ಸಾರಿಗೆ ಮಂಡಳಿಗೆ ₹1 ಸಾವಿರ ಕೋಟಿ ಮೀಸಲಿಡಿ

| Published : Dec 27 2024, 12:46 AM IST

ಸಾರಾಂಶ

ಸಾರಿಗೆ ಕಾರ್ಮಿಕರ ಕಲ್ಯಾಣ ಮಂಡಳಿಗೆ ಬಜೆಟ್‌ನಲ್ಲಿ ₹1 ಸಾವಿರ ಕೋಟಿ ಮೀಸಲಿಡಬೇಕು, ಮೋಟಾರ್ ಕ್ಯಾಬ್ ಮತ್ತು ಮ್ಯಾಕ್ಸಿ ಕ್ಯಾಬ್‌ ವಾಹನಗಳಲ್ಲಿ ಪ್ಯಾನಿಕ್ ಬಟನ್ ಅಳವಡಿಸಲು ಮಾಡಿದ ಆದೇಶ ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಶೀಘ್ರ ಈಡೇರಿಸುವಂತೆ ಆಲ್ ಇಂಡಿಯಾ ಟ್ರಾನ್ಸ್‌ಪೋರ್ಟ್‌ ವರ್ಕರ್ಸ್‌ ಫೆಡರೇಷನ್ ಒತ್ತಾಯಿಸಿದೆ.

- ಬಿಎನ್‌ಎಸ್‌ ಕಾಯ್ದೆ ಜಾರಿ ಸರಿಯಾದ ಕ್ರಮವಲ್ಲ: ಕಾರ್ಯದರ್ಶಿ ಕುಪ್ಪುಸ್ವಾಮಿ ಹೇಳಿಕೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಸಾರಿಗೆ ಕಾರ್ಮಿಕರ ಕಲ್ಯಾಣ ಮಂಡಳಿಗೆ ಬಜೆಟ್‌ನಲ್ಲಿ ₹1 ಸಾವಿರ ಕೋಟಿ ಮೀಸಲಿಡಬೇಕು, ಮೋಟಾರ್ ಕ್ಯಾಬ್ ಮತ್ತು ಮ್ಯಾಕ್ಸಿ ಕ್ಯಾಬ್‌ ವಾಹನಗಳಲ್ಲಿ ಪ್ಯಾನಿಕ್ ಬಟನ್ ಅಳವಡಿಸಲು ಮಾಡಿದ ಆದೇಶ ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಶೀಘ್ರ ಈಡೇರಿಸುವಂತೆ ಆಲ್ ಇಂಡಿಯಾ ಟ್ರಾನ್ಸ್‌ಪೋರ್ಟ್‌ ವರ್ಕರ್ಸ್‌ ಫೆಡರೇಷನ್ ಒತ್ತಾಯಿಸಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೆಡರೇಷನ್ ಕೇಂದ್ರ ಸಮಿತಿ ಕಾರ್ಯದರ್ಶಿ ಕುಪ್ಪುಸ್ವಾಮಿ ಅವರು, ರಾಜ್ಯದಲ್ಲಿ 8 ಲಕ್ಷಕ್ಕೂ ಅಧಿಕ ಮೋಟಾರ್‌ ಕ್ಯಾಬ್‌ ವಾಹನಗಳಿವೆ. ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್, ಜಿಪಿಎಸ್‌, ಪ್ಯಾನಿಕ್ ಬಟನ್ ಅಳವಡಿಸಲು ಸರ್ಕಾರ ಆದೇಶಿಸಿದೆ. ಸಾಕಷ್ಟು ಆರ್ಥಿಕ ಹೊರೆಯೂ ತಂದಿಟ್ಟಿದೆ. ಪ್ಯಾನಿಕ್ ಬಟನ್ ಅಳವಡಿಸಲು ₹15,500 ದಿಂದ ₹17,500 ವರೆಗೆ ಸಂಬಂಧಿಸಿದವರು ಪಡೆಯುತ್ತಿದ್ದಾರೆ. ಸಾರಿಗೆ ಇಲಾಖೆ ಸ್ಟೇಜ್ ಕ್ಯಾರೇಜ್ ಪರ್ಮಿಟ್‌, ಸಿಸಿ ಪರ್ಮಿಟ್‌, ಅಖಿಲ ಭಾರತ ಪರ್ಮಿಟ್ ಹೊಂದಿರುವ ಲಾರಿಗಳ ಜೊತೆಗೆ ಸರ್ಕಾರಿ ಜಿ ಕೆಟಗರಿ ವಾಹನಗಳು ಮತ್ತು ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ವಿನಾಯಿತಿ ನೀಡಿದ್ದು, ನಮಗೂ ವಿನಾಯಿತಿ ನೀಡಿ, ಸರ್ಕಾರ ಆದೇಶ ಹಿಂಪಡೆಯಬೇಕು ಎಂದರು.

ರಸ್ತೆ ಸಾರಿಗೆ ಚಾಲಕರನ್ನು ಅಮಾನುಷವಾಗಿ ಶಿಕ್ಷಿಸುವ ಕ್ರಮದ (ಬಿಎನ್ಎಸ್) ನೂತನ ಕಾಯ್ದೆ ಜಾರಿಗೆ ಸರ್ಕಾರ ಮುಂದಾಗಿದ್ದು ಸರಿಯಲ್ಲ. ಈಗ ಅಂಗೀಕರಿಸಿರುವ ಸಂಹಿತೆಗಳನ್ನು ಒಳಗೊಂಡು ಈವರೆಗೆ ಹಿಟ್ ಅಂಡ್ ರನ್‌ ಎಂಬುದಾಗಿ ಯಾವುದೇ ಕ್ರಿಮಿನಲ್ ಕಾನೂನುಗಳ ವ್ಯಾಪ್ತಿಯಲ್ಲಿ ಇರಲಿಲ್ಲ. ಈಗ ಚಾಲಕನ ದುಡುಕಿನ ಅಜಾಗರೂಕತೆಯ ಚಾಲನೆಯಿಂದಾಗಿ ವ್ಯಕ್ತಿ ಮರಣ ಹೊಂದಿದರೆ, ಕಠಿಣ ಶಿಕ್ಷೆ ವಿಧಿಸುವಂತೆ ಕಾನೂನು ಮಾಡಲಾಗಿದ್ದು, ಶೀಘ್ರ ಹಿಂಪಡೆಯಬೇಕು ಎಂದರು.

ರಾಜ್ಯ ಸರ್ಕಾರ ಸಾರಿಗೆ ಕಾರ್ಮಿಕರ ಕಲ್ಯಾಣ ಮಂಡಳಿಗೆ ಬಜೆಟ್‌ನಲ್ಲಿ ಹಣ ಮೀಸಲಿಡದೇ ಕಡೆಗಣಿಸುತ್ತಿದೆ. ಕನಿಷ್ಠ ಚಾಲಕರ ಮಕ್ಕಳ ಶಿಕ್ಷಣಕ್ಕೆ ಸಹಾಯಧನ ನೀಡುವ, ಸೌಲಭ್ಯ ಕಲ್ಪಿಸುವ ಯೋಜನೆಗಳನ್ನಾದರೂ ಜಾರಿಗೊಳಿಸಲಿ. ದುಬಾರಿ ದಂಡ, ದುಬಾರಿ ಶುಲ್ಕ ವಿಧಿಸುವ ಮೋಟಾರ್ ವಾಹನಗಳ ತಿದ್ದುಪಡಿಗಳ ಕಾಯ್ದೆ 2019 ಅನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಸಂಘಟನೆ ಮುಖಂಡರಾದ ಕೆ.ಎಚ್. ಆನಂದರಾಜು, ಬಿ.ವಿ. ರಾಘವೇಂದ್ರ, ಕೆ.ಎಂ.ಸಂತೋಷ, ಸಿ.ಎನ್.ಶ್ರೀನಿವಾಸ, ಕೆ.ಶ್ರೀನಿವಾಸಮೂರ್ತಿ, ಜಾವಿದ್ ಅಹಮದ್, ರಾಜು ದೇವಾಡಿಗ ಇತರರು ಇದ್ದರು. - - -

* ಬೇಡಿಕೆಗಳೇನೇನು? - ಖಾಸಗಿ ಓಲ, ಊಬರ್‌, ರ್ಯಾಪಿರ್ಡ್‌ಗಳನ್ನು ವಾಹನ ಸೇವೆ ನಿಲ್ಲಿಸಬೇಕು

- ವಾಹನ ಮಾಲೀಕ- ಚಾಲಕರಿಗೆ ಅನುಕೂಲ ಆಗುವಂತೆ ಕೇರಳ ಮಾದರಿಯಲ್ಲಿ ಸರ್ಕಾರದ ಆ್ಯಪ್ ಜಾರಿಗೆ ತರಬೇಕು

- ಪೆಟ್ರೋಲ್, ಡೀಸೆಲ್, ಗ್ಯಾಸ್ ಮೇಲಿನ ತೆರಿಗೆ ಕಡಿಮೆ ಮಾಡಬೇಕು

- 15 ವರ್ಷ ಹಳೇ ವಾಹನಗಳ ನಿಷೇಧ ಕಾಯಿದೆ ವಾಪಸ್‌ ಪಡೆಯಬೇಕು

- ಸಾರಿಗೆ ವಾಹನಗಳ ಇನ್ಶೂರೆನ್ಸ್ ಪಾಲಿಸಿಗಳ ಮೇಲೆ ವಿಧಿಸಿರುವ ಸೆಸ್ ಮತ್ತು ಜಿಎಸ್‌ಟಿ ಹಿಂಪಡೆಯಬೇಕು

- ಸರ್ವರಿಗೂ ಸೂರು ಎಂಬ ಸರ್ಕಾರದ ಆಶಯ ಜಾರಿಗೊಳಿಸಲು ಸಾರಥಿ ಸೂರು ಯೋಜನೆ ಜಾರಿಗೊಳಿಸಬೇಕು

- ಹೊಸ ವಾಹನಗಳ ಮೇಲಿನ ಸರ್ಕಾರದ ಮಾರಾಟ ತೆರಿಗೆ ಶೇ.28ರಿಂದ ಶೇ.5ಕ್ಕೆ ಇಳಿಸಬೇಕು

- ವಾಹನಗಳ ಚಾಲಕರಿಗೆ ಕಲ್ಯಾಣ ಯೋಜನೆ ಜಾರಿಗೊಳಿಸಬೇಕು

- - - ಕೋಟ್‌ದಾವಣಗೆರೆ ಮತ್ತು ಹರಿಹರದಲ್ಲಿ ಸಿಐಟಿಯು ಸಂಘದ ಕಚೇರಿಗಳಲ್ಲಿ ಸಾರಿಗೆ ನೌಕರರನ್ನು ಕಲ್ಯಾಣ ಮಂಡಳಿಯಲ್ಲಿ ನೋಂದಣೆ ಮಾಡುತ್ತಿದ್ದು, ಎಲ್ಲ ಸಾರಿಗೆ ನೌಕರರು ಪ್ರಯೋಜನ ಪಡೆದುಕೊಳ್ಳಬೇಕು

- ಕುಪ್ಪುಸ್ವಾಮಿ, ಕಾರ್ಯದರ್ಶಿ

- - -

-25ಕೆಡಿವಿಜಿ3.ಜೆಪಿಜಿ:

ದಾವಣಗೆರೆಯಲ್ಲಿ ಬುಧವಾರ ಆಲ್ ಇಂಡಿಯಾ ಟ್ರಾನ್ಸ್‌ಪೋರ್ಟ್‌ ವರ್ಕರ್ಸ್‌ ಫೆಡರೇಷನ್ ಕುಪ್ಪುಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.