ಸಹಾಯ ಅವಶ್ಯವಿದೆ. ಒಂದೊಂದು ವಿಭಾಗದಲ್ಲಿ 20 ವಿದ್ಯಾರ್ಥಿಗಳಂತೆ ಒಟ್ಟೂ 80 ವಿದ್ಯಾರ್ಥಿಗಳಿಗೆ ಅವಕಾಶ ಇರಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹೇಳಿದ್ದಾರೆ.ಲಭ್ಯವಿರುವ ಕೋರ್ಸ್‌ಗಳು

ಬಿಎಸ್‌ಸಿ- ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ

ಬಿಎಸ್‌ಸಿ - ಮೆಡಿಕಲ್ ಇಮೆಜಿಂಗ್ ಟೆಕ್ನಾಲಜಿ

ಬಿಎಸ್‌ಸಿ - ಅನಸ್ತೇಶಿಯಾ ಮತ್ತು ಒಪರೇಷನ್ ಥಿಯೇಟರ್‌ ಟೆಕ್ನಾಲಜಿ

ಬಿಎಚ್‌ಎ- ಬ್ಯಾಚುಲರ್ ಆಫ್‌ ಹಾಸ್ಪಿಟಲ್ ಎಡ್ಮಿನಿಸ್ಟ್ರೆಷನ್